ರೈತರ ಮೊಗದಲ್ಲಿ ಮುಗುಳ್ನಗೆ ತಂದ ನಮ್ಮ ಹೆಮ್ಮೆಯ ಮಹಿಳಾ ವಿಜ್ಞಾನಿಗಳಿವರು

Update: 2017-04-27 10:08 GMT

ದೇಶಾದ್ಯಂತ ವೈವಿಧ್ಯಮಯ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಮಧುರವಾದ ತಿರುಳನ್ನು ಹೊಂದಿರುವ ಸೀತಾಫಲ, ಮೂರು ವೈರಸ್‌ಗಳ ವಿರುದ್ಧ ಪ್ರತಿರೋಧ ಶಕ್ತಿ ಹೊಂದಿರುವ ಮತ್ತು ಕೋಣೆಯ ತಾಪಮಾನದಲ್ಲಿ 15ದಿನಗಳ ಕಾಲ ಇಟ್ಟರೂ ಕೆಡದ ಟೊಮೆಟೊ, ಚಪ್ಪಟೆ ಗೊರಟು ಮತ್ತು ಹೆಚ್ಚು ಪ್ರಮಾಣದಲ್ಲಿ ತಿರುಳು ಹೊಂದಿರುವ ಮಾವಿನ ಮಾದರಿ, ಸಾಮಾನ್ಯ ಉಷ್ಣತೆಯಲ್ಲಿ ಹಲವು ದಿನಗಳ ಕಾಲ ತಾಜಾ ಆಗಿಯೇ ಇರುವ ಮತ್ತು ಹೆಚ್ಚು ಸಿಹಿಯಾಗಿರುವ ಹಲವಾರು ಕಸಿ ಮಾವಿನಹಣ್ಣುಗಳನ್ನು ನಮ್ಮ ರೈತರು ಬೆಳೆಯುತ್ತಿದ್ದಾರೆ.

ಕಳೆದ ಐದು ದಶಕಗಳಲ್ಲಿ ಈ ಎಲ್ಲ ಹೈಬ್ರಿಡ್ ಮಾದರಿಗಳನ್ನು ಅಭಿವೃದ್ಧಿಗೊಳಿಸಿದ್ದು ಬೆಂಗಳೂರಿನಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್)ಯ ಕೃಷಿ ವಿಜ್ಞಾನಿಗಳು ಮತ್ತು ಇವರ ಪೈಕಿ ಹೆಚ್ಚಿನವರು ಮಹಿಳೆಯರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಆಹಾರ ಧಾನ್ಯಗಳ ಇಳುವರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಇಲ್ಲಿಯ ವಿಜ್ಞಾನಿಗಳ ಸಾಧನೆಯೇನೂ ಕಡಿಮೆಯಿಲ್ಲ.

 1967ರಲ್ಲಿ ದಿಲ್ಲಿಯಲ್ಲಿ ಸ್ಥಾಪನೆಗೊಂಡಿದ್ದ ಐಐಎಚ್‌ಆರ್‌ನ್ನು 1968ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಈ ವರ್ಷ ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.

 ಬೆಳೆ ಇಳುವರಿಯನ್ನು ಹೆಚ್ಚಿಸಲು ನೆರವಾದ ಸಂಶೋಧನೆಗಳಿಗೆ ತಮ್ಮ ಕೊಡುಗೆಯನ್ನು ಸಲ್ಲಿಸುವ ಮೂಲಕ ನಮ್ಮ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಇಲ್ಲಿಯ ಕೆಲವು ಮಹಿಳಾ ವಿಜ್ಞಾನಿಗಳ ಕುರಿತಂತೆ ಒಂದು ಕಿರುನೋಟವಿಲ್ಲಿದೆ.

