ಹಿಂದಿ ಹೇರಿಕೆಯ ಹಿಂದಿರುವ ಹುನ್ನಾರ

Update: 2017-04-28 16:27 GMT

ಮೋದಿಯ ಹಿಂದಿಗೆ ಆದ್ಯತೆ ನೀಡುವ ನಡೆ ದೇಶವನ್ನು ವಿಭಜಿಸುವತ್ತ ಮತ್ತೊಂದು ಹೆಜ್ಜೆಯಾಗಿದೆ. ಕೇಂದ್ರ ಸರಕಾರದ ಹಿಂದಿಗೆ ಒತ್ತು ನೀಡುವ ಕ್ರಮವು ವೈವಿಧ್ಯದಿಂದ ಕೂಡಿದ ದೇಶದಲ್ಲಿ ಬಿರುಕನ್ನು ಮೂಡಿಸುವ ಅಪಾಯವನ್ನು ತಂದೊಡ್ಡಿದೆ.

ಕಳೆದ ಎಪ್ರಿಲ್ 22 ಕೇಂದ್ರದ ನರೇಂದ್ರ ಮೋದಿ ಸರಕಾರದ ಮೇಲೆ ಗಂಭೀರ ಆರೋಪ ಮಾಡಿದ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಎಂಕೆ ಸ್ಟಾಲಿನ್, ಕೇಂದ್ರ ಸರಕಾರವು ಹಿಂದಿ ಭಾಷೇತರರ ಮೇಲೆ ಹಿಂದಿಯನ್ನು ಹೇರುವ ನೀತಿಯನ್ನು ಅನುಸರಿಸುವ ಮೂಲಕ ಸಂವಿಧಾನ ಮತ್ತು ಹಿಂದಿ ಭಾಷೇತರರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ತಿಳಿಸುತ್ತಾ ಕೇಂದ್ರ ಸರಕಾರವು ಇನ್ನೊಂದು ಹಿಂದಿ ವಿರೋಧಿ ಹೋರಾಟಕ್ಕೆ ಅವಕಾಶ ಮಾಡಿಕೊಡದಂತೆ ಎಚ್ಚರಿಸಿದರು. ಈ ಹಿಂದಿನ ಸರಕಾರಗಳು ಹಿಂದಿ ಹೇರಲು ಮುಂದಾದಾಗ ಡಿಎಂಕೆ ಪಕ್ಷವು ನಡೆಸಿರುವ ಹೋರಾಟದ ಇತಿಹಾಸವನ್ನು ಗಮನಿಸಿದಾಗ ಇದು ಟೊಳ್ಳು ಎ್ಚರವಲ್ಲ ಎಂಬುದರ ಅರಿವಾಗುತ್ತದೆ.

ಡಿಎಂಕೆಯಿಂದ ಇಂತಹ ಹೇಳಿಕೆ ಬರಲೂ ಒಂದು ಕಾರಣವಿದೆ. ಇತ್ತೀಚೆಗಷ್ಟೇ ಸಂಸತ್ ಸಮಿತಿಯು ರಾಜಕೀಯ ಗಣ್ಯರು ಹಿಂದಿ ಭಾಷೆಯನ್ನು ಓದಲು ಮತ್ತು ಮಾತನಾಡಬಲ್ಲರಾದರೆ ಅಂಥವರು ತಮ್ಮ ಭಾಷಣವನ್ನು ಹಿಂದಿ ಭಾಷೆಯಲ್ಲೇ ಮಾಡಬೇಕು ಎಂದು ನೀಡಿದ ಸಲಹೆಯನ್ನು ರಾಷ್ಟ್ರಪತಿಯವರೂ ಒಪ್ಪಿದ್ದೇ ಈ ಹೇಳಿಕೆಗೆ ಕಾರಣವಾಯಿತು.

