ಅರ್ಥಪೂರ್ಣ ಮೇ ದಿನಾಚರಣೆ ಯಾವಾಗ?

Update: 2017-04-30 18:49 GMT

ವಿಶ್ವದ ಕಾರ್ಮಿಕರೇ ಒಂದಾಗಿ, ಹೋರಾಟಕ್ಕೆ ಮುಂದಾಗಿ. ಗೆಲ್ಲುವವರೆಗೂ ಹೋರಾಟ...
ಸುಮಾರು 30 ವರ್ಷಗಳ ಹಿಂದೆ ಏರುದನಿಯಲ್ಲಿ ಯಾರಾದರೂ ಈ ಘೋಷಣೆ ಹಾಕಿದರೆ ಸಾಕಿತ್ತು. ಅದು ಉಂಟು ಮಾಡುತ್ತಿದ್ದ ಪರಿಣಾಮ ಒಂದೆರಡಲ್ಲ. ಒಂದೆಡೆ ಕಾರ್ಮಿಕರ ಆಕ್ರೋಶಕ್ಕೆ ಮಾಲಕ ನಡುಗಿದರೆ, ಮತ್ತೊಂದೆಡೆ ಬಾಕಿಯುಳಿದ ವೇತನ ಪಾವತಿ ಆಗುತಿತ್ತು. ಅತ್ತ ವಜಾಗೊಂಡ ಕೆಲಸಗಾರರು ಪುನಃ ಕೆಲಸಕ್ಕೆ ಸೇರಿದರೆ, ಇತ್ತ ಬೇಡಿಕೆಗಳ ಈಡೇರಿಕೆಗೆ ನಿಖರ ಭರವಸೆ ಸಿಗುತಿತ್ತು. ಇಡೀ ವಿಶ್ವದ ಕಾರ್ಮಿಕರು ಒಂದು ಎಂಬ ಸ್ಪಷ್ಟ ಸಂದೇಶ ರವಾನೆ ಆಗುತಿತ್ತು.

ಈಗಲೂ ಆ ಘೋಷಣೆ ಪ್ರಚಲಿತದಲ್ಲಿದೆ. ಆದರೆ ಪರಿಸ್ಥಿತಿ ಸಂಪೂರ್ಣ ಬದ ಲಾಗಿದೆ. ಗಂಟಲು ಒಣಗಿಸಿಕೊಂಡು ಕೂಗು ಹಾಕಿದರೂ ಅದು ಕೃತಕ ಅನ್ನಿಸುತ್ತದೆ. ಕಾರ್ಮಿಕರ ಕೋಪಕ್ಕೆ ಮಾಲಕರು ಮಣಿಯಲು ಸಿದ್ದರಿಲ್ಲ. ವೇತನವಷ್ಟೇ ಅಲ್ಲ, ಉದ್ಯೋಗ ಭದ್ರತೆ ಸಹ ಕೊಡುವುದಿಲ್ಲ. ವಜಾಗೊಳಿಸಿ, ಬೇರೆ ಕೆಲಸಗಾರರನ್ನು ತರುವಷ್ಟು ಹಣಬಲ ಮತ್ತು ದರ್ಪವಿದೆ. ನೂರಾರು ದಿನ ಧರಣಿ ನಡೆಸಿದರೂ ನಿಖರ ಭರವಸೆ ನಿರೀಕ್ಷಿಸುವಂತಿಲ್ಲ. ಒಂದು ಸಂಘಸಂಸ್ಥೆಯವರು ಹೋರಾಟಕ್ಕಿಳಿದರೆ, ಮತ್ತೊಂದು ಸಂಘಸಂಸ್ಥೆಯವರು ಅಪ್ಪಿತಪ್ಪಿಯೂ ಬೆಂಬಲಿಸುವುದಿಲ್ಲ. ವಿಶ್ವದ ಕಾರ್ಮಿಕರು ಒಂದಾಗುವುದು ಎಂಬುದಂತೂ ದೂರದ ಮಾತು.

ಆಗಿನ ದಿನಗಳಲ್ಲಿ ಕಾರ್ಮಿಕರ ವಿರೋಧಿ ನೀತಿ ಜಾರಿಗೊಳ್ಳುವ ಸುಳಿವು ಸಿಕ್ಕ ಕೆಲ ಹೊತ್ತಿನಲ್ಲೇ ಯಾವುದೇ ಮುನ್ಸೂಚನೆ ನೀಡದೇ ಕೆಂಬಾವುಟಗಳ ಸಮೇತ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ರಸ್ತೆಗೆ ಇಳಿಯುತ್ತಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅವರನ್ನು ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಗುತಿತ್ತು. ಲಾಠಿ ಬೀಸಿದರೂ ಚಿಂತೆ ಯಿಲ್ಲ ಎಂಬಂತೆ ಮುನ್ನುಗ್ಗುತ್ತಿದ್ದ ಕಾರ್ಮಿಕರಲ್ಲಿ ಅಂತಹ ಹೋರಾಟದ ಛಲವಿತ್ತು. ವ್ಯವಸ್ಥೆ ವಿರುದ್ಧದ ಆಕ್ರೋಶವಿತ್ತು. ಸರಕಾರವು ತನ್ನ ನಿರ್ಣಯ ಹಿಂಪಡೆದಿದೆ ಎಂಬುದು ಖಚಿತವಾದ ನಂತರವಷ್ಟೇ ಹೋರಾಟ ಕೊನೆಗಾಣುತಿತ್ತು. ಕಾರ್ಮಿಕರ ಮೊಗದಲ್ಲಿ ಜಗತ್ತನ್ನೇ ಗೆದ್ದಷ್ಟು ಸಂಭ್ರಮ ವ್ಯಕ್ತವಾಗುತ್ತಿತ್ತು.

