ತೆರೆದ ಕೊಳವೆಬಾವಿ ಮುಚ್ಚದಿದ್ದರೆ ಕಠಿಣ ಶಿಕ್ಷೆ: ಎಚ್.ಕೆ.ಪಾಟೀಲ್

Update: 2017-04-28 14:59 GMT

ಬೆಂಗಳೂರು, ಎ.27: ವಿಫಲಗೊಂಡ ತೆರೆದ ಬಾವಿಗಳನ್ನು ಮುಚ್ಚಿದರೆ ಮಾತ್ರ ಮತ್ತೊಂದು ಬೋರ್‌ವೆಲ್ ಕೊರೆಯಲು ಅವಕಾಶ ನೀಡಲಾಗುತ್ತದೆ, ಅಥವಾ ತೆರೆದ ಬಾವಿಗಳನ್ನು ಮುಚ್ಚದೆ ಹಾಗೆ ಬಿಟ್ಟರೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಳವೆ ಬಾವಿಯನ್ನು ಹಾಕುವ ಮುನ್ನ ಹಾಗೂ ಒಂದು ವೇಳೆ ಕೊಳವೆ ಬಾವಿ ವಿಫಲಗೊಂಡರೆ ವಹಿಸಬೇಕಾದ ಕ್ರಮಗಳ ಕುರಿತು ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲು ಕಾನೂನು ಜಾರಿ ಮಾಡಲಾಗುವುದು ಎಂದು ಹೇಳಿದರು.

 2014ರಲ್ಲಿ ಬಾಗಲಕೋಟೆಯಲ್ಲಿ ಕೊಳವೆಬಾವಿಗೆ ಬಿದ್ದು ಮಗುವೊಂದು ಸಾವನ್ನಪ್ಪಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರಕಾರ ವಿಫಲಗೊಂಡಿರುವ ಕೊಳವೆ ಬಾವಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ 1,47,780 ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲಾಗಿತ್ತು ಎಂದರು.

ತಾಲೂಕು ಮಟ್ಟದಲ್ಲಿ ಕೃಷಿ ಹಾಗೂ ಕಂದಾಯ ಅಧಿಕಾರಿಗಳು ತೆರೆದ ಬಾವಿಗಳ ಕುರಿತು ವಾರಕ್ಕೊಮ್ಮೆ ಚರ್ಚೆ ನಡೆಸಬೇಕು. ಪಂಚಾಯತ್ ಮಟ್ಟದಲ್ಲಿ ತೆರೆದ ಬಾವಿಗಳ ಕುರಿತು ದೂರುಗಳನ್ನು ಸಂಗ್ರಹಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News