ಆಗಸ್ಟ್ ವೇಳೆಗೆ ಚರ್ಚ್‌ಸ್ಟ್ರೀಟ್ ಕಾಮಗಾರಿ ಪೂರ್ಣ: ಮೇಯರ್ ಪದ್ಮಾವತಿ

Update: 2017-04-27 15:04 GMT

ಬೆಂಗಳೂರು, ಎ.27: ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ 9.2 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡಿರುವ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿಯನ್ನು ಆಗಸ್ಟ್ ತಿಂಗಳ ವೇಳೆಗೆ ಸಾರ್ವಜನಿಕರ ಬಳಕೆಗೆ ಒಪ್ಪಿಸಬೇಕೆಂದು ಮೇಯರ್ ಪದ್ಮಾವತಿ ಸೂಚನೆ ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ಚರ್ಚ್‌ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪದ್ಮಾವತಿ, ಕಾಮಗಾರಿಯ ವೇಗ ಮತ್ತು ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ . ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ನಗರದಲ್ಲಿ ಅತ್ಯುತ್ತಮ ಮಾದರಿ ರಸ್ತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಆಧುನಿಕ ಪರಿಕರಗಳನ್ನು ಬಳಸಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಚರ್ಚ್‌ಸ್ಟ್ರೀಟ್ ರಸ್ತೆಯನ್ನು ವೈಟ್‌ಟಾಪಿಂಗ್ ಮಾಡುವ ಕಾಮಗಾರಿಗೆ ಕಾರ್ಯಾದೇಶ ಪತ್ರವನ್ನು ಕುದ್ರೋಳಿ ಗುತ್ತಿಗೆ ಸಂಸ್ಥೆಗೆ ನೀಡಲಾಗಿತ್ತೆಂದು ಅವರು ಮಾಹಿತಿ ನೀಡಿದರು.

ನೀರಿನ ಪೈಪ್, ವೈಎಫ್‌ಸಿ ಕೇಬಲ್, ವಿದ್ಯುತ್ ದೀಪಗಳ ಕೇಬಲ್, ಒಳಚರಂಡಿ ಪೈಪ್‌ಗಳು ಮಳೆ ನೀರು ಕೊಯ್ಲು ಸೇರಿದಂತೆ ಹಲವು ನಾಗರಿಕ ಸೌಲಭ್ಯಗಳನ್ನು ಫುಟ್‌ಪಾತ್ ಕೆಳಗಡೆ ಅಳವಡಿಸುವ ಈ ಕಾಮಗಾರಿಯನ್ನು 7 ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.

20 ಅಡಿಗಳಿಗೊಂದರಂತೆ ಎಲ್‌ಇಡಿ ಬಲ್ಪ್‌ಗಳ ಅಳವಡಿಕೆ, ಫುಟ್‌ಪಾತ್‌ಗಳಿಗೆ ಗ್ರಾನೈಟ್ ಕಾಬುಲ್ ಸ್ಟೋನ್‌ಗಳನ್ನು ಹಾಕುವಂತೆಯೂ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರದಲ್ಲಿ ನೀಡಲಾಗಿದೆ.

ಅದರಂತೆ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿ ಆಗಸ್ಟ್ ವೇಳೆಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News