×
Ad

ಸಾಂಬಾರಿಗೆ ಬಿದ್ದ ಸತ್ತ ಇಲಿ ಸಣ್ಣದು ಎಂದ ಬೆಂಗಳೂರಿನ ಮೇಯರ್

Update: 2017-04-27 16:46 IST

ಬೆಂಗಳೂರು,ಎ.27 : ಮಂಗಳವಾರ ನಗರದ ಶ್ರೀ ರಾಮ ಮಂದಿರ ವಾರ್ಡಿನ ತ್ಯಾಜ್ಯಗಳನ್ನು ಸಂಗ್ರಹಿಸಿ ರಸ್ತೆಗಳನ್ನು ಸ್ವಚ್ಛವಾಗಿರಿಸಿ ಬಸವಳಿದ ಪೌರ ಕಾರ್ಮಿಕರು ಹಸಿದ ಹೊಟ್ಟೆಯಲ್ಲಿ ಅಪರಾಹ್ನ ಊಟಕ್ಕೆ ಕುಳಿತಾಗ ಅಸಹ್ಯಕರವಾದ ಘಟನೆಯೊಂದು ನಡೆದಿತ್ತು. ಅವರಿಗೆಂದು ನೀಡಲಾಗಿದ್ದ ಸಾಂಬಾರಿನ ಪಾತ್ರೆಯಲ್ಲಿ ಸತ್ತ ಇಲಿಯೊಂದು ತೇಲುತ್ತಿತ್ತು. ಆದರೆ ಈ ಆಘಾತಕ್ಕಿಂತ ದೊಡ್ಡ ಆಘಾತ ಆ ಬಡ ಕಾರ್ಮಿಕರಿಗೆ ಕಾದಿತ್ತು. ಸಾಂಬಾರಿನಲ್ಲಿದ್ದ ಇಲಿ ಬಹಳ ಚಿಕ್ಕದಾಗಿತ್ತು ಎಂದು ನಗರದ ಮೇಯರ್ ಹೇಳಿ ಈ ಘಟನೆಯನ್ನ ಗೌಣವಾಗಿಸಲೆತ್ನಿಸಿದಾಗ ಅವರಿಗೆ ಏನು ಹೇಳಬೇಕೆಂದೇ ತೋಚಿರಲಿಲ್ಲ.

ಘಟನೆ ಬುಧವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲೂ ಪ್ರತಿಧ್ವನಿಸಿತ್ತು. ಕಾರ್ಮಿಕರು ಅದಾಗಲೇ ಸಾಂಬಾರಿನಲ್ಲಿ ಇಲಿ ಪ್ರಕರಣದ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ದೀಪಾ ನಾಗೇಶ್ ಅವರ ಗಮನ ಸೆಳೆದಿದ್ದರು. ದೀಪಾ ಅವರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅವರ್ಯಾರೂ ಸ್ಥಳಕ್ಕೆ ಭೇಟಿ ನೀಡುವ ಗೋಜಿಗೇ ಹೋಗಿರಲಿಲ್ಲ.

ಆಹಾರವನ್ನು ಸಿದ್ಧಪಡಿಸಿದ ಸ್ಥಳದಿಂದ ಪೂರೈಕೆ ಮಾಡುವ ಸ್ಥಳಕ್ಕೆ ಸಾಗಾಟ ಮಾಡುವಾಗ ಇಲಿ ಅದರಲ್ಲಿ ಬಿದ್ದಿರಬಹುದು ಎಂದು ಮೇಯರ್ ಜಿ ಪದ್ಮಾವತಿ ಹೇಳಿದ್ದಾರೆ.

ಪೌರ ಕಾರ್ಮಿಕರಿಗಾಗಿರುವ ಆಹಾರವನ್ನು ಶ್ರೀ ರಾಮ ಮಂದಿರ ವಾರ್ಡಿನ ವಾಟಾಳ್ ನಾಗರಾಜ್ ರಸ್ತೆಯಲ್ಲಿರುವ ವಾರ್ಡ್ ಕಚೇರಿಯ ಪಕ್ಕದ ಸಣ್ಣ ಕೊಠಡಿಯಲ್ಲಿಡಲಾಗುತ್ತದೆ. ಪೌರ ಕಾರ್ಮಿಕರ ಆಹಾರದಲ್ಲಿ ಇಲಿಯೊಂದು ಕಂಡು ಬಂದಿರುವುದು ಇದು ಎರಡನೇ ಬಾರಿ, ಕಳೆದ ತಿಂಗಳು ಬಿಸಿ ಬೇಳೆ ಬಾತ್ ಇಡಲಾಗಿದ್ದ ಪಾತ್ರೆಯಲ್ಲಿ ಕೂಡ ಇಲಿ ಕಂಡು ಬಂದಿತ್ತು. ಆದರೆ ಅಷ್ಟೊತ್ತಿಗಾಗಲೇ ಕಾರ್ಮಿಕರು ಆಹಾರ ಸೇವಿಸಿಯಾಗಿತ್ತು. ಮಂಗಳವಾರದ ಘಟನೆಯ ನಂತರ ಕಾರ್ಮಿಕರು ತಾವೇ ಹಣ ತೆತ್ತು ಹತ್ತಿರದ ಹೊಟೇಲಿನಿಂದ ಸಾಂಬಾರ್ ತರಿಸಿದ್ದರು. ಬುಧವಾರ ಅವರಿಗೆ ಸಿದ್ಧಪಡಿಸಲಾಗಿದ್ದ ಪಲಾವ್ ತಿನ್ನಲು ಅವರು ನಿರಾಕರಿಸಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News