ಅಂತರ್ಜಾತಿ ವಿವಾಹಿತರ ನೆರವಿಗೆ ನಿಧಿ : ನಿಡುಮಾಮಿಡಿ ಸ್ವಾಮಿ ಸಲಹೆ

Update: 2017-04-29 14:15 GMT

ಬೆಂಗಳೂರು, ಎ. 29: ರಾಜ್ಯದಲ್ಲಿ ನಡೆಯುತ್ತಿರುವ ಅಂತರ್ಜಾತಿ ವಿವಾಹವನ್ನು ದಲಿತ ಸಮುದಾಯಕ್ಕೆ ಸೀಮಿತಗೊಳಿಸುವ ಬದಲು ‘ಸಮಗ್ರ ಅಂತರ್ಜಾತಿ ವಿವಾಹ’ ಎಂದು ಗುರುತಿಸಬೇಕು ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಶನಿವಾರ ನಗರದ ನಿಡುಮಾಮಿಡಿ ಮಠದಲ್ಲಿ ದಲಿತ ಹಕ್ಕುಗಳ ಸಮಿತಿ ಬಸವಜಯಂತಿ ಅಂಗವಾಗಿ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಂತರ್ಜಾತಿ ವಿವಾಹವಾಗುವ ಜೋಡಿ, ವರ್ಗ ಮತ್ತು ಧರ್ಮವನ್ನು ಮೀರಿದ ಸಮಾಜವನ್ನು ಸೇರುವಂತವರು. ರಾಜ್ಯದಲ್ಲಿ ದಲಿತರನ್ನು ಮದುವೆಯಾಗುವವರಿಗೆ ನೀಡುವ ಸವಲತ್ತುಗಳಿಂದ ಅಂತರ್ಜಾತಿ ವಿವಾಹಗಳಿಗೆ ದಲಿತರ ಅಂತರ್ಜಾತಿ ವಿವಾಹ ಎಂಬ ಪಟ್ಟಕಟ್ಟಲಾಗುತ್ತಿದೆ. ಆದುದರಿಂದ ಇದು ಬದಲಾಗಿ ಒಟ್ಟು ಅಂತರ್ಜಾತಿ ವಿವಾಹವೆಂದು ಕರೆಯಬೇಕು ಎಂದು ತಿಳಿಸಿದರು.

 ಅಂತರ್ಜಾತಿ ವಿವಾಹವಾಗುವವರಿಗೆ ಇನ್ನಷ್ಟು ಭದ್ರತೆ ಕಲ್ಪಿಸಬೇಕಿದೆ. ಅಂತರ್ಜಾತಿ ವಿವಾಹವಾಗುವವರ ನೆರವಿಗೆ ನಿಧಿಯನ್ನು ಸ್ಥಾಪಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು. ಅಂತರ್ಜಾತಿ ವಿವಾಹ ನಿಧಿಯನ್ನು ಸ್ಥಾಪಿಸಲು ಮಠದಿಂದ ಬೆಂಬಲವೂ ನೀಡುತ್ತೇವೆ ಎಂದ ಅವರು, ಮಠದಿಂದ ನಿಧಿಗೆ ಒಂದು ಲಕ್ಷ ರೂ. ನೀಡುವುದಾಗಿ ಸ್ಥಳದಲ್ಲೇ ಘೋಷಣೆ ಮಾಡಿದರು.

  ನಮ್ಮ ದೇಶದಲ್ಲಿ ಜಾತಿ ವಿನಾಶದ ಹೋರಾಟಗಳು ಯಶ ಕಾಣುವ ವಾತಾವರಣ ನಮ್ಮಲ್ಲಿಲ್ಲ. ಅಂಬೇಡ್ಕರ್ ಮತ್ತು ಬಸವಣ್ಣ ನೂರು ಬಾರಿ ಹುಟ್ಟಿದರೂ ದೇಶದಲ್ಲಿ ಜಾತೀಯತೆ ಹೋಗಲಾರದು. ಏಕೆಂದರೆ ಜಾತೀಯತೆಯ ಬೇರು ನಮ್ಮ ಮನಸ್ಸಿನಲ್ಲಿ ಅಷ್ಟರಮಟ್ಟಿಗೆ ಗಟ್ಟಿಯಾಗಿ ಬೇರೂರಿದೆ. ಆದರೆ ಜಾತಿ ವಿನಾಶದ ಬದಲಾಗಿ ಜಾತಿ ವಿಕಾಶಕ್ಕೆ ಒತ್ತು ನೀಡುವುದರಿಂದ ತಾರತಮ್ಯ ನೀಗಿಸಬಹುದು. ಜಾತಿಯಲ್ಲಿನ ಒಳ ಪಂಗಡ ಮತ್ತು ಉಪಜಾತಿಗಳು ಮೊದಲು ಒಂದಾಗಬೇಕು. ಇದರಿಂದ ಸಮಾಜ ಪರಿರ್ವತನೆಯಾಗಲು ಸಾಧ್ಯ ಎಂದು ತಿಳಿಸಿದರು.