ಆದರೆ ಇಂದಿನ ದಿನಗಳಲ್ಲಿ ಕಾರ್ಮಿಕರಿಗೆ ಮೀಸಲಾದ ಮೇ ದಿನದಂದು ಭಾರೀ ಸಂಖ್ಯೆಯಲ್ಲಿ ಕಾರ್ಮಿಕರನ್ನು ಒಂದೆಡೆ ಸೇರಿಸಲು ಸಂಘಟನೆಯ ನಾಯಕರು ಹೆಣಗಾಡಬೇಕು. ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ನಡೆಯುತ್ತಿದ್ದ ಬಹಿರಂಗ ಸಭೆೆಗಳು ಈಗ ಕಚೇರಿಯ ನಾಲ್ಕು ಗೋಡೆಗಳಿಗೆ ಸೀಮಿತವಾದರೆ, ನಾಯಕರ ಮಾತು ಆಲಿಸುವಷ್ಟು ತಾಳ್ಮೆ, ಸಹನೆ ಯಾರಿಗೂ ಇಲ್ಲ. ಇನ್ನು ಆ ಭಾಷಣಗಳು ಗತಕಾಲದ ರೋಮಾಂಚಕ ಇತಿಹಾಸ ವಿಜೃಂಭಿಸಿ, ಘಟನೆಗಳನ್ನು ಮೆಲುಕು ಹಾಕಿ ಪುನಃ ಅಂತಹದ್ದೇ ಹೋರಾಟ ಅನಿವಾರ್ಯವಾಗಿದೆ ಎಂಬ ಕರೆಯೊಂದಿಗೆ ಕೊನೆಗೊಳ್ಳುತ್ತವೆ. ಕಾರ್ಮಿಕರ ಬದುಕನ್ನು ಸುಧಾರಿಸುವ, ಮುಂದೆ ತಲೆದೋರಲಿರುವ ಅಪಾಯಕ್ಕೆ ಪ್ರತಿರೋಧ ಒಡ್ಡುವ, ಬದಲಾದ ಕಾಲಘಟ್ಟದಲ್ಲಿ ಬೇರೆ ತೆರನಾದ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಬಗ್ಗೆ ಕನಿಷ್ಠ ಚರ್ಚೆಯೂ ನಡೆಯುವುದಿಲ್ಲ.

ಮೂರೇ ದಶಕಗಳಲ್ಲಿ ಆದ ಈ ಬದಲಾವಣೆ ಅನಿರೀಕ್ಷಿತವೇನಲ್ಲ. ಸೂಕ್ಷ್ಮವಾಗಿ ಅವಲೋಕಿಸಿದರೆ, ಇದಕ್ಕೆ ಹಲವು ಕಾರಣಗಳಿವೆ. ಒಂದೆಡೆ ಸರಕಾರದ ನೀತಿಗಳು ಬಂಡವಾಳಶಾಹಿಗಳನ್ನು ಇನ್ನಷ್ಟು ಶಕ್ತಿಶಾಲಿಗೊಳಿಸಿದರೆ, ಮತ್ತೊಂದೆಡೆ ಕಾರ್ಮಿಕರ ಸಂಘಟನೆಗಳ ಒಳಜಗಳ, ಭಿನ್ನಾಭಿಪ್ರಾಯ ಹೋರಾಟವನ್ನು ದುರ್ಬಲಗೊಳಿಸಿದವು. ಅತ್ತ ಒಡೆದಾಳುವ ನೀತಿಯೊಂದಿಗೆ ಮಾಲಕರು ಕಾರ್ಮಿಕರಲ್ಲಿ ಒಗ್ಗಟ್ಟು ಮುರಿದರೆ, ಇತ್ತ ಕಾರ್ಮಿಕ ಸಂಘಟನೆಗಳು ಒಂದೇ ರೀತಿಯ ಬೇಡಿಕೆಗಳ ಹೋರಾಟಕ್ಕೆ ಸೀಮಿತ ವಾದವು. ಖಾಯಂ ನೌಕರಿ, ಸೌಲಭ್ಯ ನೀಡದೇ ಗುತ್ತಿಗೆಯಾಧಾರದಲ್ಲಿ ಕೆಲಸ ಮಾಡಿಸುವುದನ್ನು ಸಂಸ್ಥೆಯವರು ಕರಗತ ಮಾಡಿಕೊಂಡರೆ, ಅದರ ವಿರುದ್ಧ ದನಿ ಎತ್ತಬೇಕಿದ್ದ ಕಾರ್ಮಿಕ ಸಂಘಟನೆಗಳ ಶಕ್ತಿ ಕ್ಷೀಣಿಸಿತು. ಹೋರಾಟಕ್ಕಿಳಿದರೆ ಕೆಲಸದಿಂದ ಕಿತ್ತು ಹಾಕಿಸುವ ಬೆದರಿಕೆ ಅವರು ಒಡ್ಡಿದರೆ, ಕೆಲಸದ ಹಕ್ಕು ರಕ್ಷಿಸಿಕೊಳ್ಳುವ ಮತ್ತು ರಾಜಕೀಯ ಪ್ರಜ್ಞೆ ಮೂಡಿಸುವ ಕೆಲಸ ಇವರಿಂದ ಆಗಲಿಲ್ಲ.

