ಮನೆಬಾಗಿಲಲ್ಲೇ ಕಾನೂನು ನೆರವು: ರವಿಶಂಕರ ಪ್ರಸಾದ್

Update: 2017-04-30 16:19 GMT

ಹೊಸದಿಲ್ಲಿ, ಎ.30: ಜನರಿಗೆ ಮನೆಬಾಗಿಲಲ್ಲೇ ಕಾನೂನು ನೆರವು ನೀಡಿ ನ್ಯಾಯ ಒದಗಿಸಿಕೊಡುವ ಕಾರ್ಯವನ್ನು 50,000ಕ್ಕೂ ಹೆಚ್ಚು ಅರೆ ಕಾನೂನು ಸ್ವಯಂಸೇವಕರು ನಿರ್ವಹಿಸಲಿದ್ದಾರೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. 

ಎರಡು ದಿನ ನಡೆಯಲಿರುವ ಅರೆ ಕಾನೂನು ಸ್ವಯಂಸೇವಕರ (ಪಿಎಲ್‌ವಿ- ಪ್ಯಾರ ಲೀಗಲ್ ವೊಲಂಟಿಯರ್ಸ್) ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯವನ್ನು ಎಲ್ಲರಿಗೂ ಸುಲಭದಲ್ಲಿ ಲಭ್ಯವಾಗಿಸುವುದು ಮತ್ತು ನ್ಯಾಯದಲ್ಲಿ ನಂಬಿಕೆ ಮೂಡಿಸುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಗತ್ಯವಾಗಿದೆ ಎಂದರು. ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಬಡವರು ಮತ್ತು ಅಗತ್ಯವಿದ್ದವರಿಗೆ ಕಾನೂನು ನೆರವು ನೀಡಲು ಸಾಧ್ಯ . ಅಲ್ಲದೆ ಜನಹಿತ ಯೋಜನೆಗಳಲ್ಲಿ ಆಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲು ಡಿಜಿಟಲ್ ತಂತ್ರಜ್ಞಾನ ನೆರವಾಗಿದೆ ಎಂದವರು ತಿಳಿಸಿದರು. ಅರೆ ಕಾನೂನು ಸ್ವಯಂಸೇವಕರು(ಪಿಎಲ್‌ವಿ) ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸಮುದಾಯ ಸೇವಾ ಕೇಂದ್ರಗಳ ಸಹಯೋಗದಿಂದ , ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಿಲ್ಲಾ ಕಾನೂನು ಸಹಾಯಕರ ಜೊತೆ ಸಂಪರ್ಕ ಸಾಧಿಸಿ ಅಗತ್ಯವಿದ್ದವರಿಗೆ ಕಾನೂನು ನೆರವು ನೀಡಬೇಕು ಎಂದು ಸಚಿವರು ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ದೀಪಕ್ ಮಿಶ್ರ ಮಾತನಾಡಿ, ಪ್ರಾಧಿಕಾರವು ಎಲ್ಲಾ ರಾಜ್ಯ ಕಾನೂನು ಸೇವಾ ಏಜೆನ್ಸಿಗಳ ಸಹಯೋಗದಿಂದ ಅಗತ್ಯವಿದ್ದವರಿಗೆ ಉಚಿತ ಕಾನೂನು ನೆರವು ನೀಡುವ ಉದ್ದೇಶದಿಂದ ವಕೀಲರನ್ನು ನೇಮಿಸಿರುವುದಾಗಿ ತಿಳಿಸಿದರು. ತಮಗಿರುವ ಕಾನೂನುಬದ್ಧ ಹಕ್ಕುಗಳ ಬಗ್ಗೆ ಅಲ್ಲದೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು , ಕಡು ಬಡವರಿಗೆ ಮಾಹಿತಿ ನೀಡುವ ಅಭಿಯಾನ ಹಮ್ಮಿಕೊಳ್ಳುವಂತೆ ಪಿಎಲ್‌ವಿಗಳಿಗೆ ಕರೆ ನೀಡಿದರು. ಪಿಎಲ್‌ವಿಗಳು ಪರಿಣಾಮಕಾರಿ ಕಾರ್ಯ ನಿರ್ವಹಿಸುವಂತಾಗಲು ಅವರ ಕಾರ್ಯ ನಿರ್ವಹಣೆಯನ್ನು ನಿಯಮಿತವಾಗಿ ಅವಲೋಕನ ನಡೆಸಬೇಕು. ಅಲ್ಲದೆ ಇದುವರೆಗೂ ನ್ಯಾಯಾಂಗ ವ್ಯವಸ್ಥೆಯಿಂದ ದೂರವೇ ಉಳಿದಿರುವ ಜನರನ್ನು ವ್ಯವಸ್ಥೆಯೊಳಗೆ ಸೇರಿಸುವ ಕಾರ್ಯವನ್ನು ಪಿಎಲ್‌ವಿಗಳು ಮಾಡಬೇಕು ಎಂದು ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News