ಕೃಷಿ ಲೋಕದಲ್ಲಿ ಕ್ರಾಂತಿ ಸೃಷ್ಠಿಸಿದ ಸಾಧಕಿಯರು
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಕೀಟ ಹಾಗೂ ಹುಳ ಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿಯಾಗಿರುವ ಕಮಲಾ ಜಯಂತಿಯವರು ಕೀಟಬಾಧೆ ನಿರ್ವಹಣೆ ಹಾಗೂ ರಾಸಾಯನಿಕ ಪರಿಸರ ಶಾಸ್ತ್ರ ಕ್ಷೇತ್ರದಲ್ಲಿ ಸಾಮಾನ್ಯ ಕೀಟಗಳ ಹಾವಳಿಯಿಂದ ಬೆಳೆಗಳನ್ನು ಮುಕ್ತಗೊಳಿಸುವ ವಿಧಾನವೊಂದನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈವಿಧ್ಯಮಯ ಹಣ್ಣುಹಂಪಲು ಹಾಗೂ ತರಕಾರಿಗಳ ಸಾಲಿನ ನಡುವೆ ಕಣ್ಣು ಹರಿಸಿ ದಾಗ ಐಸ್‌ಕ್ರೀಮ್‌ನಂತೆ ಮೆಲ್ಲ ಬಹುದಾದ ಆ್ಯಪಲ್ ಹಣ್ಣು ಒಂದು ನಿಮ್ಮ ಗಮನಸೆಳೆಯು ತ್ತದೆ. ತುಂಬಾ ರಸಭರಿತವಾದ ಈ ಆ್ಯಪಲ್‌ನಲ್ಲಿ ಸಾಮಾನ್ಯ ಆ್ಯಪಲ್‌ನಲ್ಲಿರುವಷ್ಟು ಗಾತ್ರದ ಬೀಜ ಗಳನ್ನು ನೀವು ಕಾಣಲಾರಿರಿ. ಪಕ್ಕದಲ್ಲೇ ಸುಮಾರು 15 ದಿನಗಳಾದರೂ, ಕೊಠಡಿಯ ಉಷ್ಣಾಂಶದ ನಡುವೆಯೂ ತಾಜಾತ ನವನ್ನು ಕಾಯ್ದು ಕೊಳ್ಳುವ ಟೊಮ್ಯಾಟೊ ಹಣ್ಣು ನಿಮ್ಮ ಕಣ್ಮನ ಸೆಳೆಯುತ್ತದೆ. ಇದು ಸ್ವಾದಿಷ್ಟ ಮಾತ್ರವಲ್ಲ, ಮೂರು ಬಗೆಯ ವೈರಸ್‌ಗಳಿಗೆ ಪ್ರತಿರೋಧ ಶಕ್ತಿಯನ್ನು ಹೊಂದಿದೆ. ಇನ್ನೊಂದೆಡೆ ಕಾಣುವ ಅತ್ಯಂತ ತೆಳುವಾದ ಗೊರಟಿನೊಂದಿಗೆ ಯಥೇಚ್ಛವಾದ ತಿರುಳನ್ನು ಹೊಂದಿರುವ ವಿಭಿನ್ನ ತಳಿಯ ಮಾವಿನ ರುಚಿಯು ವರ್ಣನೆಗೆ ನಿಲುಕದ್ದು. ಅಷ್ಟೇ ಅಲ್ಲ ಕೊಠಡಿಯ ಉಷ್ಣಾಂಶದಲ್ಲಿ ದೀರ್ಘ ಸಮಯದವರೆಗಿದ್ದರೂ, ಸಿಹಿಯಾಗಿ ಹಾಗೂ ಸ್ಥಿರವಾಗಿ ಇರುವಂತಹ ಹಲವಾರು ಹೈಬ್ರಿಡ್ ಮಾವಿನ ತಳಿಗಳ್ನು ನಿಮ್ಮನ್ನು ಆಕರ್ಷಿಸುತ್ತವೆ.
