ಬುದ್ಧಿಜೀವಿಗಳ ಪುಸ್ತಕಗಳನ್ನು ನೀರಿಗೆ ಹಾಕಿ ಆಕ್ರೋಶ

Update: 2017-04-28 17:27 GMT

ಬೆಂಗಳೂರು, ಎ.28: ವೈಚಾರಿಕತೆ ಪಾಠ ಹೇಳುವ ಬುದ್ಧಿಜೀವಿಗಳು, ಇಂದು ಪುರೋಹಿತಶಾಹಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿ ಪ್ರಮುಖ ಲೇಖಕರ ಪುಸ್ತಕಗಳನ್ನು ನೀರಿಗೆ ಹಾಕಿ ಕರ್ನಾಟಕ ಪ್ರಗತಿಪರರ ವೇದಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಪುರಭವನದ ಎದುರು ಕರ್ನಾಟಕ ಪ್ರಗತಿಪರರ ವೇದಿಕೆ ಸದಸ್ಯರು, ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ, ಆರ್.ಜಿ.ಹಳ್ಳಿ ನಾಗರಾಜ್ ಸೇರಿ ಪ್ರಮುಖರು ಬರೆದಿರುವ ಪುಸ್ತಕಗಳನ್ನು ನೀರಿದ್ದ ಬಕೆಟ್‌ನಲ್ಲಿ ಹಾಕುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಸಂಚಾಲಕ ಅರುಣ್ ಮಲ್ನಾಡ್, ಸಾರ್ವಜನಿಕ ಸಮಾರಂಭ, ವಿಚಾರಸಂಕಿರಣ, ಸಂವಾದಗಳಲ್ಲಿ, ವೈಚಾರಿಕತೆಯ ಬೀಜ ಬಿತ್ತುವ ನಾಡಿನ ಪ್ರಗತಿಪರರು, ಬುದ್ಧಿಜೀವಿಗಳು ಇಂದು ಪುರೋಹಿತರಂತೆಯೇ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ, ಅವರ ಪುಸ್ತಕಗಳಿಗೆ ಯಾವ ಬೆಲೆಯನ್ನೂ ನೀಡದೆ, ನೀರಿಗೆ ಹಾಕಿದ್ದೇವೆ ಎಂದು ಹೇಳಿದರು.

ಬರಹಗಾರ ಆರ್.ಜಿ.ಹಳ್ಳಿ ನಾಗರಾಜ್ ಅವರು ಒಂದು ಕಾಲದಲ್ಲಿ ಅಂತರ್ಜಾತಿ ವಿವಾಹಗಳಿಗೆ ಸಾಕ್ಷೀಭೂತರಾಗಿದ್ದರು. ಆದರೆ, ಇತ್ತೀಚಿಗೆ ಅವರ ಪುತ್ರಿಗೆ ಆಡಂಬರದ ವಿವಾಹ ಮಾಡಿ, ಪುರೋಹಿತರ ಗುಲಾಮಗಿರಿಗೆ ಒಳಗಾಗಿ ತೀರ್ಥ ಬಿಟ್ಟಿದ್ದು, ಕುವೆಂಪು ವಿಚಾರಕ್ಕೆ ಮಾಡಿದ ದ್ರೋಹ. ಅದೇ ರೀತಿ, ಸಂಪತ್ತಿನ ಅಸಹ್ಯ ಪ್ರದರ್ಶನದ ವಿರುದ್ಧ ನಿಲುವು ಹೊಂದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ತಮ್ಮ ಪುತ್ರನ ಅದ್ಧೂರಿ ವಿವಾಹ ಮಾಡುವ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಎಲ್ಲಿಯೂ ಹೇಳಿಕೊಳ್ಳಬೇಡಿ ಎಂದು ಪ್ರೊ.ಎಸ್.ಜಿ.ಎಸ್ ನುಡಿದಿದ್ದರು ಎಂದು ಅರುಣ್ ಮಲ್ನಾಡ್ ಆರೋಪಿಸಿದರು.

ಇದಕ್ಕೂ ಮೊದಲು ವಿ.ಆರ್.ಕಾರ್ಪೆಂಟರ್ ಮಾತನಾಡಿ, ನಮ್ಮ ಯುವಜನತೆ ಇವರ ಸುಳ್ಳಿನ ರಾಶಿಗಳನ್ನು ಓದಿ ಹಾದಿ ತಪ್ಪುತ್ತಿದ್ದಾರೆ. ಒಬ್ಬ ಬರಹಗಾರನಿಗಿರಬೇಕಾದ ಪ್ರಾಮಾಣಿಕತೆಯನ್ನು ಇವರು ಕಳೆದುಕೊಂಡಿದ್ದಾರೆ. ಇಂತಹ ಪ್ರಗತಿಪರರ ಮಾತುಗಳು ನಂಬಿ ಮೋಸ ಹೋಗಬೇಡಿ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕರಾದ ವಿ.ಎಂ.ಮಂಜುನಾಥ್, ನಾರಾಯಣಗೌಡ, ಪ್ರದೀಪ್‌ತಿಪಟೂರು, ಲಿಂಗದಹಳ್ಳಿ ಚೇತನ್‌ಕುಮಾರ್, ಶ್ರೀನಿಧಿ, ಸುನೀಲ್ ಚಿತ್ರದುರ್ಗ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News