ಗುತ್ತಿಗೆದಾರರಿಂದ ಲಂಚ ಪಡೆದ ಪ್ರಕರಣ ಕಾರ್ಪೊರೇಟರ್ ಕೃಷ್ಣಮೂರ್ತಿಗೆ ಜಾಮೀನು

Update: 2017-04-28 17:12 GMT

ಬೆಂಗಳೂರು, ಎ. 28 : ಬಿಬಿಎಂಪಿಯಿಂದ ಕಾಮಗಾರಿಗೆ ಬಿಲ್ ಮಂಜೂರು ಮಾಡಿಸಿಕೊಡಲು ಗುತ್ತಿಗೆದಾರರನಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದು ಬಂಧನಕ್ಕೆ ಗುರಿಯಾಗಿರುವ ಕಾರ್ಪೋರೇಟರ್ ಜಿ. ಕೃಷ್ಣಮೂರ್ತಿ ಅವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಈ ಸಂಬಂಧ ಜಾಮೀನು ಕೋರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಪೀಠ ಈ ಆದೇಶ ನೀಡಿತು.

ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು, ಒಬ್ಬರ ಭದ್ರತಾ ಖಾತರಿ ನೀಡಬೇಕು, ತನಿಖೆಗೆ ಸಹಕರಿಸಬೇಕು ಹಾಗೂ ವಿಚಾರಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಸಾಕ್ಷಿ ನಾಶಪಡಿಸಲು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತು.

  ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ಬಿಬಿಎಂಪಿ ಇಂಜಿನಿಯರ್‌ಗಳಾದ ಎಂ.ಕೃಷ್ಣ ಮತ್ತು ಅರುಣ್‌ಕುಮಾರ್‌ಗೆ ನ್ಯಾಯಪೀಠ ಇದೇ ವೇಳೆ ಜಾಮೀನು ನೀಡಿದೆ.

   ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ, ಗುತ್ತಿಗೆದಾರ ಹಾಗೂ ಅರ್ಜಿದಾರರ ನಡುವೆ ಯಾವುದೇ ರೀತಿಯ ಸಂಪರ್ಕವಿಲ್ಲ, ಇನ್ನು ಈಗಾಗಲೇ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಇದೊಂದು ಜಾಮೀನು ಮಂಜೂರು ಮಾಡಬಹುದಂತಹ ಪ್ರಕರಣವಾಗಿದೆ, ಜಾಮೀನು ನೀಡಿದರೆ ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ ಎಂದು ವಾಗ್ದಾನ ನೀಡಿದರು.

ಈ ವಾದ ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರಿಗೆ ಜಾಮೀನು ನೀಡಿದೆ.

         ರಾಜಾಜಿನಗರದ ಆರ್‌ಟಿಒ ಕಚೇರಿ ಬಳಿ ಬಿಬಿಎಂಪಿಯಿಂದ ಕೆಲ ಕಾಮಗಾರಿಗಾಗಿ 3 ಕೋಟಿಯ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಹಣ ಬಿಡುಗಡೆ ಮಾಡಬೇಕಾದರೆ ಒಟ್ಟು 23 ಲಕ್ಷ ರೂ. ಲಂಚ ಕೊಡುವಂತೆ ರಾಜಾಜಿನಗರ ವಾರ್ಡ್ ನಂಬರ್-99ರ ಕಾರ್ಪೊರೇಟರ್ ಕೃಷ್ಣಮೂರ್ತಿ ಗುತ್ತಿಗೆದಾರರ ಬಳಿ ಬೇಡಿಕೆಯಿಟ್ಟಿದ್ದರು.

ಈ ಕುರಿತಾಗಿ ಎಸಿಬಿ ಬಳಿ ದೂರು ಕೂಡಾ ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಮಾರ್ಚ್ 31ರಂದು ಎಸಿಬಿ ಕಾರ್ಪೋರೇಟರ್ ಮನೆಯ ಮೇಲೆ ದಾಳಿ ನಡೆಸಿ, ಗುತ್ತಿಗೆದಾರ ಧನಂಜಯ್ ಎಂಬುವರಿಂದ ಮೊದಲ ಕಂತಿನಲ್ಲಿ 15 ಲಕ್ಷ ರೂ. ಲಂಚ ಸ್ವೀಕರಿಸುತ್ತಿದಾಗಲೇ ಕೃಷ್ಣ ಮೂರ್ತಿಯನ್ನು ವಶಕ್ಕೆ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News