ಬಡವರಿಗೆ ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ:ವಿಕ್ರಮ್‌ಜೀತ್ ಸೇನ್

Update: 2017-04-28 17:50 GMT

ಬೆಂಗಳೂರು ಎ. 28: ರಾಜ್ಯದ ಸರಕಾರಿ ಸೇರಿದಂತೆ ಎಲ್ಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬಡಜನರಿಗೆ ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ ನೀಡುವ ಕುರಿತಂತೆ ತಜ್ಞರ ಸಮಿತಿ ಅಂತಿಮ ವರದಿ ಸಿದ್ಧಪಡಿಸುತ್ತಿದೆ ಎಂದು ಸಮಿತಿಯ ಮುಖ್ಯಸ್ಥರೂ ಆಗಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜೀತ್ ಸೇನ್ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸಮಿತಿಯ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿದ್ದುಪಡಿಯ ಅಂಶಗಳ ಬಗ್ಗೆ ಮಾಹಿತಿ ನೀಡಿದರು, 2007 ರಲ್ಲಿ ರಾಜ್ಯ ಸರಕಾರ ತಂದಿರುವ ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಜನಸಾಮಾನ್ಯರಿಗೆ ರಾಜ್ಯದೆಲ್ಲೆಡೆ ಗುಣಮಟ್ಟದ ಚಿಕಿತ್ಸೆಯ ಸಂಪೂರ್ಣ ಮಾಹಿತಿ ಪಾರದರ್ಶಕವಾಗಿರುವಂತೆ ಎಲ್ಲ್ಲ ಆಸ್ಪತ್ರೆಗಳು ದಾಖಲುಗಳನ್ನು ನಮೂದಿಸತಕ್ಕದ್ದು ಎಂದರು.

 ರಾಜ್ಯದಲ್ಲಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಇನ್ನಷ್ಟು ಪಾರದರ್ಶಕವಾಗಿರುವಂತೆ ಮಾಡುವುದೇ ಸಮಿತಿ ಮಾಡುವ ಶಿಫಾರಸ್ಸುಗಳಲ್ಲಿ ಒಂದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಚಿಕಿತ್ಸಾ ವಿವರವನ್ನು ಒದಗಿಸತಕ್ಕದ್ದು, ನೋಂದಣಿ ಮಾಡಿಕೊಂಡ ಎಲ್ಲ್ಲ ವೈದ್ಯರು ರೋಗಿಗಳಿಗೆ ನೀಡಿರುವ ಚಿಕಿತ್ಸಾ ವಿಧಾನವನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಸೂಚಿಸಿದರು.

  ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಾಧಿಕಾರಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡಲು ಅನುಕೂಲವಾಗುವಂತೆ ಪ್ರಾಧಿಕಾರ ರಚಿಸುವಂತೆ ಮತ್ತೊಂದು ಶಿಫಾರಸ್ಸು ಮಾಡಿದೆ, ರೋಗಿಯ ಸಂಪೂರ್ಣ ವಿವರವನ್ನು ಆತನ ಕುಟುಂಬದ ಸದಸ್ಯರಿಗೆ ಕಡ್ಡಾಯವಾಗಿ ನೀಡಬೇಕು ಎಂದು ತಜ್ಞರ ಸಮಿತಿ ಸಲಹೆ ಮಾಡಿದೆ ಎಂದರು.

ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿ, ನ್ಯಾ.ವಿಕ್ರಮ್ ಜಿತ್‌ಸೇನ್ ನೇತೃತ್ವದ ಸಮಿತಿ ನೀಡುವ ವರದಿಯನ್ನು ಅನಂತರ ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆ ಮಾಡಿ ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ನೀಡುವ ನೂತನ ಕಾಯ್ದೆಯಡಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವುದೆ ನೂತನ ಕಾಯ್ದೆಯ ಮುಖ್ಯ ಉದ್ದೇಶ , ಆ ಹಿನ್ನೆಲೆಯಲ್ಲಿ 2007ರ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News