ಶೋಷಕ ಮತ್ತು ಶೋಷಿತ ವರ್ಗಗಳ ನಡುವಿನ ನಿರಂತರ ಹೋರಾಟದ ಕಥೆಯೇ ಚರಿತ್ರೆ ಎಂದು ಶತಮಾನದ ಹಿಂದೆಯೇ ಹೇಳಿದ ಕಾರ್ಲ್‌ಮಾರ್ಕ್ಸ್ ಮಾತು ಈಗಲೂ ಪ್ರಸ್ತುತವಾಗಿದೆ. ಯುರೋಪಿನ ಅಂದಿನ ದುಡಿಯುವ ವರ್ಗದ ದಾರುಣ ಸ್ಥಿತಿಯನ್ನು ಕಣ್ಣಾರೆ ಕಂಡ ಮಾರ್ಕ್ಸ್ ಶ್ರಮಜೀವಿ ವರ್ಗಕ್ಕೆ ತನ್ನನ್ನು ಬಂಧಿಸಿದ ಸಂಕೋಲೆಗಳ ಹೊರತಾಗಿ ಕಳೆದುಕೊಳ್ಳುವಂಹತದ್ದು ಏನೂ ಇಲ್ಲ. ಗೆಲ್ಲಲು ಇಡೀ ವಿಶ್ವವೇ ಇದೆ ಎಂದು ಕರೆ ನೀಡಿದ್ದರು. ಬಂಡವಾಳಶಾಹಿ ವ್ಯವಸ್ಥೆ ತನ್ನ ಆರ್ಥಿಕ ಬಿಕ್ಕಟ್ಟಿನಿಂದಲೇ ನಿರ್ನಾಮವಾಗುತ್ತದೆ ಎಂದು ಹೇಳಿದ್ದರು. ಅಮೆರಿಕ ಸೇರಿದಂತೆ ಬಹುತೇಕ ದೇಶಗಳಲ್ಲಿ ಪ್ರತಿಷ್ಠಿತ ಕಂಪೆನಿಗಳು ಅವನತಿ ಸ್ಥಿತಿಯಲ್ಲಿದ್ದರೆ, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಭಾರತದಲ್ಲಿ ಶಿಕ್ಷಣ ಪಡೆದು ಅಮೆರಿಕದಲ್ಲಿ ನೆಲೆಸುವ ಕನಸು ಕಂಡಿದ್ದ ಭಾರತೀಯರು ಕೆಲಸ ಕಳೆದುಕೊಂಡು ಭಾರತಕ್ಕೆ ಮರಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

‘ನವಸಮಾಜ ನಿರ್ಮಿಸಬಲ್ಲ ಕ್ರಾಂತಿಕಾರಿ ಸಾಮಾಜಿಕ ಶಕ್ತಿ’ ಎಂದು ಕಾರ್ಲ್‌ಮಾರ್ಕ್ಸ್ ಗುರುತಿಸಿದ ಕಾರ್ಮಿಕ ವರ್ಗ ಇಂದು ಏನಾಗಿದೆ? ದುಡಿಯುವ ವರ್ಗವು ಒಂದು ಹಂತದಲ್ಲಿ ತನ್ನ ಸಂಕೋಲೆಯನ್ನು ಕಳಚಿ ಹಾಕಿತು. ಆದರೆ ಇಡೀ ವಿಶ್ವವನ್ನೇ ಗೆಲ್ಲುವ ಚಾರಿತ್ರಿಕ ಪಾತ್ರ ಮಾತ್ರ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಸೋವಿಯತ್ ಮಾದರಿ ಯಾಕೆ ಕುಸಿದು ಬಿತ್ತು? ಶ್ರಮಜೀವಿ ವರ್ಗದ ಸರ್ವಾಧಿಕಾರ ಎಲ್ಲ ವರ್ಗ ಗಳನ್ನು ತೊಡೆದು ಹಾಕುತ್ತದೆ. ಕೊನೆಯ ಹಂತದಲ್ಲಿ ಪ್ರಭುತ್ವವೂ ತನ್ನಿಂದ ತಾನೇ ಉದುರಿ ಬೀಳುತ್ತದೆ ಎಂಬ ಮಾರ್ಕ್ಸ್ ತರ್ಕ ಏನಾಯಿತು?

