14,910 ಕೋಟಿ ರೂ.ನಬಾರ್ಡ್ ದಾಖಲೆಯ ವಹಿವಾಟು: ಎಂ.ಐ.ಗಣಗಿ

Update: 2017-04-27 14:30 GMT

ಬೆಂಗಳೂರು, ಎ. 27: ಪ್ರಸಕ್ತ ಸಾಲಿನಲ್ಲಿ 14,910ಕೋಟಿ ರೂ. ವಹಿವಾಟು ನಡೆಸುವ ಮೂಲಕ ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ದಾಖಲೆ ನಿರ್ಮಿಸಿದೆ ಎಂದು ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯ ಮಹಾ ಪ್ರಬಂಧಕ ಎಂ.ಐ.ಗಣಗಿ ತಿಳಿಸಿದ್ದಾರೆ.

ದೇಶದಲ್ಲಿ ಅತ್ಯಂತ ಹೆಚ್ಚು ದೀರ್ಘಾವಧಿ ಸಾಲವನ್ನು ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿದೆ. 5,547 ಕೋಟಿ ರೂ.ಬೆಳೆ ಸಾಲವನ್ನು ಗ್ರಾಮೀಣ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಿಗೆ ನೀಡಿ ರೈತರ ಅಲ್ಪಾವಧಿ ಸಾಲದ ಅವಶ್ಯಕತೆಯನ್ನು ಪೂರೈಸಲಾಗಿದೆ ಎಂದರು.

ಗರಿಷ್ಠ ಮೊತ್ತದ ನೋಟು ರದ್ದತಿ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಯೋಜನೆಯನ್ನು ನಿರ್ವಹಣೆ ಮಾಡಿ ರೈತ ಸಮುದಾಯದ ನಗದು ಸಮಸ್ಯೆ ಬಗೆಹರಿಸುವಲ್ಲಿ ನಬಾರ್ಡ್ ಪ್ರಮುಖ ಪಾತ್ರವಹಿಸಿದೆ. ರೈತ ಉತ್ಪಾದಕ ಸಂಘಟನೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಉದ್ದೇಶಿತ ಸಂಸ್ಥೆಗಳನ್ನಾಗಿ ಪರಿವರ್ತಿಸಲು 27ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೂಲ ಸೌಕರ್ಯಕ್ಕೆ 917ಕೋಟಿ ರೂ.ಸಾಲ 2016-17ರಲ್ಲಿ ರಾಜ್ಯ ಸರಕಾರಕ್ಕೆ 800ಕೋಟಿ ರೂ.ಗಳ ಗುರಿಯ ವಿರುದ್ಧ 915 ಕೋಟಿ ರೂ. ಸಾಲವನ್ನು ರಾಜ್ಯದ ಗ್ರಾಮೀಣ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ.

2017 ಮಾರ್ಚ್ 31ರ ವರೆಗೆ 11,476ಕೋಟಿ ರೂ.ಸಾಲವನ್ನು 37,302 ರೂ. ಯೋಜನೆಗಳಿಗಾಗಿ ಮಂಜೂರು ಮಾಡಲಾಗಿದೆ. ಈ ಯೋಜನೆಗಳ ಪೈಕಿ ಶೇ.44 ರಷ್ಟು ಸಾಮಾಜಿಕ ಕ್ಷೇತ್ರ, ಶೇ.32ರಷ್ಟು ಗ್ರಾಮೀಣ ಸಂಪರ್ಕ, ಶೇ.13ರಷ್ಟು ನೀರಾವರಿ, ಶೇ.11ರಷ್ಟು ಕೃಷಿ ಆಧಾರಿತ ಕ್ಷೇತ್ರಗಳಿಗೆ ಸೇರಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 1,054ಕೋಟಿ ರೂ. ಹಣವನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ, ಶೇ.93ರಷ್ಟು ಹೆಚ್ಚಳವಾಗಿದೆ. 2017ರ ಮಾರ್ಚ್ 31ರ ವರೆಗೆ 8,644ಕೋಟಿ ರೂ. ಹಣವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

2.26 ಲಕ್ಷಕ್ಕೂ ಅಧಿಕ ಸ್ವಸಹಾಯ ಸಂಘಗಳು, 60 ಸಾವಿರಕ್ಕೂ ಹೆಚ್ಚು ಜಂಟಿ ಬಾಧ್ಯತಾ ಗುಂಪುಗಳಿಗೆ ರಾಜ್ಯದಲ್ಲಿ ಬ್ಯಾಂಕ್‌ಗಳ ಮೂಲಕ ಸಾಲ ವಿತರಣೆ ಮಾಡಲಾಗಿದೆ, ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ, ಅಂತರ್ಜಲ ಮರುಪೂರಣ, ಮಳೆನೀರು ಕೊಯ್ಲು ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News