ಹೌದು... ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ದಲ್ಲಿ ಈ ಅಪೂರ್ವ ಹಾಗೂ ವೈವಿಧ್ಯಮಯವಾದ ನೂತನ ಹಣ್ಣು, ತರಕಾರಿಗಳ ತಳಿಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಈ ಹೈಬ್ರಿಡ್ ತಳಿಗಳನ್ನು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಕಳೆದ ಐದು ದಶಕಗಳಿಂದ ಅಭಿವೃದ್ಧಿಪಡಿಸುತ್ತಾ ಬಂದಿದ್ದಾರೆ. ಈ ವಿಜ್ಞಾನಿಗಳಲ್ಲಿ ಅನೇಕರು ಮಹಿಳೆಯರೆಂಬುದು ಗಮನಾರ್ಹ. ಹಣ್ಣುಗಳು ಹಾಗೂ ತರಕಾರಿಗಳ ಜೊತೆಗೆ ಬರದ ಪರಿಸ್ಥಿತಿ ಯಲ್ಲಿಯೂ ಅಕ್ಕಿ ಹಾಗೂ ಗೋಧಿಯಂತಹ ಆಹಾರ ಬೆಳೆಗಳ ತಳಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಅವಿರತವಾಗಿ ಈ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಹೊಸದಿಲ್ಲಿಯಲ್ಲಿ 1987ರಲ್ಲಿ ಸ್ಥಾಪಿಸಲ್ಪಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು 1968ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಈ ವರ್ಷ ಅದಕ್ಕೆ 50 ವರ್ಷ ತುಂಬುತ್ತದೆ. ಬೆಳೆ ಇಳುವರಿಯನ್ನು ಹೆಚ್ಚಿಸುವಂತಹ ಸಂಶೋಧನೆಗೆ ತಮ್ಮ ಕೊಡುಗೆಯನ್ನು ನೀಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗುತ್ತಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕೆಲವು ಮಹಿಳಾ ಸಂಶೋಧಕಿಯರ ಸಾಧನೆಗಳ ಕಿರುಪರಿಚಯ ಇಲ್ಲಿದೆ.
ಕಮಲಾ ಜಯಂತಿ
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಕೀಟ ಹಾಗೂ ಹುಳ ಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿಯಾಗಿರುವ ಕಮಲಾ ಜಯಂತಿಯವರು ಕೀಟಬಾಧೆ ನಿರ್ವಹಣೆ ಹಾಗೂ ರಾಸಾಯನಿಕ ಪರಿಸರ ಶಾಸ್ತ್ರ ಕ್ಷೇತ್ರದಲ್ಲಿ ಸಾಮಾನ್ಯ ಕೀಟಗಳ ಹಾವಳಿಯಿಂದ ಬೆಳೆಗಳನ್ನು ಮುಕ್ತಗೊಳಿಸುವ ವಿಧಾನವೊಂದನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘‘ಮಾವಿಗೆ, ಉಷ್ಣವಲಯದ ಹಣ್ಣಿನ ಕೀಟಗಳ ಹಾವಳಿಯು ಅತೀ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಮಾವು ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲೇ ನಂ.1 ರಾಷ್ಟ್ರವಾಗಿದ್ದೇವೆ. ಆದರೆ ಕೀಟಗಳ ಉಪದ್ರವದ ಕಾರಣ ಮುಂಜಾಗರೂಕತೆಯ ಕ್ರಮವಾಗಿ ಹಲವು ದೇಶಗಳು ನಮ್ಮ ದೇಶದ ಹಣ್ಣುಗಳನ್ನು ರಫ್ತು ಮಾಡಲು ನಿರ್ಬಂಧ ವಿಧಿಸುತ್ತವೆ. ಇದರಿಂದಾಗಿ ನಮ್ಮ ಉತ್ಪಾದನೆಯ ಕೇವಲ ಶೇ.10 ಭಾಗದಷ್ಟು ಮಾವನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗಿದೆಯೆಂದವರು ಹೇಳುತ್ತಾರೆ.
