ಈಶ್ವರಪ್ಪ ತನ್ನ ನಡವಳಿಕೆ ತಿದ್ದಿಕೊಳ್ಳದೆ ಬೇರೆ ಮಾರ್ಗವಿಲ್ಲ: ಯಡಿಯೂರಪ್ಪ

Update: 2017-04-28 14:25 GMT

ಬೆಂಗಳೂರು, ಎ. 28: ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರು ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಅದು ಬಿಟ್ಟು ಗೊಂದಲ ಸೃಷ್ಟಿಸುವುದು ಸರಿಯಲ್ಲ. ನಡವಳಿಕೆ ತಿದ್ದಿಕೊಳ್ಳುವುದು ಬಿಟ್ಟು ಅವರಿಗೆ ಬೇರೆ ಮಾರ್ಗವೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.

ಶುಕ್ರವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿನ ತಮ್ಮ ನಿವಾಸದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುವುದು ಬಿಟ್ಟು, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದಲ್ಲಿನ ಬಿಕ್ಕಟ್ಟು ಪರಿಹರಿಸಲು ರಾಜ್ಯದ ಮುಖಂಡರಿಗೆ ಸಾಧ್ಯವಾಗಿಲ್ಲ ಎಂದರೆ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಗಮನಕ್ಕೆ ತರಬಹುದಿತ್ತು. ಅದನ್ನು ಬಿಟ್ಟು ಭಿನ್ನಮತೀಯ ಸಮಾವೇಶ ನಡೆಸುವುದು ಈಶ್ವರಪ್ಪಗೆ ಶೋಭೆ ತರುವುದಿಲ್ಲ ಎಂದು ಗುಡುಗಿದರು.

ಈಶ್ವರಪ್ಪ ಅವರ ನಡವಳಿಕೆ ವಿರುದ್ಧ ವಿಧಾನ ಪರಿಷತ್ ಸದಸ್ಯರು, ಶಾಸಕರು ಮತ್ತು ಪಕ್ಷದಲ್ಲಿನ ಮುಖಂಡರು ಆಕ್ರೋಶಗೊಂಡಿದ್ದಾರೆ. ಭಿನ್ನಮತೀಯರ ಎಲ್ಲ ಚಟುವಟಿಕೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಉಸ್ತುವಾರಿ ಮುರುಳೀಧರ್ ರಾವ್ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಅದೇ ಸಫಾರಿ

‘ತಾನು ಯಾವುದೇ ಸಂದರ್ಭದಲ್ಲಿಯೂ ಕೊಂಚವೂ ಬದಲಾಗಿಲ್ಲ. ಇಂದಿಗೂ ಅದೇ ಸಫಾರಿ ಧರಿಸುತ್ತಿದ್ದೇನೆ. ನನ್ನ ನಡವಳಿಕೆ, ಮಾತುಕತೆ ಯಾವುದೂ ಬದಲಾಗಿಲ್ಲ. ಆದರೆ, ಸೊಗಡು ಶಿವಣ್ಣ ಯಾವ್ಯಾವ ಮುಖಂಡರ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆಂಬುದು ಎಲ್ಲರಿಗೂ ಗೊತ್ತು’

-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News