ಕಮಲಾ ಜಯಂತಿ

 ಕೀಟಶಾಸ್ತ್ರ ಮತ್ತು ಸೂತ್ರಕ್ರಿಮಿ ವಿಜ್ಞಾನ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿರುವ ಜಯಂತಿಯವರು ಸಮಗ್ರ ಕೀಟ ನಿರ್ವಹಣೆ ಮತ್ತು ರಾಸಾಯನಿಕ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳು ಹಣ್ಣುಗಳನ್ನು ಕಾಡುವ ಸಾಮಾನ್ಯ ಕ್ರಿಮಿ-ಕೀಟಗಳನ್ನು ನಿವಾರಿಸಲು ಅಹಿಂಸಾತ್ಮಕ ವಿಧಾನವನ್ನು ಅಭಿವೃದ್ಧಿಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ. ನೊಣಗಳ ಕಾಟ ಮಾವಿನ ಬೆಳೆಯನ್ನು ಕಾಡುವ ಪ್ರಮುಖ ಸಮಸ್ಯೆಯಾಗಿದೆ. ಇದೇ ಕಾರಣದಿಂದ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಮಾವನ್ನು ಈ ದೇಶದಲ್ಲಿ ಬೆಳೆಯಲಾಗುತ್ತಿದ್ದರೂ ನಮ್ಮ ರಫ್ತು ಪ್ರಮಾಣ ಮಾತ್ರ ಶೇ.10ನ್ನು ದಾಟಿಲ್ಲ ಎನ್ನುತ್ತಾರೆ ಜಯಂತಿ

ಮಾವಿನ ಹಣ್ಣುಗಳಲ್ಲಿರುವ ಗಾಮಾ-ಒಕ್ಟಾಲ್ಯಾಕ್ಟೋನ್ ಎಂಬ ರಾಸಾಯನಿಕದಿಂದ ಆಕರ್ಷಿತಗೊಳ್ಳುವ ನೊಣಗಳು ಹಣ್ಣುಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ ಮತ್ತು ಈ ಮೊಟ್ಟೆಗಳು ಬಳಿಕ ಮರಿಹುಳುಗಳಾಗಿ ಮಾವಿನ ತಿರುಳನ್ನು ತಿಂದು ಬದುಕುತ್ತವೆ ಮತ್ತು ಅವು ಕೆಡುವಂತೆ ಮಾಡುತ್ತವೆ ಎನ್ನುವುದನ್ನು ಜಯಂತಿ ಮತ್ತು ಅವರ ತಂಡವು ಪತ್ತೆ ಹಚ್ಚಿತ್ತು. ಅವರು ಸಿದ್ಧಪಡಿಸಿರುವ ಆರ್ಲಾ ಡೊರ್ಸೊಲ್ಯೂರ್ ಎಂಬ ದ್ರಾವಣ ಈ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದೆ. ಶೀಘ್ರವೇ ಇದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ರೇಷ್ಮೆ ಹುಳಗಳು ಹೆಚ್ಚು ಮೊಟ್ಟೆಗಳನ್ನಿಡುವಂತೆ ಮಾಡಲು ಅರ್ಕ್ ಎಗ್‌ಸ್ಟ್ರಾ ಎಂಬ ರಾಸಾಯನಿಕವನ್ನೂ ಅವರ ತಂಡವು ಅಭಿವೃದ್ಧಿಗೊಳಿಸಿದೆ.