ಮಾವಿನ ಹಣ್ಣಿನಲ್ಲಿರುವ ಗಾಮಾ-ಅಕ್ಟೊಲಾಕ್ಟೋನ್ ಎಂಬ ರಾಸಾಯನಿಕ ಸಂಯೋಜನೆಗೆ ಹಣ್ಣಿನ ಕೀಟಗಳು ಆಕರ್ಷಿತವಾಗುತ್ತವೆ. ಆ ರಾಸಾಯನಿಕ ಸಂಯೋಜನೆ ಯ ಸುವಾಸನೆಗೆ ಮಾರುಹೋಗುವ ಈ ಕೀಟಗಳು ಹಣ್ಣುಗಳಲ್ಲಿಯೇ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳು ಬೆಳೆದು ಹುಳಗಳಾಗುತ್ತವೆ. ಅವು ಮಾವಿನ ತಿರುಳನ್ನು ತಿನ್ನುತ್ತವೆ.
ಎಂಬುದನ್ನುಜಯಂತಿ ಮತ್ತವರ ತಂಡ ಪತ್ತೆಹಚ್ಚಿದೆ. ಜಯಂತಿ ಹಾಗೂ ಅವರ ತಂಡವು ಮಾವಿನ ಲ್ಲಿರುವ ರಾಸಾಯನಿಕ ಸಂಯೋಜನೆಯನ್ನೇ ಬಳಸಿಕೊಂಡು ಅರಿಯಾ ಡೊರ್ಸೊಲ್ಯೂರ್ ಎಫ್. ಎಂಬ ರಾಸಾಯನಿಕ ದ್ರಾವಣವನ್ನು ತಯಾರಿಸಿದೆ. ಈ ದ್ರಾವಣವನ್ನು ಕಾಗದದ ತುಂಡುಗಳ ಮೇಲೆ ಸವರಿದಲ್ಲಿ, ಹೆಣ್ಣು ಕೀಟಗಳು ಅದರೆಡೆಗೆ ಆಕರ್ಷಿತಗೊಂಡು, ಅದರಲ್ಲೇ ಮೊಟ್ಟೆಗಳನ್ನಿಡುತ್ತವೆ ಮತ್ತು ಅವು ಮಾವಿನ ಗೊಡವೆಗೆ ಹೋಗುವುದಿಲ್ಲ. ಅರ್ಕಾ ಡೊರ್ಸೊಲ್ಯೂರ್ ದ್ರಾವಣವು ಶೀಘ್ರದಲ್ಲೇ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ರೇಷ್ಮೆ ಹುಳಗಳು ಅಧಿಕ ಮೊಟ್ಟೆಗಳನ್ನು ಇಡುವಂತೆ ಮಾಡುವ ಸಂಶೋಧನಾ ಯೋಜನೆ ಯಲ್ಲೂ ಜಯಂತಿ ಕೆಲಸ ಮಾಡಿದ್ದಾರೆ.
ಮಾಧವಿ ರೆಡ್ಡಿ: ಮೆಣಸಿನ ಮಹಿಳೆ
ದಕ್ಷಿಣ ಅಮೆರಿಕವು ಕೆಂಪು ಮೆಣಸಿನ ತವರುರಾಷ್ಟ್ರವಾಗಿದೆ. 15ನೆ ಶತಮಾನದ ಭೂಖಂಡ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಕೆಂಪು ಮೆಣಸನ್ನು ಯುರೋಪ್‌ಗೆ ತಂದಿದ್ದ. ತರುವಾಯ ಅದು ಪೋರ್ಚುಗೀಸ್ ನಾವಿಕರ ಮುಖಾಂತರ ಭಾರತವನ್ನು ತಲುಪಿತು. ಇಂದು, ಮೆಣಸಿನ ಬಳಕೆಯಿಲ್ಲದ ಆಹಾರವನ್ನು ಕಲ್ಪಿಸುವುದೇ ಕಷ್ಟವಾಗಿ ಬಿಟ್ಟಿದೆ.