ವರ್ಣ,ಜಾತಿ ವ್ಯವಸ್ಥೆ ಇಲ್ಲದಿದ್ದರೆ ನಮ್ಮ ದೇಶಕ್ಕೆ ಸರಿಸಾಟಿಯಾಗಿ ನಿಲ್ಲುವಂತ ಮತ್ತೊಂದು ದೇಶ ಕಾಣುತ್ತಿರಲಿಲ್ಲ. ರಾಜಕೀಯ ಪಕ್ಷಗಳು, ಮಠ, ಮಾನ್ಯಗಳು ಜಾತಿಯನ್ನು ಮೀರುವಂತಹ ಸ್ಥಿತಿಯಲ್ಲೂ ಇಲ್ಲ. ಸಮಾಜವನ್ನು ಜಾತ್ಯತೀತಗೊಳಿಸಬೇಕು ಎಂದು ಮಾತನಾಡುವ ನಾವು ಜಾತಿಯನ್ನು ಪ್ರೀತಿಸುವ, ಆಚರಿಸುವುದನ್ನು ಬಿಡುವುದಿಲ್ಲ. ಹೀಗಾಗಿ ದೇಶವನ್ನು ಜಾತಿ ಮುಕ್ತಗೊಳಿಸುವ ಕನಸು ಕನಸಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ಪುರೋಹಿತಶಾಹಿ ವರ್ಗದ ಅಂಧ ಶ್ರದ್ಧೆ ಮತ್ತು ಸುಳ್ಳಿನ ಮೇಲೆ ದೇಶ ಸಾಗುತ್ತಿದೆ. ಸಮಾನತೆಯ ವಿರೋಧಿಗಳಿಂದ ಸಂವಿಧಾನದ ಕುರಿತು ಅಪಪ್ರಚಾರ ಮಾಡುವುದರ ಜೊತೆಗೆ ತಿರುಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದಿಸಿದರು.

ದೇಶದಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಅಂತರ್ಜಾತಿ ವಿವಾಹಗಳಿಂದ ಸಾಧ್ಯ. ಅಂತಜಾರ್ತಿ ವಿವಾಹವಾಗುವ ಜೋಡಿಗಳಿಗೆ ಆರಂಭದಲ್ಲಿ ಕುಟುಂಬ ಸದಸ್ಯರ ವಿರೋಧ ಬಿಟ್ಟರೆ ಅಷ್ಟೇನು ಸಮಸ್ಯೆಗಳು ಕಾಡುತ್ತಿಲ್ಲ. ಸರಕಾರವೂ ಇವರ ಬೆಂಬಲಕ್ಕೆ ನಿಲ್ಲುತ್ತಿವೆ. ಆದರೆ ಅಂತರ್ಜಾತಿ ವಿವಾಹವಾಗುವ ದಂಪತಿಗಳ ಮಕ್ಕಳು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅನಿವಾರ್ಯತೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಹ ಸಂಚಾಲಕ ಯು.ಬಸವರಾಜು, ಸಂಚಾಲಕ ಗೋಪಾಲ ಕೃಷ್ಣ ಅರಳಹಳ್ಳಿ, ದೇವದಾಸಿ ಮಹಿಳಾ ವಿಮೋಚನಾ ರಂಗದ ಅಧ್ಯಕ್ಷೆ ಮಾಳಮ್ಮ ಸೇರಿದಂತೆ ಇತರರು ಇದ್ದರು.


ಜಾಗತೀಕರಣ ಮತ್ತು ಕಾರ್ಪೋರೇಟ್ ಜಗತ್ತಿನ ಮೇಲಾಟದಲ್ಲಿ ಎಲ್ಲ ಜಾತಿಗಳ ಬಡವರು ಇಂದು ಅಸ್ಪಶ್ಯರಾಗುತ್ತಿದ್ದಾರೆ. ಇದು ಈ ದೇಶದ ದೊಡ್ಡ ದುರಂತ.
 -ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ

ಮಠದಿಂದಲೇ ಮೊದಲಪಂಕ್ತಿ
ಅಂತರ್ಜಾತಿ ವಿವಾಹವಾಗುವವರ ನೆರವಿಗೆ ನಿಧಿಯನ್ನು ಸ್ಥಾಪಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು. ಅಂತರ್ಜಾತಿ ವಿವಾಹ ನಿಧಿಯನ್ನು ಸ್ಥಾಪಿಸಲು ಮಠದಿಂದ ಬೆಂಬಲವೂ ನೀಡುತ್ತೇವೆ ಎಂದ ಅವರು, ಮಠದಿಂದ ನಿಧಿಗೆ ಒಂದು ಲಕ್ಷ ರೂ. ನೀಡುವುದಾಗಿ ಸ್ಥಳದಲ್ಲೇ ನಿಡುಮಾಮಿಡಿ ಸ್ವಾಮಿ ಘೋಷಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News