ಬಿಜೆಪಿಗೆ ವಿಶ್ವನಾಥ್ ಸೆಳೆಯಲು ಬಿಎಸ್‌ವೈ ಯತ್ನ?
ಬೆಂಗಳೂರು, ಎ 27: ಹಿಂದುಳಿದ ವರ್ಗಗಳ ನಾಯಕನಾಗಿ ಬಿಂಬಿಸಿಕೊಳ್ಳುತ್ತಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಲು ಉದ್ದೇಶಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಂಸದ ಎಚ್.ವಿಶ್ವನಾಥ್‌ರನ್ನು ಪಕ್ಷಕ್ಕೆ ಕರೆತರಲು ಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹೊರಹೋಗಲು ಸಿದ್ಧವಾಗುತ್ತಿರುವ ಎಚ್.ವಿಶ್ವನಾಥ್‌ರನ್ನು ಬಿಜೆಪಿಗೆ ಕರೆ ತರುವ ಸಂಬಂಧ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜೊತೆ ಯಡಿಯೂರಪ್ಪ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕುರುಬ ಸಮುದಾಯದಲ್ಲಿ ಈಶ್ವರಪ್ಪಗಿಂತ ಪ್ರಭಾವಿಯಾಗಿರುವ ವಿಶ್ವನಾಥ್‌ರನ್ನು ಪಕ್ಷಕ್ಕೆ ಕರೆ ತಂದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಎಸ್.ಎಂ.ಕೃಷ್ಣಗೆ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಮನವಿಗೆ ಸ್ಪಂದಿಸಿರುವ ಎಸ್.ಎಂ.ಕೃಷ್ಣ, ವಿಶ್ವನಾಥ್‌ರನ್ನು ಬಿಜೆಪಿಗೆ ಕರೆ ತರುವ ಸಂಬಂಧ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.