ಮಾಧವಿ ರೆಡ್ಡಿ

ಭಾರತದಲ್ಲಿ ಇಂದು ಮೆಣಸು ಬಳಕೆಯಾಗದ ಆಹಾರವನ್ನು ಊಹಿಸಿಕೊಳ್ಳುವುದೂ ಕಷ್ಟ. ತರಕಾರಿ ಬೆಳೆಗಳ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿರುವ ಮಾಧವಿ ಹೆಚ್ಚಿನ ಖಾರ ಹೊಂದಿರುವ ಮತ್ತು ಉತ್ತಮ ಗುಣಮಟ್ಟದ ಮೆಣಸಿನ ತಳಿಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಬೂಸ್ಟು,ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಪ್ರತಿರೋಧ ಶಕ್ತಿ ಹೊಂದಿರುವ ಹಲವಾರು ಮೆಣಸಿನ ತಳಿಗಳನ್ನು ಮಾಧವಿ ಮತ್ತು ಅವರ ತಂಡ ಅಭಿವೃದ್ಧಿಗೊಳಿಸಿದೆ. ಅಧಿಕ ಇಳುವರಿ ನೀಡುವ ನಾಲ್ಕು ಮೆಣಸಿನ ತಳಿಗಳನ್ನೂ ಅಭಿವೃದ್ಧಿಗೊಳಿಸಿರುವ ಅವರು ಕರ್ನಾಟಕದ ಬ್ಯಾಡಗಿ ಮೆಣಸಿನ ಕೆಲವು ತಳಿಗಳ ಗುಣಮಟ್ಟ ಸುಧಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದೀಗ ಕಡಿಮೆ ನೀರನ್ನು ಬಳಸಿ ಮೆಣಸಿನ ಕೃಷಿಯನ್ನು ಸಾಧ್ಯವಾಗಿಸುವ ನಿಟ್ಟನಲ್ಲಿ ಮಾಧವಿ ಮತ್ತು ಅವರ ತಂಡ ಶ್ರಮಿಸುತ್ತಿದೆ.

ರೇಖಾ ಎ.

ಹಣ್ಣುಗಳ ಕೃಷಿ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿರುವ ರೇಖಾ ಎ. ವಂಶವಾಹಿಗಳ ಸಂಕೇತಗಳ ಮೂಲಕ ಬಾಳೆಯ ವಿಶಿಷ್ಟ ಲಕ್ಷಣಗಳನ್ನು ಗುರುತಿಸುವಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಏಲಕ್ಕಿ ಮತ್ತು ರಸದಾಳಿ ಬಾಳೆಹಣ್ಣುಗಳನ್ನು ಕಾಡುವ ಸಾಮಾನ್ಯ ಬೂಷ್ಟಿನ ವಿರುದ್ಧ ಪ್ರತಿರೋಧಕ ಶಕ್ತಿಯುಳ್ಳ ಬಾಳೆಯ ಮಾದರಿಯನ್ನು ಅವರೀಗ ಅಭಿವೃದ್ಧಿಗೊಳಿಸುತ್ತಿದ್ದಾರೆ.

ಬಾಳೆ ಸಂತಾನಶಕ್ತಿಯಿಲ್ಲದ, ಬೀಜಗಳಿಲ್ಲದ ಹಣ್ಣಾಗಿರುವುದರಿಂದ ಸಾಂಪ್ರದಾಯಿಕ ಪದ್ಧತಿಗಳ ಮೂಲಕ ಅದರ ಮಾದರಿಗಳನ್ನು ಅಭಿವೃದ್ಧಿಗೊಳಿಸುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ರೇಖಾ.

ಅವರ ತಂಡವು ಐಐಎಚ್‌ಆರ್‌ಎಸ್-63 ಹೆಸರಿನ ಸಪೋಟಾ ಹಣ್ಣಿನ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ. ದುಂಡನೆಯ ಹಣ್ಣುಗಳನ್ನು ಬಿಡುವ ಕುಬ್ಜ ಮರವಾಗಿ ಬೆಳೆಯುವ ಇದನ್ನು ಇತರ ಗಿಡಗಳ ಸಮೀಪವೇ ನೆಡಬಹುದಾಗಿದೆ. ರೋಗ ನಿರೋಧಕ ಶಕ್ತಿ ಹೊಂದಿರುವ ‘ರಸರಾಜ’ ಹೆಸರಿನ ಲಿಂಬೆ ತಳಿಯನ್ನೂ ಅವರು ಅಭಿವೃದ್ಧಿಗೊಳಿಸಿದ್ದಾರೆ.