ಭಾರತವನ್ನೇ ಉದಾಹರಿಸುವುದಾದರೆ, 1925ರಲ್ಲಿ ಇಲ್ಲಿ ಒಡಮೂಡಿದ ಕಮ್ಯುನಿಸ್ಟ್ ಚಳವಳಿ ನಿಂತಲ್ಲೆ ನಿಂತು ಅದೇ ವರ್ಷ ನಾಗಪುರದಲ್ಲಿ ಅವತರಿಸಿದ ಆರೆಸ್ಸೆಸ್ ಯಾಕೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಕಮ್ಯುನಿಸ್ಟ್ ಆಂದೋಲನದ ಮೇಧಾವಿ ನಾಯಕರನ್ನೆಲ್ಲ ಅಪೋಶನ ಮಾಡಿಕೊಂಡ ಕಾರ್ಮಿಕ ವರ್ಗ ಅದರಲ್ಲೂ ಮುಖ್ಯವಾಗಿ ಸಂಘಟಿತ ವಲಯದ ಕಾರ್ಮಿಕ ವರ್ಗ ತನ್ನ ಕ್ರಾಂತಿಕಾರಿ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ, ಅಡಾಲ್ಫ್ ಹಿಟ್ಲರ್ ಆರಾಧಕರು ದಿಲ್ಲಿಯ ಅಧಿಕಾರ ಸೂತ್ರ ಹಿಡಿಯಲು ಸಾಧ್ಯವಾಗುತಿತ್ತೇ? ಕಳೆದ ಐವತ್ತು ವರ್ಷಗಳಲ್ಲಿ ಈ ಕಾರ್ಮಿಕ ವರ್ಗದಿಂದ ಕ್ರಾಂತಿಯ ಚಕ್ರಕ್ಕೆ ಚಾಲನೆ ನೀಡಲು ಒಬ್ಬ ನಾಯಕನೂ ಬರಲಿಲ್ಲವೇಕೆ?

ಒಂದು ಕಾಲದಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಲೋಕಸಭೆೆಗೆ ಕಳಿಸಿದ ಹಾಗೂ ಎಸ್.ಎಸ್.ಮಿರಜಕರ್ ಅವರಂಥ ಕಮ್ಯುನಿಸ್ಟ್ ಮೇಯರ್ ಹೊಂದಿದ್ದ ಮುಂಬೈ ಇಂದು ಶಿವಸೇನೆಯ ಹುತ್ತವಾಗಿ ರೂಪಾಂತರಗೊಂಡಿದೆ. ಕರ್ನಾಟಕದ ಮಾಸ್ಕೊ ಎಂದು ಕರೆಯಲ್ಪಡುತ್ತಿದ್ದ ದಾವಣಗೆರೆ ಇಂದು ಸಂಘ ಪರಿವಾರದ ತಾಣವಾಗಿದೆ. ಸಾರ್ವಜನಿಕ ಉದ್ಯಮರಂಗದ ಲಕ್ಷಾಂತರ ಕಾರ್ಮಿಕರ ತವರೂರಾದ ಬೆಂಗಳೂರು ಆರೆಸ್ಸೆಸ್ ಸ್ವಯಂಸೇವಕ ಅನಂತಕುಮಾರ್‌ರನ್ನು ಪ್ರತಿನಿಧಿಯಾಗಿ ಆರಿಸಿಕೊಂಡಿದೆ. ಕೈತುಂಬ ಸಂಬಳ ಬರುವ ಹುದ್ದೆಯನ್ನು ಬಿಟ್ಟು ತಮ್ಮನ್ನು ತಾವು ಕಾರ್ಮಿಕ ಚಳವಳಿಗೆ ಸಮರ್ಪಿಸಿಕೊಂಡ ಎಚ್.ವಿ.ಅನಂತ ಸುಬ್ಬರಾವ್ ವಿಧಾನಸಭೆಗೆ ಸ್ಪರ್ಧಿಸಿದರೆ, ಮೂರು ಸಾವಿರಕ್ಕಿಂತ ಹೆಚ್ಚು ಮತಗಳು ಬೀಳುವುದಿಲ್ಲ. ಇದಕ್ಕೆ ಕಾರಣವೇನು?