ಕೇಂದ್ರ ಸರಕಾರ ಸ್ವಾಮ್ಯತೆಯ ಎಲ್ಲಾ ಶಾಲೆಗಳಲ್ಲಿ ಮತ್ತು ಕೇಂದ್ರ ವಿದ್ಯಾಲಯಗಳಲ್ಲಿ ಎಂಟನೆ ತರಗತಿಯಿಂದ ಹಿಂದಿಯನ್ನು ಕಡ್ಡಾಯವಾಗಿಸುವ ಕ್ರಮಕ್ಕೂ ಕೂಡಾ ರಾಷ್ಟ್ರಪತಿಯವರು ಒಪ್ಪಿಗೆ ಸೂಚಿಸಿದ್ದರು. ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡಾ ಹಿಂದಿ ಭಾಷೆಯಲ್ಲೇ ಟಿಕೆಟ್ ನೀಡಬೇಕೆಂದೂ ಸೂಚಿಸಲಾಗಿತ್ತು. ಮೋದಿ ಮತ್ತು ಸಂಘ ಪರಿವಾರಕ್ಕೆ ‘ಹಿಂದು, ಹಿಂದಿ ಮತ್ತು ಹಿಂದೂಸ್ಥಾನ್’ ಈ ಮೂರು ಪದಗಳು ಎಂದಿಗೂ ನಂಬಿಕೆಯ ವಿಷಯವಾಗಿವೆ. ಆರೆಸ್ಸೆಸ್‌ನ ಸೈದ್ಧಾಂತಿಕ ಗುರು ಗೋಳ್ವಾಲ್ಕರ್ ತಮ್ಮ ಪುಸ್ತಕ ‘‘ನಾವು ಅಥವಾ ನಮ್ಮ ರಾಷ್ಟ್ರೀಯತೆ’’ಯ ಮರುವ್ಯಾಖ್ಯಾನದಲ್ಲಿ ಹೀಗೆ ಬರೆಯುತ್ತಾರೆ: ಹಿಂದೂಸ್ಥಾನವೆಂಬ ಈ ದೇಶದಲ್ಲಿ ಹಿಂದೂ ಜನಾಂಗ ತನ್ನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಮತು ಹಿಂದಿ ಭಾಷೆಯೊಂದಿಗೆ ಈ ದೆೀಶವನ್ನು ಸಂಪೂರ್ಣಗೊಳಿಸುತ್ತದೆ.