ಮೀರಾ ಪಾಂಡೆ

 ಸಂಸ್ಥೆಯ ಅಣಬೆ ಸಂಶೋಧನಾ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿರುವ ಮೀರಾ ಭಾರತದಲ್ಲಿ ಲಭ್ಯವಿರುವ ಅಣಬೆಗಳ ಬಗ್ಗೆ ಜಾಗ್ರತಿಯನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 30 ವರ್ಷಗಳ ಹಿಂದೆ ಅವರು ಸಂಸ್ಥೆಗೆ ಸೇರಿದಾಗ ಬಟನ್ ಅಣಬೆಗಳ ಮಾತ್ರ ಗೊತ್ತಿತ್ತು. ಅಣಬೆಗಳ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಿರುವ ಮೀರಾ, 2,000ಕ್ಕೂ ಅಧಿಕ ಖಾದ್ಯಯೋಗ್ಯ ತಳಿಗಳಿವೆ. ಅಲ್ಲದೆ ಅಲಂಕಾರಿಕ ಉದ್ದೇಶಗಳಿಗೆ ಬಳಸಬಹುದಾದ ಇತರ ತಳಿಗಳೂ ಇವೆ ಎನ್ನುತ್ತಾರೆ.

ಮೀರಾ ಮತ್ತು ಅವರ ತಂಡ ಕೃಷಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯೊಂದನ್ನು ಅಭಿವೃದ್ಧಿಗೊಳಿಸಿದ್ದು, ಅಣಬೆಗಳನ್ನು ಬೆಳೆಯಲು ಇದನ್ನು ಬಳಸಬಹುದಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಲುವೆ ನಿರ್ಮಾಣ ಮತ್ತು ರಸ್ತೆ ಕಾಮಗಾರಿಯಂತಹ ಕಷ್ಟದ ಕೆಲಸಗಳನನ್ನು ಮಾಡುವ ಮಹಿಳೆಯರಿಗೆ ಸುಲಭದ ಕೆಲಸವನ್ನು ಒದಗಿಸಲು ಅಣಬೆ ಕೃಷಿಯನ್ನು ಯೋಜನೆಯ ಭಾಗವನ್ನಾಗಿಸಬಹುದಾಗಿದೆ ಎನುತ್ತಾರೆ ಅವರು.

ತೇಜಸ್ವಿನಿ

ಅಲಂಕಾರಿಕ ಮತ್ತು ಔಷಧಿಯ ಬೆಳೆಗಳ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿರುವ ತೇಜಸ್ವಿನಿ ಹೆಚ್ಚು ಇಳುವರಿ ನೀಡುವ ಹೊಸ ಮಾದರಿಯ ಚೆಂಡುಹೂವುಗಳು ಮತ್ತು ಅಂತರರಾಷ್ಟ್ರೀಯ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆಯನ್ನು ನೀಡಬಲ್ಲ ನೂತನ ಸ್ವದೇಶಿ ಗುಲಾಬಿ ಹೂವಿನ ತಳಿಗಳನ್ನು ಅಭಿವೃದ್ಧಿಗೊಳಿಸಿದ್ದಾರೆ.

ಅರ್ಕ್ ಬಂಗಾರ ಮತ್ತು ಅರ್ಕ್ ಅಗ್ನಿ ತೇಜಸ್ವಿನಿ ಅಭಿವೃದ್ಧಿಗೊಳಿಸಿರುವ ಚೆಂಡುಹೂವಿನ ತಳಿಗಳಾಗಿವೆ.

2010ರಲ್ಲಿ ತೇಜಸ್ವಿನಿ ಮತ್ತು ಅವರ ವಿಜ್ಞಾನಿಗಳ ತಂಡವು ಅರ್ಕ್ ಸ್ವದೇಶ ಹೆಸರಿನ ಕೆಂಪು ಗುಲಾಬಿಯ ತಳಿಯನ್ನು ಅಭಿವೃದ್ಧಿಗೊಳಿಸಿದ್ದರು. ಕಳೆದ ವರ್ಷ ಅರ್ಕ್ ಐವರಿ ಮತ್ತು ಅರ್ಕ್ ಪ್ರೈಡ್ ಹೆಸರಿನ ಇನ್ನೆರಡು ಹೊಸ ತಳಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಅರ್ಕ್ ಸುಕನ್ಯಾ ಮತ್ತು ಅರ್ಕ್ ಪರಿಮಳ ಅವರು ಇತ್ತೀಚಿಗೆ ಅಭಿವೃದ್ಧಿಗೊಳಿಸಿರುವ ಹೊಸ ಗುಲಾಬಿ ತಳಿಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News