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಮ್ಯುನಿಸ್ಟ್ ನಾಯಕರನ್ನು ಚೆನ್ನಾಗಿ ದುಡಿಸಿಕೊಂಡ ಸಂಘಟಿತ ಕಾರ್ಮಿಕ ವರ್ಗ ಚುನಾವಣೆ ಬಂದಾಗ, ಹೀಗೇಕೆ ವರ್ತಿಸುತ್ತದೆ? ಸಂಚಳ ಹೆಚ್ಚಳ, ಬೋನಸ್‌ಗಾಗಿ ಕೆಂಬಾವುಟ ಹಿಡಿದು ಧಿಕ್ಕಾರದ ಘೋಷಣೆ ಹಾಕುವ ಕಾರ್ಮಿಕರು ಬೇಡಿಕೆ ಈಡೇರಿದ ಮಾರನೆ ದಿನವೇ ಸಂಘ ಪರಿವಾರದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಇದಕ್ಕೆಲ್ಲ ಕಾರಣವಿಷ್ಟೇ. ಕಮ್ಯುನಿಸ್ಟ್ ನಾಯಕರು ಈ ಕಾರ್ಮಿಕ ವರ್ಗದ ಪಾಲಿಗೆ ಸಂಬಳ ಜಾಸ್ತಿ ಮಾಡುವ ದಲ್ಲಾಳಿಗಳು ಮಾತ್ರ. ಕಾರ್ಮಿಕ ಸಂಘದಲ್ಲಿ ಅವರು ಇರಬೇಕು. ಆದರೆ ರಾಜಕಾರಣದಲ್ಲಿ ಮಾತ್ರ ತಮ್ಮ ಆಯ್ಕೆ ಕೇಸರಿ ಪಡೆ ಎಂಬುದು ಇಂದಿನ ಸಂಘಟಿತ ಕಾರ್ಮಿಕ ವರ್ಗದ ಅಭಿಪ್ರಾಯ.

ಇದಕ್ಕೆ ಕಮ್ಯುನಿಸ್ಟ್ ನಾಯಕರ ತಪ್ಪು ಕಾರಣವಿರಬಹುದು. ದಿನವಿಡೀ ಕಾರ್ಮಿಕರ ಚಳವಳಿಯಲ್ಲಿ ತೊಡಗಿಸಿಕೊಂಡು ಕಾರ್ಮಿಕ ಆಯುಕ್ತರ ಕಚೇರಿಗಳಲ್ಲೇ ಆಯುಷ್ಯ ಕಳೆದ ನಮ್ಮ ಅನೇಕ ಧುರೀಣರು ತಮ್ಮ ರಾಜಕೀಯ ಸಿದ್ಧಾಂತವನ್ನು ಬಾಯಿಬಿಟ್ಟು ಹೇಳಲಿಲ್ಲವೇನೋ! 1990ರಲ್ಲಿ ರಾಮಜನ್ಮಭೂಮಿ ಚಳವಳಿ ಆರಂಭವಾದಾಗ, ಕರ್ನಾಟಕದ ಸಿಪಿಐ ಮತ್ತು ಸಿಪಿಎಂ ನಾಯಕರು ಅಲ್ಲಲ್ಲಿ ಕಾರ್ಮಿಕರ ಸಭೆೆ ಕರೆದು ಕೋಮುವಾದದ ಅಪಾಯದ ಬಗ್ಗೆ ವಿವರಿಸಲು ಮುಂದಾದರು. ಆ ವಿಷಯ ಇಲ್ಲಿ ಮಾತನಾಡಬೇಡಿ. ಯೂನಿಯನ್ ಬಗ್ಗೆ ಮಾತ್ರ ಮಾತನಾಡಿ ಎಂದು ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು.

ನಲವತ್ತರ ದಶಕದಲ್ಲಿ ದೇಶ ವಿಭಜನೆಗೂ ಮುನ್ನ ಮತ್ತು ನಂತರದ ಅವಧಿಯಲ್ಲಿ ದೇಶದಾದ್ಯಂತ ಕೋಮು ಗಲಭೆೆ ಭುಗಿಲೆದ್ದಾಗ, ಅಂದಿನ ಕಾರ್ಮಿಕ ವರ್ಗ ಎಲ್ಲಾ ಜಾತಿ, ಮತಗಳ ಆಚೆಗೆ ನಿಂತು ಕೋಮು ಸೌಹಾರ್ದ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು. ಅದೇ ಕಾರ್ಮಿಕರು ಇಂದಿನ ದಿನಗಳಲ್ಲಿ ಚಾಕು, ಚೂರಿಗಳನ್ನು ಹಿಡಿದು ಪರಸ್ಪರ ಪ್ರಾಣ ತೆಗೆಯಲು ಹೇಸುವುದಿಲ್ಲ.

