ಕೊಡಿಗೆಹಳ್ಳಿ ರೈಲ್ವೆ ಮೇಲು ಸೇತುವೆ ಕಾಮಗಾರಿ ವಿಚಾರ: 4 ತಿಂಗಳಲ್ಲಿ ಪರ್ಯಾಯ ರಸ್ತೆ ನಿರ್ಮಿಸದಿದ್ದರೆ ಆಯುಕ್ತರೇ ಹೊಣೆ

Update: 2017-04-27 16:54 GMT

ಬೆಂಗಳೂರು, ಎ.27: ಬೆಂಗಳೂರು ನಗರದ ಕೊಡಿಗೆಹಳ್ಳಿ ರೈಲ್ವೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಯಿಂದ ರಸ್ತೆ ಮಾರ್ಗ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಲ್ಲಿ ಪರ್ಯಾಯ ರಸ್ತೆ ಮಾರ್ಗ ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಮುಖ್ಯಕಾರ್ಯನಿರ್ವಾಹಣಾ ಎಂಜಿನಿಯರ್ ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ವಿ.ಲೋಹಿತ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರು ನಡೆಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲ ಸಿ.ಎಂ.ದೇಸಾಯಿ ಅವರು, ಕೊಡಿಗೆಹಳ್ಳಿ ರೈಲ್ವೆ ಮೇಲು ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ಹೀಗಾಗಿ, ಬಿಬಿಎಂಪಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡಲು ಆದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ವಕೀಲರು, ಕೊಡಿಗೆಹಳ್ಳಿ ರೈಲ್ವೆ ಮೇಲು ಸೇತುವೆ ಕಾಮಗಾರಿಯು 2018ಕ್ಕೆ ಮುಗಿಯಲಿದೆ. ಹೀಗಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಬಿಬಿಎಂಪಿಯು ನಾಲ್ಕು ತಿಂಗಳಲ್ಲಿ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡಲಿದೆ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೊಡಿಗೆಹಳ್ಳಿ ರೈಲ್ವೆ ಮೇಲು ಸೇತುವೆ ಕಾಮಗಾರಿಯ ನಿರ್ಮಾಣದ ಬಳಿ ನಾಲ್ಕು ತಿಂಗಳಲ್ಲಿ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡದಿದ್ದರೆ ಬಿಬಿಎಂಪಿ ಆಯುಕ್ತರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News