ತರಕಾರಿ ಬೆಳೆಗಳ ವಿಭಾಗದಲ್ಲಿ ಪ್ರಮುಖ ವಿಜ್ಞಾನಿಯಾದ ಮಾಧವಿ ರೆಡ್ಡಿ, ಖಾರವಾದ ಹಾಗೂ ಉತ್ತಮ ಗುಣಮಟ್ಟದ ಮೆಣಸಿನ ತಳಿಯನ್ನು ಸೃಷ್ಟಿಸುವಲ್ಲಿ ಪರಿಣಿತರಾಗಿದ್ದಾರೆ. ಮಾಧವಿ ಮತ್ತವರ ತಂಡವು ಶಿಲೀಂದ್ರ, ಬ್ಯಾಕ್ಟೀರಿಯ ಹಾಗೂ ವೈರಸ್‌ಗಳಂತಹ ಜೈವಿಕ ಒತ್ತಡಗಳಿಗೆ ಪ್ರತಿರೋಧವನ್ನು ತೋರಿಸುವಂತಹ ಹಲವಾರು ಮೆಣಸಿನ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಅರ್ಕ ಮೇಘನಾ, ಅರ್ಕ ಹರಿತಾ, ಅರ್ಕ ಶ್ವೇತಾ ಹಾಗೂ ಅರ್ಕ ಖ್ಯಾತಿ ಎಂಬ ನಾಲ್ಕು ಅಧಿಕ ಇಳುವರಿಯ ಹೈಬ್ರೀಡ್ ತಳಿಗಳನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ಬ್ಯಾಡಗಿ ತಳಿಯ ಎರಡು ಅಥವಾ ಮೂರು ವೈವಿಧ್ಯಗಳನ್ನು ಕೂಡಾ ಅವರು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇವುಗಳ ಬಣ್ಣ ಹಾಗೂ ತೀಕ್ಷ್ಣತೆಯನ್ನು ಫಾರ್ಮಾಸ್ಯೂಟಿಕಲ್ ಕಂಪೆನಿಗಳು ಔಷಧ ಹಾಗೂ ಮುಲಾಮುಗಳಿಗೆ ಬಳಸುತ್ತಿದೆ. ಅಷ್ಟೇ ಏಕೆ ಪೆಪ್ಪರ್ ಸ್ಪ್ರೇಗಳ ತಯಾರಿಕೆಗೂ ಇವುಗಳನ್ನು ಬಳಸಲಾಗುತ್ತಿದೆ.
ಭಾರತದಲ್ಲಿ ಮೆಣಸು ಬಹುತೇಕವಾಗಿ ಆಂಧ್ರಪ್ರದೇಶ, ತೆಲಂಗಾಣ, ಮಹಾ ರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಪಂಜಾಬ್ ಗಳಲ್ಲಿ ಬೆಳೆಯುತ್ತವೆ. ಭಾರತವು ಪ್ರತೀ ವರ್ಷ ಹಲವಾರು ಟನ್ ಮೆಣಸನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಎಲ್ಲಾ ಸಾಂಬಾರ ಬೆಳೆಗಳ ಪೈಕಿ ಭಾರತವು ಮೆಣಸಿನ ರಫ್ತಿನಿಂದ ಗರಿಷ್ಠ 3,500 ಕೋಟಿ ರೂ. ಆದಾಯವನ್ನು ಪಡೆಯುತ್ತಿದೆ ಎಂದು ಮಾಧವಿ ಹೇಳುತ್ತಾರೆ.
ಮಾಧವಿ ಮತ್ತವರ ತಂಡವು, ಇದೀಗ ಮೆಣಸಿನ ಗಿಡಗಳಿಗೆ ನೀರಿನ ಬಳಕೆಯನ್ನು ಕಡಿಮೆ ಗೊಳಿಸುವ ಬಗ್ಗೆ ಸಂಶೋಧನೆ ನಡೆಸುತ್ತಿದೆ.