ಕಾರ್ಮಿಕ ವರ್ಗದಲ್ಲಿನ ಈ ಬದಲಾವಣೆ ಕಂಡು ಹಿರಿಯ ಕಮ್ಯುನಿಸ್ಟ್ ನಾಯಕ ದಿವಂಗತ ಇಂದ್ರಜಿತ್ ಗುಪ್ತಾ ಒಮ್ಮೆ ನೋವು ವ್ಯಕ್ತಪಡಿಸಿದ್ದರು. ನಾವು ಭಾರತದ ಜಾತಿ ಪದ್ಧತಿಯ ವ್ಯವಸ್ಥೆ ಅರ್ಥ ಮಾಡಿಕೊಳ್ಳಲಿಲ್ಲ. ಸಾವಿರಾರು ವರ್ಷಗಳಿಂದ ಇಲ್ಲಿ ಬೇರು ಬಿಟ್ಟ ವರ್ಣಾಶ್ರಮ ಪದ್ಧತಿ ವಿರುದ್ಧ ನಾವು ಜನಜಾಗೃತಿ ಮೂಡಿಸಲಿಲ್ಲ. ದಲಿತರ ನೋವಿಗೆ ಸ್ಪಂದಿಸಲಿಲ್ಲ. ಬರೀ ಕೈಗಾರಿಕೆ, ಕಾರ್ಮಿಕ ವರ್ಗವೆಂದು ನಗರಗಳಲ್ಲಿ ಕುಳಿತ ನಮ್ಮ ಸ್ಥಿತಿ ಇಲ್ಲಿಗೆ ಬಂದು ತಲುಪಿದೆ ಎಂದು ಹೇಳಿದ್ದರು.

ಖ್ಯಾತ ಕಮ್ಯುನಿಸ್ಟ್ ನಾಯಕ ಎಸ್.ಜಿ.ಸರ್ದೇಸಾಯಿ ಕೂಡ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾರ್ಖಾನೆಗಳು ಈ ದೇಶಕ್ಕೆ ಬಂದಾಗ, ಎಲ್ಲಾ ಜಾತಿ ಕಾರ್ಮಿಕರು ಒಂದೇ ಕಡೆ ಕೆಲಸ ಮಾಡುವುದರಿಂದ ಅವರಲ್ಲಿ ಜಾತಿಭೆೇದ ತನ್ನಿಂದಾತಾನೇ ಮಾಯವಾಗುತ್ತದೆ ಎಂಬ ನಮ್ಮ ನಂಬಿಕೆ ಸುಳ್ಳಾಯಿತು. ಮುಂಬೈ ಜವಳಿ ಗಿರಣಿಗಳಲ್ಲಿ ಅಸ್ಪಶ್ಯ ಕಾರ್ಮಿಕರು ಕುಡಿವ ನೀರನ್ನು ಮೇಲ್ಜಾತಿ ಕಾರ್ಮಿಕರು ಕುಡಿಯುತ್ತಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.

ಭಾರತದ ಸಂಘಟಿತ ಕಾರ್ಮಿಕ ವರ್ಗ ಯಾಕೆ ಹೀಗಾಯಿತು? ನಿರಂತರ ಹೋರಾಟದ ಫಲವಾಗಿ ಇಂದಿನ ಕಾರ್ಮಿಕ ಮನೆ ಕಟ್ಟಿಕೊಂಡಿದ್ದಾನೆ. ಮತ್ತೆರಡು ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದಾನೆ. ಬರುವ ಸಂಬಳದಿಂದ ತೃಪ್ತರಾಗದೇ ವರ್ಕ್ ಶಾಪ್, ಅಂಗಡಿಗಳನ್ನು ಮಾಡಿಕೊಂಡಿದ್ದಲ್ಲದೇ ತಾನು ಕೆಲಸ ಮಾಡುವ ಕಾರ್ಖಾನೆ ಅಥವಾ ಸಂಸ್ಥೆಯಲ್ಲಿ ದಿನಗೂಲಿಗಳಿಗೆ ಬಡ್ಡಿ ಸಾಲ ನೀಡುತ್ತಾನೆ. ಫೈನಾನ್ಸ್ ಕಾರ್ಪೊರೇಷನ್ ನಡೆಸುತ್ತಾನೆ.