ಗೋಳ್ವಾಲ್ಕರ್ ಭೌಗೋಳಿಕ, ಜನಾಂಗೀಯ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷೀಯ ಈ ಐದು ವಿಭಾಗಗಳನ್ನು ಒಂದುಗೂಡಿಸುವುದೇ ರಾಷ್ಟ್ರ ನಿರ್ಮಾಣದ ಕಾರ್ಯ ಎಂದು ಭಾವಿಸಿದ್ದರು. ಈ ಸಿದ್ಧಾಂತವೇ ಹಿಂದುತ್ವ ಗುಂಪುಗಳಿಗೆ ಹಿಂದಿ ಯನ್ನು ಭಾರತದ ರಾಷ್ಟ್ರ ಭಾಷೆಯನ್ನಾಗಿ ಮಾಡಲು ಸ್ಫೂರ್ತಿ ನೀಡುತ್ತದೆ. ಭಾರತದಲ್ಲಿ ರಾಷ್ಟ್ರಭಾಷೆ ಎಂಬುದೇ ಇಲ್ಲ. ಸಂವಿಧಾನದಲ್ಲಿ ‘ರಾಷ್ಟ್ರಭಾಷೆ’ ಎಂಬ ಪರಿಕಲ್ಪನೆಯೇ ಇಲ್ಲ. ಅಲ್ಲಿರುವುದು ಕೇವಲ ‘ಅಧಿಕೃತ ಭಾಷೆ’ಗಳ ಪಟ್ಟಿಯಷ್ಟೇ. ಭಾರತದಲ್ಲಿ 122 ಭಾಷೆಗಳಿವೆ. ಕೇಂದ್ರ ಸರಕಾರದ ಅಧಿಕೃತ ವ್ಯವಹಾರಗಳು ಹೆಚ್ಚಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಯುತ್ತವೆ ಮತ್ತು ಅಧಿಕೃತ ಭಾಷೆಗಳೆಂದು ಪರಿಗಣಿಸಲ್ಪಡಬಹುದಾದಷ್ಟು ಹೆಚ್ಚು ಜನರು ಾತನಾಡುವ ಇನ್ನೂ 21 ಭಾಷೆಗಳಿವೆ.
ಅಧಿಕೃತ ಜನಗಣತಿ ಪ್ರಕಾರ ದೇಶದಲ್ಲಿ ಶೇ.45 ಹಿಂದಿ ಭಾಷೆ ಮಾತನಾಡುವ ಜನರಿದ್ದಾರೆ ಎಂದು ತಿಳಿಸಲಾಗಿದ್ದರೂ ವಾಸ್ತವದಲ್ಲಿ ಈ ಪ್ರಮಾಣ ಕೇವಲ ಶೇ.26ವಾಗಿದೆ ಯಾಕೆಂದರೆ ಈ ಗಣತಿಯಲ್ಲಿ ಭೋಜ್ಪುರಿ, ಮಾಗಧಿ ಮಾರ್ವರಿ ಮತ್ತು ಇತರ ಹಲವು ಸಾಂಪ್ರದಾಯಿಕ ಮತ್ತು ಆಡುಭಾಷೆಗಳ ಜನರನ್ನೂ ಹಿಂದಿ ಭಾಷಿಕರೆಂದೇ ತಿಳಿಸಲಾಗಿದೆ. ಹಿಂದಿಯು ದೇಶದ ಅತೀ ದೊಡ್ಡ ಭಾಷೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ದೇಶಲ್ಲಿರುವುದು ಅದೊಂದೇ ಭಾಷೆಯಲ್ಲ.

ಮೋದಿ ಅಧಿಕಾರಕ್ಕೆ ಬಂದ ನಂತರ ಅವರು ಮತ್ತವರ ಪಕ್ಷ ಕೇವಲ ಹಿಂದೂ ಮೊದಲು ಎಂಬ ನೀತಿಯನ್ನು ಮಾತ್ರವಲ್ಲ ಹಿಂದಿ ಮೊದಲು ಎಂಬ ನೀತಿಯನ್ನೂ ಪ್ರೋತ್ಸಾಹಿಸುತ್ತಿದೆ. ಹಿಂದಿನಿಂದಲೂ ಬಿಜೆಪಿ ಇಂಗ್ಲಿಷ್ ವಿರೋಧಿಯಾಗಿದ್ದು ಆ ಪಕ್ಷದ ನಾಯಕರು ಇಂಗ್ಲಿಷ್ ಮಾತನಾಡುವ ಜನರನ್ನು ‘ಮೆಕಾಲೆಯ ಮಕ್ಕಳು’ ಎಂದೇ ಸಂಬೋಧಿಸುತ್ತಾರೆ.ಮೋದಿ ಮತ್ತು ಸಂಘ ಪರಿವಾರಕ್ಕೆ ‘ಹಿಂದೂ, ಹಿಂದಿ ಮತ್ತು ಹಿಂದೂಸ್ಥಾನ’ವು ಎಂದಿಗೂ ನಂಬಿಕೆಯ ವಿಷಯವಾಗಿದೆ.

2014ರ ಮೇಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ದಿನದ ನಂತರ ಎಲ್ಲಾ ಸರಕಾರಿ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಿಂದಿ ಭಾಷೆಯನ್ನೇ ಕಡ್ಡಾಯವಾಗಿ ಬಳಸುವಂತೆ ಮೋದಿ ಸರಕಾರ ಆದೇಶಿಸಿತ್ತು. ಆದರೆ ಇದಕ್ಕೆ ದಕ್ಷಿಣದ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದಾಗ ಈ ನಿಯಮ ಕೇವಲ ಹಿಂದಿ ಮಾತನಾಡುವ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿತ್ತು.

