ಆರ್‌ಟಿಇ ಸೀಟು ಹಂಚಿಕೆ ಶುಲ್ಕ ವಸೂಲಿ ಮಾಡುವ ಸಂಸ್ಥೆಗೆ 10ಲಕ್ಷ ರೂ.ದಂಡ: ತನ್ವೀರ್ ಸೇಠ್

Update: 2017-04-29 13:49 GMT

ಬೆಂಗಳೂರು, ಎ. 29: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 10 ಲಕ್ಷ ರೂ.ಗಳ ವರೆಗೆ ದಂಡ ವಸೂಲಿ ಅವಕಾಶವಿರುವ ಕಠಿಣ ಕಾನೂನು ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಎಚ್ಚರಿಸಿದ್ದಾರೆ.

ಶುಕ್ರವಾರ ಇಲ್ಲಿನ ನೃಪತುಂಗ ರಸ್ತೆಯಲ್ಲಿನ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಆರ್‌ಟಿಇ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಉಚಿತ ಶಿಕ್ಷಣ ನೀಡಬೇಕಿದ್ದರೂ ವಿವಿಧ ಕಾರಣಗಳನ್ನು ನೀಡಿ ಖಾಸಗಿ ಸಂಸ್ಥೆಗಳು ಹಣ ಸಂಗ್ರಹಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಾರಿ ದೂರುಗಳು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪೋಷಕರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಹಣ ನೀಡಲು ಒತ್ತಾಯಿಸಿದರೆ ಈ ಬಗ್ಗೆ ಪೋಷಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದು ಎಂದು ಸೂಚಿಸಿದರು.

ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೆ ಲಾಟರಿ ಮೂಲಕ 1.29ಲಕ್ಷ ಸೀಟು ಹಂಚಿಕೆ ಮಾಡಲಾಗಿದೆ. ಆರ್‌ಟಿಇ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 2,10,661 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 2.02ಲಕ್ಷ ಅರ್ಜಿಗಳನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.

ಅರ್ಜಿ ಸಲ್ಲಿಸಿರುವವರಿಗೆ ಯಾವ ಶಾಲೆಯಲ್ಲಿ ಸೀಟು ಸಿಕ್ಕಿದೆ ಎಂಬ ಬಗ್ಗೆ ಮೊಬೈಲ್‌ಗೆ ಎ.30ರ ರವಿವಾರದೊಳಗೆ ಎಸ್‌ಎಂಎಸ್ ಸಂದೇಶ ರವಾನಿಸಲಿದ್ದು, ಮೇ 2ರಿಂದ ಮೇ 10ರ ಒಳಗಾಗಿ ಆಯಾ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಆರ್‌ಟಿಇ ಅಡಿಯಲ್ಲಿ 25 ಸಾವಿರ ಸೀಟುಗಳು ಹೆಚ್ಚಳವಾಗಿವೆ. ರಾಜ್ಯದಲ್ಲಿನ ಒಟ್ಟು 11,917 ಖಾಸಗಿ ಶಾಲೆಗಳಿವೆ. ವಿಶೇಷ ವರ್ಗದಡಿಯಲ್ಲಿ ಒಟ್ಟು 312 ಮಂದಿ ವಿದ್ಯಾರ್ಥಿಗಳಿಗೆ ನೇರವಾಗಿ ಸೀಟುಗಳು ದೊರೆಯಲಿವೆ ಎಂದು ಅವರು ವಿವರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗಿದೆ ಎಂದ ತನ್ವೀರ್ ಸೇಠ್, ಮೇ 10ರ ಬಳಿಕ ಆರ್‌ಟಿಇ ಅಡಿಯಲ್ಲಿ ಲಾಟರಿ ಮೂಲಕ ಎರಡನೆ ಹಂತದ ಸೀಟು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ತಡೆಯಾಜ್ಞೆ ತೆರವು: ಸಿಬಿಎಸ್‌ಇ ಪಠ್ಯಕ್ರಮದ 46 ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಅಡಿಯಲ್ಲಿ ಸೀಟುಗಳನ್ನು ನೀಡುವುದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವಿಗೆ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದು ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದರು.


‘ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳು ಆಯಾ ಶಾಲೆಗಳಲ್ಲೆ ಸಮವಸ್ತ್ರ- ಪಠ್ಯ ಪುಸ್ತಕಗಳನ್ನು ಖರೀದಿಸಬೇಕೆಂದು ಶಾಲೆಗಳು ಸೂಚಿಸುವಂತಿಲ್ಲ. ಪೋಷಕರು ಮಾರುಕಟ್ಟೆಯಲ್ಲಿ ಅವುಗಳನ್ನು ಖರೀದಿಸಬಹುದು. ರಾಜ್ಯ ಪಠ್ಯಕ್ರಮದ ಮಕ್ಕಳಿಗೆ ಉಚಿತವಾಗಿ ಪಠ್ಯ-ಪುಸ್ತಕಗಳನ್ನು ವಿತರಿಸಲಾಗುವುದು’

-ಅಜಯ್ ಸೇಟ್ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News