ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಹಾಪ್‌ಕಾಮ್ಸ್-ಕೆಎಂಎಫ್ ಮಳಿಗೆ: ಸಚಿವ ರಮೇಶ್‌ ಕುಮಾರ್

Update: 2017-04-28 16:42 GMT

ಬೆಂಗಳೂರು,ಎ.28: ರಾಜ್ಯದಲ್ಲಿನ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಹಾಪ್‌ಕಾಮ್ಸ್ ಹಾಗೂ ಕೆಎಂಎಫ್ ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಹಡ್ಸನ್ ವೃತ್ತದಲ್ಲಿ ಹಾಪ್‌ಕಾಮ್ಸ್ ಹಮ್ಮಿಕೊಂಡಿದ್ದ ಮಾವು ಮತ್ತು ಹಲಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಾಲು ಉತ್ಪನ್ನ ಮತ್ತು ಹಣ್ಣು ಹಂಪಲುಗಳು ರೋಗಿಗಳಿಗೆ ಸುಲಭವಾಗಿ ದೊರಕುವಂತೆ ಮಾಡಲು ಹಾಪ್‌ಕಾಮ್ಸ್ ಹಾಗೂ ಕೆಎಂಎಫ್ ಮಳಿಗೆಗಳನ್ನು ಆಸ್ಪತ್ರೆ ಆವರಣದಲ್ಲಿ ತೆರಯಲು ಶೀಘ್ರದಲ್ಲೇ ಸರಕಾರದಿಂದ ಆದೇಶ ಹೊರಡಿಸಲಾಗಿದೆ. ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು, ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗದ ಲಕ್ಷಣಗಳು ಭಾದಿಸಲಿವೆ. ಹೀಗಾಗಿ ನೈಸರ್ಗಿಕವಾಗಿ ಹಣ್ಣಾದ ಹಂಪಲುಗಳನ್ನು ಸೇವನೆಗೆ ಆದ್ಯತೆ ನೀಡಬೇಕು ಎಂದರು.

ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ರೈತರಿಂದ ನೇರವಾಗಿ ಖರೀದಿ ಮಾಡಿದಂತಹ ಕಾರ್ಬೈಡ್ ಮುಕ್ತ, ಸಾವಯವ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಮಾರಾಟಕ್ಕೆ ಉತ್ತೇಜನ ನೀಡಲಾಗುವುದು. ಈ ನಿಟ್ಟಿನಲ್ಲಿ ಎಥಿಲೀನ್‌ನಿಂದ ಮಾವು, ಬಾಳೆ ಹಣ್ಣುಗಳನ್ನು ಮಾಗಿಸುವ ಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಯ ರೈತರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ ಮಾತನಾಡಿ, ಮೇಳದ ಮೊದಲನೇ ದಿನವೇ ಏಳು ಲಕ್ಷ ರೂ. ವಹಿವಾಟು ನಡೆದಿದೆ. ಬಾದಾಮಿ, ರಸಪುರಿ, ಆಲ್ಫನ್ಸೋ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸುಮಾರು 275ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಾವಿರ ಮೆಟ್ರಿಕ್ ಟನ್ ಮಾವು ಮತ್ತು 200 ಮೆಟ್ರಿಕ್ ಟನ್‌ಗಳಷ್ಟು ಹಲಸಿನ ಹಣ್ಣುಗಳ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ಬರಗಾಲ ಆವರಿಸಿದ್ದರಿಂದ ಈ ಬಾರಿ ಇಳುವರಿ ಕಡಿಮೆಯಾಗಿದೆ ಎಂದು ತಿಳಿಸಿದರು. ಮೇಯರ್ ಜಿ. ಪದ್ಮಾವತಿ, ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕನಿಷ್ಠ ಬೆಲೆ ಘೋಷಿಸಲಿ
ಮಾವಿನ ಜತೆಗೆ ಎಲ್ಲ ಪ್ರಕಾರದ ಹಣ್ಣು, ತರಕಾರಿ ಮತ್ತು ಹೂವುಗಳ ಬೆಲೆಗೆ ಸರಕಾರ ಆರು ತಿಂಗಳು ಮೊದಲೇ ಕನಿಷ್ಠ ಬೆಲೆ ನಿಗದಿಪಡಿಸಬೇಕು. ಇದರಿಂದ ರೈತರು ಲಾಭದತ್ತ ಹೊರಳಲು ಸಾಧ್ಯವಾಗುತ್ತದೆ. ಇದು ಆರಂಭದಲ್ಲಿ ಕಷ್ಟ ಆಗಬಹುದು. ಆದರೆ, ನಂತರದ ದಿನಗಳಲ್ಲಿ ರೈತರು ಬೆಲೆ ಕುಸಿತದಿಂದ ಕಂಗಾಲಾಗುವ ಪ್ರಶ್ನೆಯೇ ಬರುವುದಿಲ್ಲ.
-ಕೆ.ಆರ್.ರಮೇಶ್ ಕುಮಾರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News