ಸಿಂಧೂತಾಯಿ ಸಪ್ಕಾಳ್ ಅವರಿಗೆ ಬಸವ ಪುರಸ್ಕಾರ: ಉಮಾಶ್ರೀ

Update: 2017-04-28 17:12 GMT

ಬೆಂಗಳೂರು, ಎ.28 : 2016ನೆ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರವನ್ನು ಮಹಾರಾಷ್ಟ್ರದ ಸಮಾಜ ಸೇವಕಿ ಸಿಂಧೂತಾಯಿ ಸಪ್ಕಾಳ್ ಅವರಿಗೆ ಘೋಷಿಸಿದ್ದು, ಮೇ 3ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಸಿಂಧೂ ತಾಯಿ ಸಪ್ಕಾಳ್ ಅವರು ಅನಾಥ ಮಕ್ಕಳ ತಾಯಿ ಎಂದೇ ಹೆಸರಾದವರು. ಇವರು ಅನಾಥ ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇದುವರೆಗೂ ರಾಷ್ಟ್ರ ಮಟ್ಟದ 273 ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಈ ಎಲ್ಲ್ಲ ಪ್ರಶಸ್ತಿಗಳ ಮೊತ್ತವನ್ನು ಸನ್ಮತಿ ಬಾಲನಿಕೇತನ ಸಂಸ್ಥೆಯ ಮೂಲಕ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಬಳಸುತ್ತಿದ್ದಾರೆ.

ಪ್ರಸ್ತುತ 300 ಮಕ್ಕಳನ್ನು ಅವರು ಪೋಷಿಸುತ್ತಿದ್ದಾರೆ. ಇವರ ಬಗ್ಗೆ ಚಲನಚಿತ್ರವೂ ನಿರ್ಮಾಣವಾಗಿದೆ. ಈ ಪ್ರಶಸ್ತಿಯನ್ನು ನ್ಯಾ.ಎ.ಜೆ.ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು 10 ಲಕ್ಷ ರೂ.ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ಅದೇ ರೀತಿ 2016ನೆ ಸಾಲಿನ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನುಚೆನ್ನೈನ ಪ್ರಸಿದ್ದ ವಿದ್ವಾನ್ ಟಿ.ಎಚ್.ನಾಯಕ ರಾಂ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು 10 ಲಕ್ಷ ರೂ.ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ಬಿ.ವಿ.ಕಾರಂತ ಪ್ರಶಸ್ತಿಗೆ ಶ್ರೀನಿವಾಸ ಜಿ ಕಪ್ಪಣ್ಣ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿಗೆ ಚಿಂದೋಡಿ ಶ್ರೀಕಂಠೇಶ್, ಸಂತ ಶಿಶುನಾಳ ಪ್ರಶಸ್ತಿಗೆ ವೈ.ಕೆ.ಮುದ್ದುಕೃಷ್ಣ, ನಿಜಗುಣ ಪುರಂದರ ಪ್ರಶಸ್ತಿಗೆ ಪಂ.ಗಣಪತಿ ಭಟ್ ಹಾಸಣಗಿ, ಶಾಂತಲಾ ನಾಟ್ಯ ಪ್ರಶಸ್ತಿಗೆ ಉಷಾ ದಾತಾರ್, ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಹಸನ್ ನಯೀಂ ಸುರಕೋಡ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಶಾಂತಿ ನಾಯಕ, ಜಾನಪದ ಶ್ರೀ ಪ್ರಶಸ್ತಿಗೆ ಲಲಿತಾ ರಾಚಪ್ಪ ಪಾತ್ರೋಟ, ಕುಮಾರವ್ಯಾಸ ಪ್ರಶಸ್ತಿಗೆ ಎನ್.ಆರ್.ಜ್ಞಾನಮೂರ್ತಿ, ಜಕಣಾಚಾರಿ ಪ್ರಶಸ್ತಿಗೆ ವೈ.ಯಂಕಪ್ಪ, ವರ್ಣಶಿಲ್ಪಿವೆಂಕಟಪ್ಪ ಪ್ರಶಸ್ತಿಗೆ ಮಹಾವೀರ ರಾಯಪ್ಪಬಾಳಿಕಾಯಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಡಾ.ಚನ್ನಣ್ಣ ವಾಲೀಕಾರ ಅವರನ್ನು ಆಯ್ಕೆ ಮಾಡಿದ್ದು, ಈ ಎಲ್ಲ ಪ್ರಶಸ್ತಿಗಳು ತಲಾ 3ಲಕ್ಷ ರೂ.ನಗದು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಒಳಗೊಂಡಿವೆ.

ಈ ಎಲ್ಲ ಪ್ರಶಸ್ತಿಗಳನ್ನು ಮೇ 3ರ ಬುಧವಾರ ಸಂಜೆ 7ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರದಾನ ಮಾಡಲಿದ್ದಾರೆ ಎಂದು ಸಚಿವೆ ಉಮಾಶ್ರೀ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News