2014ರಲ್ಲಿ ಮೋದಿ, ಅವರ ಸಚಿವರು ಮತ್ತು ಸಂಸದರು ಹಿಂದಿಯಲ್ಲೇ ಮತ್ತು ಕೆಲವರಂತೂ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ತಾನು ವಿದೇಶಿ ನಾಯಕರ ಜೊತೆ ಹಿಂದಿಯಲ್ಲೇ ಮಾತನಾಡುವುದಾಗಿ ಮೋದಿ ಘೋಷಿಸಿದ್ದರು. ಅವರು ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯನ್ನು ಹಿಂದಿಯಲ್ಲೇ ಸಂಬೋಧಿಸಿದ್ದರು, ಗುಜರಾತಿ ಭಾಷೆಯಲ್ಲಿ ಅಲ್ಲ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ನಡೆದ ಸಭೆ ಗಳಲ್ಲಿ ಮೋದಿ ಹಿಂದಿಯಲ್ಲೇ ಮಾತನಾಡಿದ್ದರು. (ಆದರೆ ಅವರು ಧರಿಸಿದ್ದ ಸೂಟಿನ ಮೇಲೆ ಅವರ ಹೆಸರನ್ನು ಮಾತ್ರ ಹಿಂದಿ ಭಾಷೆಯಲ್ಲಿ ಬರೆದಿರಲಿಲ್ಲ ಎಂಬುದು ಬೇರೆ ವಿಚಾರ). ಹಿಂದಿಯನ್ನು ಹೇರುವ ಮೋದಿ ಸರಕಾರದ ಕ್ರಮ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಬಿರುಕನ್ನು ಮೂಡಿಸುವ ಅಪಾಯವನ್ನುಂಟುಮಾಡುತ್ತಿದೆ. ಹಿಂದಿಯನ್ನು ಹೇರುವ ಈ ಕ್ರಮ ದಕ್ಷಿಣ ಮತ್ತು ಪೂರ್ವದ ರಾಜ್ಯಗಳಿಂದ ವಿರೋಧವನ್ನು ಎದುರಿ ಸುತ್ತಿದೆ. 2014ರಲ್ಲಿ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಕಾರಣಕ್ಕೆ ಒರಿಸ್ಸಾದ ಶಾಸಕರೊಬ್ಬರನ್ನು ಸಭಾಪತಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿತ್ತು. (ಒಡಿಯಾ ಭಾಷೆಗೆ ತಮಿಳು, ಕನ್ನಡ, ಸಂಸ್ಕೃತ, ತೆಲುಗು ಮತ್ತು ಮಲಯಾಳಂನಂತೆ ಶಾಸ್ತ್ರೀು ಭಾಷೆಯ ಸ್ಥಾನಮಾನ ನೀಡಲಾಗಿದೆ).

