ವಿಕಲಚೇತನರ ಘನತೆಯ ಜೀವನಕ್ಕೆ ಉದ್ಯೋಗ ಅಗತ್ಯ: ಜಿ.ಎನ್.ನಾಗರಾಜ್
ಬೆಂಗಳೂರು, ಎ.27: ವಿಕಲಚೇತನರು ಘನತೆ ಜೀವನ ನಡೆಸಲು ಉದ್ಯೋಗ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಸರಕಾರ ಸಮಗ್ರವಾದ ಯೋಜನೆಯನ್ನು ರೂಪಿಸಬೇಕೆಂದು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಲವು ವಿಕಲಚೇತನ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಉದ್ಯೋಗ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ, ಸಂಸ್ಥೆಗಳು ದಿಟ್ಟಕ್ರಮ ಕೈಗೊಳ್ಳಬೇಕು. ಶಿಕ್ಷಿತ ವಿಕಲಚೇತನರಿಗೆ ಉದ್ಯೋಗ ಸಿಗುವುದು ಖಚಿತವಾದರೆ, ಉಳಿದ ವಿಕಲಚೇತನ ವಿದ್ಯಾಭ್ಯಾಸದೆಡೆಗೆ ಆಸಕ್ತಿ ವಹಿಸುತ್ತಾರೆ . ಅಷ್ಟೇ ಅಲ್ಲದೆ ಪ್ರತಿವರ್ಷ ಕನಿಷ್ಠ ಒಂದು ಸಾವಿರ ಮಂದಿ ವಿಕಲಚೇತನ ವಿದ್ಯಾರ್ಥಿಗಳು ಎಸೆಸೆಲ್ಸಿ, ಪಿಯುಸಿ ಮುಗಿಸುತ್ತಿದ್ದಾರೆ. ಈ ಒಂದು ಸಾವಿರ ಮಂದಿಗೆ ಉದ್ಯೋಗ ದೊರಕಿಸಿಕೊಡುವುದು ಕಷ್ಟವೇನಲ್ಲ. ಹೀಗಾಗಿ ಸರಕಾರ ತನ್ನ ಇಲಾಖೆಗಳಲ್ಲಿ ವಿಕಲಚೇತನರಿಗೆ ಎಲ್ಲೆಲ್ಲಿ ಉದ್ಯೋಗ ಮಾಡಲು ಸಾಧ್ಯವೋ ಅಲ್ಲೆಲ್ಲ ಉದ್ಯೋಗ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆ ನಡೆಸುವ ನರ್ಸರಿಗಳ ನಿರ್ವಹಣೆಯನ್ನು ವಿಕಲಚೇತನರಿಗೆ ನೀಡಿದರೆ ಸಾಕಷ್ಟು ಮಂದಿಗೆ ಉದ್ಯೋಗ ಸಿಗುವಂತಾಗುತ್ತದೆ. ಹಾಗೆಯೇ ನೋಟ್ ಬುಕ್, ಫೈಲ್ ಸೇರಿದಂತೆ ಸಣ್ಣಪುಟ್ಟ ಉತ್ಪನ್ನಗಳನ್ನು ತಯಾರಿಸುವುದಕ್ಕೆ ವಿಕಲಚೇತನರಿಗೆ ಮಾತ್ರ ಪರವಾನಿಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಶೇ.5ರಷ್ಟು ಮೀಸಲಾತಿ ಖಾತ್ರಿಯಾಗಲಿ ವಿಕಲಚೇತನರಿಗೆ ಪ್ರತಿ ಕ್ಷೇತ್ರದಲ್ಲಿ ಶೇ.5ರಷ್ಟು ಮೀಸಲಾತಿಯನ್ನು ಕಡ್ಡಾಯ ಜಾರಿಗೊಳಿಸಿದೆ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್ ಮಾತನಾಡಿ, ವಿಕಲಚೇತನರಿಗೆ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರಕಾರ ಮುಕ್ತ ಮನಸ್ಸು ಹೊಂದಿದ್ದು, ಸರಕಾರಿ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿಯೂ ಉದ್ಯೋಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಕೆಪಿಎಎಂಆರ್‌ಸಿ ಗೌರವ ಕಾರ್ಯದರ್ಶಿ ಜೆ.ಪಿ.ಗಡ್ಕರಿ, ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಖಜಾಂಚಿ ಅರ್ಮದ ರಾಜನ್, ಸಹ ಕಾರ್ಯದರ್ಶಿ ಯಶಸ್ವಿ ಮತ್ತಿತರರಿದ್ದರು.