ರೇಖಾ ಎ.: ಬಾಳೆಯಲ್ಲಿ ಆವಿಷ್ಕಾರ
ಹಣ್ಣು ಬೆಳೆಗಳ ವಿಭಾಗದ ಪ್ರಮುಖ ವಿಜ್ಞಾನಿಯಾದ ರೇಖಾ ಎ. ಅವರು ಬಾಳೆಗಿಡಕ್ಕೆ ಸಾಮಾನ್ಯ ವಾದ ಶಿಲೀಂಧ್ರ ಕಾಯಿಲೆಗೆ ಪ್ರತಿರೋಧ ಗುಣವನ್ನು ಹೊಂದಿರುವ ತಳಿಯೊಂದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಸಿಹಿ ಹಾಗೂ ಸ್ವಾದಿಷ್ಟವಾದ ಕರ್ನಾಟಕದ ಪ್ರಸಿದ್ಧ ಏಲಕ್ಕಿ ಬಾಳೆಯನ್ನು ಫುಸ್ಸೆರಿಯಂ ವಿಲ್ಟ್ ಎಂಬ ಶಿಲೀಂಧ್ರ ರೋಗವು ಕಾಡುತ್ತಿದೆ. ರಸದಾಳೆ ಬಾಳೆಗೂ ಅದು ಹಾನಿಯನ್ನುಂಟು ಮಾಡುತ್ತದೆ. ಈ ಶಿಲೀಂಧ್ರ ರೋಗಕ್ಕೆ ಪ್ರತಿರೋಧವನ್ನು ಒಡ್ಡುವ ಹೈಬ್ರಿಡ್ ಬಾಳೆಯನ್ನು ತಾವು ಅಭಿವೃದ್ಧಿಪಡಿಸಿರುವುದಾಗಿ ಆಕೆ ಹೇಳುತ್ತಾರೆ.
ಬಾಳೆಹಣ್ಣು ಒಂದು ಬೀಜರಹಿತ ಹಣ್ಣಾಗಿರುವುದರಿಂದ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಅದರ ನೂತನ ತಳಿಗಳನ್ನು ಅಭಿವೃದ್ಧಿಪಡಿಸುವುದು ಕೃಷಿ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿದೆಯೆಂದು ರೇಖಾ ಅಭಿಪ್ರಾಯಿಸುತ್ತಾರೆ.
ಬಾಳೆ ಕೃಷಿಗೆ ಭಾರೀ ಪ್ರಮಾಣದಲ್ಲಿ ನೀರಿನ ಅಗತ್ಯವಿದೆ. ಕಡಿಮೆ ನೀರನ್ನು ಬಳಸಿಕೊಂಡು ಚೆನ್ನಾಗಿ ಬೆಳೆಯುವ ಹಾಗೂ ಹಣ್ಣುಗಳನ್ನು ಬಿಡುವ ಬಾಳೆಗಿಡದ ತಳಿಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಯಲ್ಲಿ ಅವರು ನಿರತರಾಗಿದ್ದಾರೆ.
ರೇಖಾ ಮತ್ತವರ ತಂಡವು ಸಪೋಟಾ ಹಣ್ಣಿನ ಹೊಸ ತಳಿಯೊಂದನ್ನು ಕೂಡಾ ಅಭಿವೃದ್ಧಿ ಪಡಿಸಿದೆ. ಐಐಎಚ್‌ಆರ್‌ಎಸ್-63 ಎಂದು ಹೆಸರಿಡಲಾದ ಕುಳ್ಳಗಿನ ಗಾತ್ರದ ಈ ಸಪೋಟಾ ಮರವು ಉರುಟಾದ ಹಣ್ಣುಗಳನ್ನು ಬಿಡುತ್ತದೆ ಹಾಗೂ ಇದನ್ನು ಇತರ ಮರಗಳ ಸನಿಹದಲ್ಲೇ ನೆಡಬಹುದಾಗಿದೆ. ತೋಟಗಾರಿಕೆಯ ಗಿಡಗಳು ದಟ್ಟವಾಗಿರುವ ಪ್ರದೇಶಗಳಲ್ಲಿ ಈ ತಳಿಯು ಅತ್ಯಂತ ಪ್ರಯೋಜನ ಕಾರಿಯಾಗಿದೆ. ಅಲ್ಲದೆ ಗಿಡದ ಎತ್ತರ ಕಡಿಮೆಯಿರುವುದರಿಂದ ಹಣ್ಣುಗಳನ್ನು ಕೊಯ್ಯುವುದು ಕೂಡಾ ತುಂಬಾ ಸುಲಭವಾಗಿದೆ.
ರೇಖಾ ಎ. ಅವರು ‘ರಸರಾಜ್’ ಎಂಬ ಲಿಂಬೆ ತಳಿಯನ್ನು ಕೂಡಾ ಅಭಿವೃದ್ಧಿಪಡಿಸಿದ್ದು ಇದು ಸಿಟ್ರಸ್ ಬ್ಯಾಕ್ಟೀರಿಯಲ್ ಕ್ಯಾಂಕರ್ ಎಂಬ ರೋಗದ ವಿರುದ್ಧ ಪ್ರತಿರೋಧ ಶಕ್ತಿಯನ್ನು ಹೊಂದಿದೆ.
