×
Ad

ಪಕ್ಷ ನಿಷ್ಠರ ತಂಟೆಗೆ ಬಂದರೆ ಹುಷಾರ್: ಯಡಿಯೂರಪ್ಪಗೆ ಈಶ್ವರಪ್ಪ ಬಹಿರಂಗ ಎಚ್ಚರಿಕೆ

Update: 2017-04-27 19:06 IST

ಬೆಂಗಳೂರು, ಎ.27: ‘ಪಕ್ಷದ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಸಂಘಟನೆ ಉಳಿಸೋಣ ಬನ್ನಿ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ಅಪ್ಪ-ಅಮ್ಮನಿಗೆ ಹುಟ್ಟಿದವರು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ಬೇರೆ ಪಕ್ಷವನ್ನು ಕಟ್ಟುವುದಿಲ್ಲ. ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರ ಸುದ್ದಿಗೆ ಬಂದರೆ ಸುಮ್ಮನಿರುವುದಿಲ್ಲ ಹುಷಾರ್’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ, ಪ್ರಾಮಾಣಿಕ ಕಾರ್ಯಕರ್ತರ ಅಮಾನತ್ತು, ಕಂಡಕಂಡವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಿ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಬೇಕಾ ಎಂದು ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಕಿಡಿಗಾರಿದರು.
ಪಕ್ಷವನ್ನು ಬಿಟ್ಟು ಹೋಗಿ ವಾಪಸ್ ಬಂದವರು ನಮಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಕೂಡಲಸಂಗಮ, ನಂದಗಡದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾಯಿತು. ಈಗ ಈ ಸಮಾವೇಶದಲ್ಲಿ ಪಾಲ್ಗೊಂಡರೆ ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ಎಂದು ನಾವೆಲ್ಲರೂ ಒಪ್ಪಿದ್ದೇವೆ. ಆದರೆ, ಪ್ರಾಮಾಣಿಕ ಕಾರ್ಯಕರ್ತರನ್ನು ಅಮಾನತು ಮಾಡಿ ಕಂಡ ಕಂಡವರನ್ನೆಲ್ಲಾ ಪದಾಧಿಕಾರಿಗಳನ್ನಾಗಿ ನೇಮಕ ಮಾಡುವ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಗಾರಿದರು.
ಬಿಜೆಪಿಯನ್ನು ಉಳಿಸಲು ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ನಮ್ಮ ರಕ್ತದ ಕಣ ಕಣದಲ್ಲಿಯೂ ಬಿಜೆಪಿ ಮತ್ತು ಆರೆಸೆಸ್ಸ್ ಸಿದ್ಧಾಂತವಿದೆ. ನಮ್ಮ ಪಕ್ಷ ನಿಷ್ಠೆಯನ್ನು ಯಾರೊಬ್ಬರು ಪ್ರಶ್ನಿಸುವಂತಿಲ್ಲ. ಪಕ್ಷಕ್ಕೆ ದ್ರೋಹ ಬಗೆದರೆ, ಹೆತ್ತ ತಾಯಿಗೆ ದ್ರೋಹ ಬಗೆದಂತೆ, ಕೆಜೆಪಿಯನ್ನು ಕಟ್ಟಬೇಡಿ ಎಂದು ಬೇಡಿಕೊಂಡರೂ ನಮ್ಮ ಮಾತಿಗೆ ಗೌರವ ನೀಡದೆ, ಕೆಜೆಪಿ ಕಟ್ಟಿ ಬಿಜೆಪಿ ಸೋಲುವಂತೆ ಮಾಡಿದರು. ಇದರಿಂದಾಗಿ, ಬಿಜೆಪಿ ಸೋಲು ಅನುಭವಿಸಿ, ಸಿದ್ದರಾಮಯ್ಯಗೆ ಲಾಟರಿ ಹೊಡೆಯಿತು ಎಂದು ಈಶ್ವರಪ್ಪ ಹೇಳಿದರು.

ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ನಾಲ್ಕು ಜನರ ಸಮಿತಿ ರಚನೆಯಾಗಿತ್ತು. ಫೆಬ್ರವರಿ 10 ರೊಳಗೆ ಸಭೆ ಮಾಡುವಂತೆ ಸೂಚನೆ ನೀಡಿದ್ದರು. ಇದುವರೆಗೂ ಒಂದೇ ಒಂದು ಸಭೆ ಮಾಡಲಿಲ್ಲ. ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದರು ಎಂದು ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಕಿಡಿಗಾರಿದರು.

ಸೊಗಡು ಶಿವಣ್ಣ, ನಂದೀಶ್ ಏನು ತಪ್ಪುಮಾಡಿದ್ದಾರೆಂದು ಅವರನ್ನು ಪಕ್ಷದಿಂದ ಅಮಾನತ್ತು ಮಾಡಿದ್ದೀರಾ, ಕೆಜಿಪಿಯಿಂದ ಬಂದವರನ್ನು ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿದ್ದೀರಾ, ಮುಂದಿನ ಚುನಾವಣೆಯಲ್ಲಿ ಗೆದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅವರನ್ನು ಸಚಿವರನ್ನಾಗಿಯೂ ಮಾಡುತ್ತೀರಾ. ಹಾಗಾದರೆ, ಪಕ್ಷ ನಿಷ್ಠರು ಏನು ಮಾಡಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದರು.

ನಾಲ್ಕು ಗೋಡೆಗಳ ಮಧ್ಯೆ ಕೂತು ಮಾತನಾಡೋಣ ಎಂದು ಹೇಳುತ್ತಿದ್ದೀರಾ, ಇಷ್ಟು ದಿನ ಎಲ್ಲಿ ಹೋಗಿದ್ರಿ. ಇನ್ನೂ ಕಾಲ ಮಿಂಚಿಲ್ಲ ಯಡಿಯೂರಪ್ಪನವರೆ ಈಗಲೂ ಒಟ್ಟಾಗಿ ಹೋಗೋಣ. ಈ ಸಭೆಯಲ್ಲಿ ಪಾಲ್ಗೊಂಡಿರುವವರು ಯಾರೂ ನಾಯಿ, ನರಿಗಳಲ್ಲ. ಹುಲಿಗಳು ಎಂದು ಈಶ್ವರಪ್ಪ ಅಬ್ಬರಿಸಿದರು.

ಸಭೆ ನಾನು ಕರೆದಿಲ್ಲ: ಈ ಸಭೆಯನ್ನು ನಾನು ಕರೆದಿಲ್ಲ. ಇದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಭೆಯೂ ಅಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದವರು, ಪಕ್ಷ ಸಂಘಟನೆ ಮಾಡಿದ ನಿಷ್ಠಾವಂತ ಕಾರ್ಯಕರ್ತರು, 24 ಜನ ಪ್ರಮುಖ ಕಾರ್ಯಕರ್ತರು ಕರೆದಿರುವ ಸಭೆ ಎಂದು ಈಶ್ವರಪ್ಪ ಹೇಳಿದರು.

ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡಿ, ಇಂದಿನ ಸಭೆಗೆ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಬಂದಿದ್ದಾರೆ. ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ನಾವೆಲ್ಲ ಸಂತೋಷದಿಂದ ಸ್ವಾಗತಿಸಿದ್ದೆವು. ಆದರೆ, ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ನೇಮಕದ ಸಂದರ್ಭದಲ್ಲಿ ಅವರು ನಿಷ್ಠಾವಂತರನ್ನು ಕಡೆಗಣಿಸಿದರು ಎಂದು ಆರೋಪಿಸಿದರು.

ಬೇರೆ ಪಕ್ಷಗಳಿಂದ ಬಂದವರನ್ನು ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಪಕ್ಷನಿಷ್ಠರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೇಳಿದರೆ ಯಾವುದೆ ಕ್ರಮ ಕೈಗೊಂಡಿಲ್ಲ. ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟಿದವರು ನಮ್ಮನ್ನು ಪಕ್ಷ ವಿರೋಧಿ, ಭಿನ್ನಮತೀಯರು ಎಂದು ಕರೆಯುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮಾಜಿ ಸಚಿವರಾದ ಸೊಗಡು ಶಿವಣ್ಣ, ಎಸ್.ಆರ್.ರವೀಂದ್ರನಾಥ್, ವಿಧಾನಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ ಸೇರಿದಂತೆ ಪ್ರಮುಖ ಭಿನ್ನಮತೀಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ವಿವಿಧೆ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News