ಈ ಆಸ್ತಿ ಸಂಪಾದನೆ ಆತನ ವರ್ಗ ಸ್ವರೂಪವನ್ನೇ ಬದಲಿಸಿದೆ. ಭಾರತ ಕಮ್ಯುನಿಸ್ಟ್ ಪಕ್ಷ ತನ್ನ ರಾಜಕೀಯ ನಿರ್ಣಯದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಅನುಸರಿಸಿದ ಆರ್ಥಿಕ ನೀತಿಯ ಪರಿಣಾಮವಾಗಿ ಭಾರತದಲ್ಲಿ ಹೊಸ ಉನ್ನತ ಮಟ್ಟದ ಮಧ್ಯಮ ವರ್ಗವೊಂದು ಬೆಳೆದಿದೆ. ಈ ವರ್ಗ ಜನಸಾಮಾನ್ಯರ ಸಮಸ್ಯೆಯಿಂದ ದೂರವಾಗಿದೆ ಎಂದು ವಿಶ್ಲೇಷಿಸಿದೆ. ಸಂಘಟಿತ ವಲಯದಲ್ಲಿ ಈ ಬದಲಾವಣೆಗಳು ಆಗುತ್ತಿದ್ದಂತೆ ಕೈಗಾರಿಕೆಗಳಲ್ಲಿ ಎಡಪಂಥೀಯ ಕಾರ್ಮಿಕ ಸಂಘಟನೆಗಳ ಪ್ರಭಾವ ಕುಗ್ಗಿ ಭಾರತೀಯ ಮಜ್ದೂರ ಸಂಘ ತನ್ನ ಪ್ರಭಾವ ವಿಸ್ತರಿಸಿಕೊಂಡಿದೆ.

ವರ್ಗಪ್ರಜ್ಞೆ ಮಾಯವಾಗಿ ಜಾತಿ ಪ್ರಜ್ಞೆ ಮೂಡತೊಡಗಿದೆ. ಖಾಸಗಿ ಆಸ್ತಿ ಮಾಡಿಕೊಂಡ ನಂತರ ಮನುಷ್ಯನಿಗೆ ತನ್ನ ಧರ್ಮ ಮತ್ತು ಜಾತಿಯ ನೆನಪಾಗುತ್ತದೆ. ಅಂತಲೇ ಈಗ ಸರಕಾರಿ ಉದ್ಯಮ, ಸಂಸ್ಥೆ ಮತ್ತು ಕಾರ್ಖಾನೆಗಳಲ್ಲಿ ಒಕ್ಕಲಿಗರ, ಲಿಂಗಾಯತರ, ಬ್ರಾಹ್ಮಣರ ಸಂಘಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. ಈ ನವ ಮಧ್ಯಮ ವರ್ಗಕ್ಕೆ ಆಧುನಿಕ ಬಂಡವಾಳಶಾಹಿ ಖಯಾಲಿಗಳು ಅಂಟಿಕೊಂಡಿವೆ. ಸಂಘ ಪರಿವಾರ, ಜಾತಿವಾದಿ ಮತ್ತು ಮೂಲಭೂತವಾದಿ ಶಕ್ತಿಗಳ ನಾಯಕರು ಹೀರೋಗಳಾಗುತ್ತಿದ್ದಾರೆ.

ಭಾರತದಲ್ಲಿ ಎಲ್ಲವನ್ನೂ ಕಳೆದುಕೊಂಡ ದುಡಿಯುವ ವರ್ಗ ಇಲ್ಲವೆಂದಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಲಕ್ಷಾಂತರ ಜನರು ಇಲ್ಲಿದ್ದಾರೆ. ತುತ್ತು ಕೂಳಿಗಾಗಿ ಬೀದಿಗಳಲ್ಲಿ ಮೈಮಾರಿಕೊಳ್ಳುವ ಸಹೋದರಿಯರು, ಅಕ್ಷರ ತೀಡುವ ವಯಸ್ಸಿನಲ್ಲಿ ಹೋಟೆಲ್, ಗ್ಯಾರೇಜುಗಳಲ್ಲಿ ಹಗಲುರಾತ್ರಿ ದುಡಿಯುವ ಮಕ್ಕಳಿದ್ದಾರೆ. ಪುಡಿಗಾಸಿಗೆ ಜೀವಮಾನವಿಡೀ ಜೀತ ಮಾಡುವ ನೊಂದ ಜೀವಿಗಳು ಎಲ್ಲೆಡೆ ಕಾಣುತ್ತಾರೆ. ಈ ಅಸಂಘಟಿತರ ನಡುವೆ ಹಾರಾಡಬೇಕಾದ ಕೆಂಬಾವುಟ ಇಂದು ಕಾರ್ಖಾನೆಗಳ ಸವಲತ್ತು ಪಡೆದ ವರ್ಗಗಳ ಕೋಟೆಯಲ್ಲಿ ಒತ್ತೆಯಾಳಾಗಿ ಉಳಿದಿದೆ.