ಅಣಬೆ ಕಂಪನ್ನು ಹರಡುವ ಮೀರಾ ಪಾಂಡೆ
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಅಣಬೆ ಸಂಶೋಧನಾ ಪ್ರಯೋಗಾಲಯದ ಪ್ರಧಾನ ವಿಜ್ಞಾನಿಯಾದ ಮೀರಾಪಾಂಡೆ ಭಾರತದಲ್ಲಿ ಲಭ್ಯವಿರುವ ಅಣಬೆ ತಳಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ತಾನು ನೆರವಾಗಿರುವುದಾಗಿ ಹೇಳುತ್ತಾರೆ.
‘‘30 ವರ್ಷಗಳ ಹಿಂದೆ ನಾನು ಈ ಸಂಸ್ಥೆಗೆ ಸೇರ್ಪಡೆಗೊಂಡಾಗ ಬಟನ್ ಅಣಬೆ ಮಾತ್ರವೇ ಪರಿಚಿತವಿತ್ತು’’ ಎಂದವರು ಹೇಳುತ್ತಾರೆ. ಅಣಬೆಗಳಲ್ಲಿ ಇರುವ ವೈವಿಧ್ಯತೆಗಳ ಬಗ್ಗೆ ತಾನು ಜಾಗೃತಿ ಮೂಡಿಸುವಲ್ಲಿ ಸಫಲಳಾಗಿದ್ದೇ ನೆಂದು ಹೇಳುವ ಅವರು ಭಾರತದಲ್ಲಿ 2 ಸಾವಿರಕ್ಕೂ ಅಧಿಕ ನಮೂನೆಯ ಖಾದ್ಯಕ್ಕೆ ಯೋಗ್ಯ ವಾದ ಅಣಬೆಗಳಿವೆ ಎನ್ನುತ್ತಾರೆ. ಅಲಂಕಾರದ ಉದ್ದೇಶಕ್ಕಾಗಿ ಬಳಸುವ ಅಣಬೆಗಳೂ ಇರುವುದಾಗಿ ಮೀರಾ ಪಾಂಡೆ ತಿಳಿಸುತ್ತಾರೆ.
ಮೀರಾ ಪಾಂಡೆ ಹಾಗೂ ಅವರ ತಂಡವು ಕೃಷಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಳಸಿಕೊಂಡು ಅಣಬೆ ಬೆಳೆಯುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಬೃಹತ್ ಪ್ರಮಾಣದ ಕೃಷಿ ತ್ಯಾಜ್ಯ (ಧವಸಧಾನ್ಯ ಬೆಳೆಯಿಂದಲೇ 98 ದಶಲಕ್ಷ ಟನ್) ವನ್ನು ಸುಟ್ಟುಹಾಕಲಾಗುತ್ತದೆ. ಆದರೆ ಇದನ್ನು ಅಣಬೆ ಬೆಳೆಯಲು ಬಳಸಿಕೊಳ್ಳಬಹುದಾಗಿದೆ ಎಂದಾಕೆ ಹೇಳುತ್ತಾರೆ. ‘‘ಇದರಿಂದ ವಾಯುಮಾಲಿನ್ಯ ಕಡಿಮೆಯಾಗಲಿದೆ ಹಾಗೂ ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ನೆರವಾಗಲಿದೆ. ಅಣಬೆಯು ಪ್ರೊಟೀನ್‌ಗಳಿಂದ ಸಮೃದ್ಧವಾಗಿರುವುದರಿಂದ ಅದು ಅತ್ಯುತ್ತಮ ಪೌಷ್ಟಿಕ ಆಹಾರವೂ ಹೌದು ಎಂದು ಮೀರಾ ಪಾಂಡೆ ಹೇಳುತ್ತಾರೆ.
ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಅಣಬೆ ಕೃಷಿಯನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಮಾಡಬೇಕೆಂದು ಪಾಂಡೆ ಪ್ರತಿಪಾದಿಸುತ್ತಾರೆ. ಈ ಯೋಜನೆಯಡಿ ಕಾಲುವೆ ಅಗೆಯುವುದು ಹಾಗೂ ರಸ್ತೆ ನಿರ್ಮಾಣದಂತಹ ಪ್ರಯಾಸಕಾರಿ ಕೆಲಸಗಳನ್ನು ನಿರ್ವಹಿಸಬೇಕಾಗಿರುವುದರಿಂದ ಅಶಕ್ತ ಮಹಿಳೆಯರಿಗೆ ಅಣಬೆ ಕೃಷಿಯು ಒಂದು ವರದಾನವಾಗಿದೆಯೆಂದವರು ಹೇಳುತ್ತಾರೆ.
ಮೀರಾ ಮತ್ತವರ ತಂಡವು ಅಣಬೆ ಪುಡಿಯ ರಸಂ ಹಾಗೂ ಚಟ್ನಿ ಹುಡಿ ಯನ್ನು ಕೂಡಾ ತಯಾರಿಸಿದ್ದು, ಇದು ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿದೆ.
ತೇಜಸ್ವಿನಿಯ ಪುಷ್ಪ ಕ್ರಾಂತಿ
ಆಲಂಕಾರಿಕ ಹಾಗೂ ಔಷಧಿ ಬೆಳೆಗಳ ವಿಭಾಗದ ಪ್ರಧಾನ ವಿಜ್ಞಾನಿಯಾಗಿರುವ ತೇಜಸ್ವಿನಿ ಅವರು ಅಧಿಕ ಇಳುವರಿ ನೀಡುವ ಸೇವಂತಿಗೆ ಹೂವಿನ ಹೊಸ ತಳಿಗಳನ್ನು ಹಾಗೂ ಗುಲಾಬಿ ಹೂವಿನ ತಳಿಗಳನ್ನು ಸ್ಪರ್ಧಾತ್ಮಕವಾದ ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸಿದ್ದಾರೆ. ಅರ್ಕ ಬಂಗಾರ ಹಾಗೂ ಅರ್ಕ ಅಗ್ನಿ ಎಂಬ ಸೇವಂತಿಗೆಯ ಎರಡು ತಳಿಗಳನ್ನು ಅಭಿವೃದ್ಧಿ ಪಡಿಸಲು ತೇಜಸ್ವಿನಿ ನೆರವಾಗಿದ್ದಾರೆ. ಬಡರೈತರ ಪಾಲಿಗೆ ಸೇವಂತಿಗೆ ಕೃಷಿಯು ಗೆಳೆಯನಾಗಿದೆ. ಪ್ರತೀ ಕೆ.ಜಿ.ಗೆ 30ರಿಂದ 50 ರೂ.ತನಕ ಅತ್ಯಂತ ಕಡಿಮೆ ದರದಲ್ಲಿ ಸೇವಂತಿಗೆ ಬೀಜಗಳು ಈಗ ದೊರೆಯುತ್ತವೆ. ಈ ಮೊದಲು ರೈತರು ಹೈಬ್ರೀಡ್ ಬೀಜಗಳಿಗಾಗಿ ಕಂಪೆನಿಗಳನ್ನು ಆಶ್ರಯಿಸಬೇಕಾಗಿತ್ತು. ಈಗ ಅದರ ಅಗತ್ಯವಿಲ್ಲ. ರೈತರೇ ಸೇವಂತಿಗೆ ಬೀಜಗಳನ್ನು ಉತ್ಪಾದಿಸಬಹುದಾಗಿದೆ ಎಂದವರು ಹೇಳುತ್ತಾರೆ.
ಕರ್ನಾಟಕದ ಯಾದಗಿರಿ ಜಿಲ್ಲೆಯ ರೈತ ಶಾಂತಿಲಾಲ್ ಎಂಬಾತ ಕಳೆದ ವರ್ಷ ಒಂದು ಎಕರೆ ಜಮೀನಿನಲ್ಲಿ ‘ಅರ್ಕ ಬಂಗಾರ 2’ ತಳಿಯ ಸೇವಂತಿಗೆ ಬೆಳೆದಿದ್ದರು. ಈ ಕೃಷಿಯಿಂದ ಅವರು ಕೇವಲ ನಾಲ್ಕು ತಿಂಗಳುಗಳಲ್ಲಿ 3.5 ಲಕ್ಷ ರೂ. ವರಮಾನ ಗಳಿಸಿದ್ದರು ಎಂದರು.