ದಶಕಗಳ ಹಿಂದೆ ನಾನು ಒಂದು ಗುಂಪಿನ ಗುರುತು ಮತ್ತು ರಾಷ್ಟ್ರ-ರಾಜ್ಯ ನಡುವಿನ ಯೋಜನೆಯಲ್ಲಿ ಭಾಷೆಯ ಬಳಕೆಯನ್ನು ವಿಶ್ಲೇಷಿಸಲು ಸಂಯುಕ್ತ ರಾಷ್ಟ್ರ ಸಂಶೋಧನಾ ಸಂಸ್ಥೆಗಾಗಿ ಒಂದು ಅಂತಾರಾಷ್ಟ್ರೀಯ ಯೋಜನೆಯನ್ನು ನಿರ್ದೇಶಿಸಿದ್ದೆ. ಶತಮಾನಗಳಿಂದಲೂ ಮಾದರಿ ರಾಷ್ಟ್ರದ ಕಲ್ಪನೆಯನ್ನು ಸಾಧಿಸುವ ಪ್ರಯತ್ನ ನಡೆಯುತ್ತಲೇ ಇದೆ. ಈ ಪ್ರಕ್ರಿಯೆಯಲ್ಲಿ ಸಮಾಜದ ಒಂದು ಗುಂಪಿನ ಸಾಂಸ್ಕೃತಿಕ ಸಂಪ್ರದಾಯ ಮತ್ತು ಭಾಷೆಯನ್ನು ದೇಶದ ರಾಷ್ಟ್ರೀಯ ಸಂಸ್ಕೃತಿ ಮತ್ತು ರಾಷ್ಟ್ರ ಭಾಷೆ ಎಂದು ಪ್ರದರ್ಶಿಸಲಾಗುತ್ತದೆ.

ಬಹುಭಾಷೆಗಳು ಶಿಕ್ಷಣ ಮತ್ತು ಆಡಳಿತದಲ್ಲಿ ದೀರ್ಘಕಾಲೀನ ಅಥವಾ ಶಾಶ್ವತ ಭಾಷೀಯ ವಿಭಜನೆ ಯನ್ನು ಮೂಡಿಸುವ ಸಾಧ್ಯತೆಯಿದೆ ಎಂದು ಪ್ರಬಲ ಗುಂಪು ವಾದ ಮಾಡುತ್ತದೆ ಮತ್ತು ಸಮೀಕರಣದ ಹೆಸರಲ್ಲಿ ಏಕಭಾಷೆಯನ್ನು ಆರಿಸಿಕೊಳ್ಳುತ್ತಾರೆ.ಅಲ್ಪಸಂಖ್ಯಾತ ಗುಂಪುಗಳ ಸಮಸ್ಯೆಗಳನ್ನು ಅಧಿಕಾರದ ಲ್ಲಿರುವ ಗುಂಪಿನ ಜೊತೆ ಭಾಷೀಯ ಏಕೀಕರಣಗೊಳಿಸುವ ಮೂಲಕ ಪರಿಹರಿಸಬಹುದು ಎಂದೂ ಕೆಲವರು ಸಲಹೆ ನೀಡುತ್ತಾರೆ. ಈ ರೀತಿಯ ಸಮೀಕರಣ ಪ್ರಕ್ರಿಯೆ ಎರಡು ರೀತಿಯಲ್ಲಿ ತಪ್ಪುದಾರಿಗೆಳೆಯುತ್ತದೆ.

ಮೊದಲನೆಯದಾಗಿ ಇದರಿಂದ ಅಲ್ಪಸಂಖ್ಯಾತ ಗುಂಪುಗಳು ಅಧಿಕಾರದಲ್ಲಿರುವ ಗುಂಪುಗಳ ಒತ್ತಡವಿಲ್ಲ ದೆಯೇ ಸ್ವಆಸಕ್ತಿಯಿಂದ ಈ ಸಮೀಕರಣಕ್ಕೆ ಒಪ್ಪಿದ್ದಾರೆ ಎಂಬ ಗ್ರಹಿಕೆ ಮೂಡುತ್ತದೆ. ಎರಡನೆಯದಾಗಿ ಈ ಸಮೀಕರಣದಲ್ಲಿ ಅಲ್ಪಸಂಖ್ಯಾತ ಗುಂಪುಗಳಿಗೂ ಆಯ್ಕೆಯ ಅಕಾಶವಿದೆ ಎಂದು ಬಿಂಬಿಸಲಾಗುತ್ತದೆ.