ನಮ್ಮ ಟ್ರೇಡ್ ಯೂನಿಯನ್ ಚಳವಳಿ ನಿಂತ ನೀರಿನಂತಾಗಿದೆ. ಮನುಷ್ಯರ ನೋವಿಗೆ ಸ್ಪಂದಿಸುವ ಚೈತನ್ಯವನ್ನೇ ಅದು ಕಳೆದುಕೊಂಡಿದೆ. ಈ ಲೋಪಗಳಿಗೆ ಕಾರ್ಮಿಕ ವರ್ಗವನ್ನು ದೂರಿ ಪ್ರಯೋಜನವಿಲ್ಲ. ಕಮ್ಯುನಿಸ್ಟ್ ಚಳವಳಿಯು ಭಾರತದಲ್ಲಿ ವೈಚಾರಿಕ ಚಳವಳಿಯಾಗಿ ಬೆಳೆದಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ. ಜಾತಿ, ಮತ, ಕಂದಾಚಾರಗಳ ವಿರುದ್ಧ ಜನಜಾಗೃತಿ ಉಂಟು ಮಾಡಿ ವೈಜ್ಞಾನಿಕ ದೃಷ್ಟಿಕೋನ ಮೂಡಿಸಲು ಮೊದಲ ಆದ್ಯತೆ ನೀಡಿದ್ದರೆ ಇದನ್ನು ನಿವಾರಿಸಬಹುದಿತ್ತು.

ಗೋಡ್ಸೆವಾದಿಗಳ ಬತ್ತಳಿಕೆಯ ಬಾಣವಾಗಿರುವ ಮಧ್ಯಮ ವರ್ಗದ ಜನರಲ್ಲಿ ವೈಚಾರಿಕ ಕಿಚ್ಚು ಹೊತ್ತಿಸುವ, ಅವರ ತಲೆಯಲ್ಲಿ ಗೂಡು ಕಟ್ಟಿರುವ ಜಾತಿ, ಮತದ ಜೇಡರ ಬಲೆಯನ್ನು ಹರಿದು ಹೊರಚೆಲ್ಲಿ ಸ್ವಚ್ಛಗೊಳಿಸುವ, ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಕಾರ್ಯ ಇಂದು ಆಗಬೇಕಿದೆ. ಕಾರ್ಲ್ ಮಾರ್ಕ್ಸ್, ಲೆನಿನ್ ಮಾತ್ರವಲ್ಲ, ನಮ್ಮ ಪರಂಪರೆಯಲ್ಲಿ ಇರುವ ಲೋಕಾಯತ ದರ್ಶನ, ಬಸವಣ್ಣ, ವಿವೇಕಾನಂದ, ಗೌತಮ ಬುದ್ಧನ ಪ್ರಗತಿಪರ ವಿಚಾರಗಳನ್ನು ಜನರ ಬಳಿ ಒಯ್ಯಬೇಕಿದೆ.

ಇಂಥ ವೈಚಾರಿಕ ಜಾಗೃತಿ ಮೂಡಿಸುವ ಕಮ್ಯುನಿಸ್ಟ್ ಚಳವಳಿಯ ಕಾರ್ಯಕರ್ತರು ಮೊದಲು ಬೌದ್ಧಿಕವಾಗಿ ಬೆಳೆಯಬೇಕಿದೆ. ಟ್ರೇಡ್ ಯೂನಿಯನ್‌ಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೆ ಈ ಸಮಾಜದ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಸಮಾಜ ಬದಲಾವಣೆ ಮಾಡುವ ಹರಿಕಾರರಾಗಿ ಹೊರಹೊಮ್ಮಬೇಕಿದೆ.

ಫ್ಯಾಶಿಸಂ ಭಾರತದ ಬಾಗಿಲಿಗೆ ಬಂದು ನಿಂತಿದೆ. ತಮ್ಮ ಜೀವವಿರೋಧಿ ಸಿದ್ಧಾಂತದ ಮೂಲಕ ಸಂಘ ಪರಿವಾರ ಕೇಂದ್ರದ ಅಧಿಕಾರ ಸೂತ್ರ ಹಿಡಿದಿದೆ. ಹಿಂದೂ ರಾಷ್ಟ್ರ ನಿರ್ಮಿಸುವ ಗುರಿ ಇನ್ನಷ್ಟು ತೀವ್ರಗೊಂಡಿದೆ. ಗೋಳ್ವಾಲ್ಕರ್ ಸಿದ್ಧಾಂತದ ವಿರುದ್ಧ ವೈಚಾರಿಕ ಸಂಘರ್ಷ ಈಗ ನಡೆಯಬೇಕಿದೆ. ಕಮ್ಯುನಿಸ್ಟ್ ಪಕ್ಷಗಳು ಕಾರ್ಯಕರ್ತರಿಗೆ ತಾತ್ವಿಕ ರಾಜಕೀಯ ಶಿಕ್ಷಣ ಕೊಡಲು ಪ್ರಥಮ ಆದ್ಯತೆ ನೀಡಬೇಕಿದೆ. ಒಳಜಗಳ, ಪ್ರತಿಷ್ಠೆ, ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದಾಗಿ ಹೋರಾಟ ಕೈಗೊಳ್ಳಬೇಕಿದೆ. ವೈಚಾರಿಕ ಮತ್ತು ಪ್ರಬಲ ಚಳವಳಿಗೆ ಕಾರ್ಮಿಕರು ಮುನ್ನುಗ್ಗಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News