ಗುಲಾಬಿ ಕೃಷಿಯ ಬಗ್ಗೆ ಪ್ರಸ್ತಾಪಿಸುವ ಅವರು, ಈ ಹೂವಿನ ಕೃಷಿಯ ಲಾಲನೆ, ಪಾಲನೆ ಅತ್ಯಂತ ಕಷ್ಟಕರವೆನ್ನುತ್ತಾರೆ. ಸ್ವದೇಶಿ ತಳಿಯ ಗುಲಾಬಿಗಳು ದೀರ್ಘಕಾಲದ ವಿಮಾನ ಪ್ರಯಾಣದಲ್ಲಿ ತಾಜಾತನವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಅಂತಾ ರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಅವುಗಳಿಗೆ ಕಷ್ಟಕರವಾಗುತ್ತಿದೆ ಎಂದವರು ಹೇಳುತ್ತಾರೆ.
2010ರಲ್ಲಿ ತೇಜಸ್ವಿನಿ ಹಾಗೂ ಅವರ ತಂಡವು ಅರ್ಕ ಸ್ವದೇಶ್ ಎಂಬ ಕೆಂಪು ಬಣ್ಣದ ಹಾಗೂ ಹೊಳಪಾದ ಎಲೆಗಳಿರುವ ಅರ್ಕ ಸ್ವದೇಶ್ ಎಂಬ ಗುಲಾಬಿ ತಳಿಯನ್ನು ಅಭಿವೃದ್ಧಿ ಪಡಿಸಿದ್ದರು. ಕಳೆದ ವರ್ಷ ಅವರು ‘ಅರ್ಕ ಐವರಿ’ ಹಾಗೂ ‘ಅರ್ಕ ಪ್ರೈಡ್’ ಎಂಬ ಇನ್ನೆರಡು ತಳಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು. ಅರ್ಕ ಪರಿಮಳ ಹಾಗೂ ಅರ್ಕ ಸುಕನ್ಯಾ ತೇಜಸ್ವಿನಿ ಮತ್ತವರ ತಂಡವು ಅಭಿವೃದ್ಧಿಪಡಿಸಿದ ಇನ್ನೆರಡು ಗುಲಾಬಿ ತಳಿಗಳಾಗಿವೆ. ಆ್ಯಂಟಿ ಓಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇವುಗಳನ್ನು ಆಹಾರಕ್ಕೆ ಬಣ್ಣ ಹಾಗೂ ಸುವಾಸನೆಯಾಗಿ ಬಳಸಿಕೊಳ್ಳಬಹುದಾಗಿದೆ. ಸುಕನ್ಯಾ ತಳಿಯು ಪರಿಮಳಯುಕ್ತವಾಗಿದ್ದು, ಪ್ರಸಾಧನ ಹಾಗೂ ಸುಗಂಧ ಉದ್ಯಮಕ್ಕೆ ಯೋಗ್ಯವಾಗಿದೆ.
ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಅಣಬೆ ಕೃಷಿಯನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಮಾಡಬೇಕೆಂದು ಪಾಂಡೆ ಪ್ರತಿಪಾದಿಸುತ್ತಾರೆ. ಈ ಯೋಜನೆಯಡಿ ಕಾಲುವೆ ಅಗೆಯುವುದು ಹಾಗೂ ರಸ್ತೆ ನಿರ್ಮಾಣದಂತಹ ಪ್ರಯಾಸಕಾರಿ ಕೆಲಸಗಳನ್ನು ನಿರ್ವಹಿಸಬೇಕಾಗಿರುವುದರಿಂದ ಅಶಕ್ತ ಮಹಿಳೆಯರಿಗೆ ಅಣಬೆ ಕೃಷಿಯು ಒಂದು ವರದಾನವಾಗಿದೆಯೆಂದವರು ಹೇಳುತ್ತಾರೆ.