ಒಂದು ರಾಷ್ಟ್ರೀಯ ಭಾಷೆಯ ಬಳಕೆಯು ಜನಾಂಗೀಯ ಒಗ್ಗಟ್ಟು ಮತ್ತು ಸಂಸ್ಕೃತಿ ಹಂಚಿಕೆಯನ್ನು ಉಂಟು ಮಾಡುವುದಿಲ್ಲ. ಹೆಚ್ಚೆಂದರೆ ಅದು ಗುಂಪುಗಳ ಮಧ್ಯೆ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಹೊರಗಿನ ಪ್ರಪಂಚಕ್ಕೆ ಸಮಾನತೆಯಿದೆ ಎಂಬಂತೆ ಕಂಡುಬರುತ್ತದೆ. ಆದರೆ ಭಾಷೆಯ ಹೇರಿಕೆ ಇತರ ಭಾಷಾ ಗುಂಪುಗಳಿಂದ ಪ್ರತಿರೋಕ್ಕೆ ಅವಕಾಶ ನೀಡುವುದು ನಿಶ್ಚಿತ.

ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಒಂದು ಭಾಷೆಯನ್ನು ಹೇರುವ ಸರಕಾರದ ಪ್ರಯತ್ನವೇ ಪಾಕಿಸ್ತಾನ ವಿಭಜನೆಗೊಂಡು ಬಾಂಗ್ಲಾದೇಶ ಜನ್ಮತಾಳಲು ಕಾರಣವಾಯಿತು. ದೇಶವನ್ನು ಒಗ್ಗಟ್ಟಾಗಿಡಲು ಸಮಾನ ಧಾರ್ಮಿಕ ಗುರುತಿನಿಂದ ಕೂಡಾ ಸಾಧ್ಯವಾಗಲಿಲ್ಲ. ಏಕಭಾಷಾ ನೀತಿ ಶ್ರೀಲಂಕಾ ಮತ್ತು ಟರ್ಕಿಯಲ್ಲಿ ಕೂಡಾ ನಾಗರಿಕ ಹೋರಾಟಗಳನ್ನು ಹುಟ್ಟುಹಾಕಿತ್ತು. ಸ್ಪೇನ್‌ನ ಕಾಟಲೋನಿಯಾ ಮತ್ತು ಕೆನಡಾದ ಕ್ಯೂಬೆಕ್‌ನಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದಿ ಚಳವಳಿಗಳ ಮೂಲ ಕೂಡಾ ಭಾಷೆಯೇ ಆಗಿದೆ.

ಬಹುತೇಕ ರಾಷ್ಟ್ರಗಳಲ್ಲಿ ಅವುಗಳು ಅಭಿವೃದ್ಧಿ ಹೊಂದುತ್ತಿರಲಿ, ಕೈಗಾರೀಕಿಕರಣಗೊಂಡಿರಲಿ, ಪ್ರಜಾಪ್ರಭುತ್ವ ಅಥವಾ ಸರ್ವಾಧಿಕಾರವೇ ಆಗಿರಲಿ ಅಲ್ಪಸಂಖ್ಯಾತ ಭಾಷಾ ಗುಂಪುಗಳು ತಮ್ಮ ಭಾಷೆಯನ್ನುಳಿಸಲು ಯಾವುೇ ಬೆಲೆ ತೆರಲೂ ಸಿದ್ಧವಾಗಿರುತ್ತದೆ. ನಮ್ಮ ಯುಎನ್ ಯೋಜನೆಯಲ್ಲಿ ಕಂಡುಕೊಂಡಂತೆ ಭಾಷೆಯು ಕೇವಲ ಗುರುತನ್ನು ಕಾಪಾಡಲು ಮಾತ್ರ ಮುಖ್ಯವಲ್ಲ ಆದರೆ ಗುಂಪುಗಳು ಅಧಿಕಾರಕ್ಕೇರಲು ಕೂಡಾ ಅವು ಮುಖ್ಯವಾಗುತ್ತವೆ. ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಬಲ್ಯಕ್ಕಿಂತ ಭಾಾ ಪ್ರಾಬಲ್ಯವೇ ಪ್ರಮುಖವಾಗುತ್ತದೆ.

ಭಾರತದಲ್ಲಿ ಹಿಂದಿ ವಿರೋಧಿ ಪ್ರತಿಭಟನೆ ಇದು ಮೊದಲೇನಲ್ಲ, ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಈಗಾಗಲೇ ಈ ಹಿಂದೆ ತಮಿಳುನಾಡು ಎರಡು ಬೃಹತ್ ಹಿಂದಿ ವಿರೋಧಿ ಹೋರಾಟಗಳನ್ನು ಕಂಡಿದೆ. 1965ರಲ್ಲಿ ಡಿಎಂಕೆ ನೇತೃತ್ವದಲ್ಲಿ ನಡೆದ ಹೋರಾಟವು ಹಿಂದಿಯನ್ನು ಏಕಮಾತ್ರ ಅಧಿಕೃತ ಭಾಷೆಯನ್ನಾಗಿ ಮಾಡುವ ಅಂದಿನ ಲಾಲ್ ಬಹದ್ದೂರ್ ಶಾಸ್ತ್ರಿ ಸರಕಾರದ ವಿವೇಚನಾರಹಿ ಯೋಜನೆಯನ್ನು ಸ್ಥಗಿತಗೊಳಿಸಿತ್ತು.

ಪ್ರಸ್ತುತ ಸರಕಾರ ಮತ್ತೊಮ್ಮೆ ಹಿಂದಿಯನ್ನು ಹೇರಲು ನೋಡುತ್ತಿರುವುದು ಕೇವಲ ತಮಿಳುನಾಡಿನಲ್ಲಿ ಮಾತ್ರ ಆತಂಕದ ವಾತಾವರಣವನ್ನು ಸೃಷ್ಟಿಸಿಲ್ಲ ಆದರೆ ಇತರ ಹಿಂದಿಯೇತರ ರಾಜ್ಯಗಳಿಗೂ ಒಂದು ರೀತಿಯ ಅಸಮಾಧಾನ ಕಾಡುತ್ತಿದೆ. ಮೋದಿಯ ಹಿಂದೂ ಮೊದಲು ನೀತಿಯು ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿಗೆ ಹೊಸ ಜೀವ ನೀಡಿದೆ. ಈಗ ಹಿಂದಿ ಮೊದಲು ನೀತಿಯನ್ನು ಕೂಡಾ ಅದೇ ರೀತಿಯಲ್ಲಿ ಹೇರಲು ಮುಂದಾದರೆ ದಕ್ಷಿಣ ಮತ್ತು ಪೂರ್ವದ ರಾಜ್ಯಗಳಲ್ಲೂ ಇದೇ ಮಾದರಿಯ ಹಲವು ಚಳವಳಿಗಳು ಆರಂಭವಾಗಬಹುದು.

ಕಳೆದ ಎಪ್ರಿಲ್ 23ರಂದು ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಹೀಗೆ ಟ್ವೀಟ್ ಮಾಡಿದ್ದರು: ಸಾಂಸ್ಕೃತಿಕ, ಭಾಷೀಯ ಮತ್ತು ಜನಾಂಗೀಯ ವೈವಿಧ್ಯತೆಗೆ ಪ್ರಸಿದ್ಧವಾಗಿರುವ ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ಉಪ-ರಾಷ್ಟ್ರೀಯ ಗುರುತನ್ನು ಗೌರವಿಸದಿದ್ದರೆ ಅದು ಪ್ರತ್ಯೇಕತಾವಾದಿ ಚಳವಳಿಗಳು ಹುಟ್ಟಲು ಅವಕಾಶ ಮಾಡಿಕೊಟ್ಟಂತೆ.


 

Writer - -ವಿಸ್ಮಯ

contributor

Editor - -ವಿಸ್ಮಯ

contributor

Similar News