ಭೀಕರ ಬರಗಾಲ: ಗೋಶಾಲೆ, ನೀರಿನ ಟ್ಯಾಂಕರ್ ಹಾಗೂ ಮೇವು ಬ್ಯಾಂಕುಗಳ ಸಂಖ್ಯೆಯನ್ನು ಹೆಚ್ಚಿಸಿದ ರಾಜ್ಯ ಸರಕಾರ
Update: 2017-05-01 12:38 IST
ಬೆಂಗಳೂರು, ಮೇ 1: ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಗೋಶಾಲೆ, ಕುಡಿಯುವ ನೀರಿನ ಟ್ಯಾಂಕರ್ ಹಾಗೂ ಮೇವು ಬ್ಯಾಂಕುಗಳ ಸಂಖ್ಯೆಯನ್ನು ರಾಜ್ಯ ಸರಕಾರ ಹೆಚ್ಚಿಸಿದೆ.
ರಾಜ್ಯದ 24 ಜಿಲ್ಲೆಗಳಲ್ಲಿ ಗೋಶಾಲೆಗಳು ಹಾಗೂ ಮೇವು ಬ್ಯಾಂಕುಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚಿಸಿದ್ದು, ಈವರೆಗೂ ಕಾರ್ಯ ನಿರ್ವಹಿಸುತ್ತಿದ್ದ 60 ಗೋಶಾಲೆಗಳ ಸಂಖ್ಯೆಯೀಗ 94ಕ್ಕೆ ಏರಿಕೆಯಾಗಿದೆ.
ಮೇವು ಬ್ಯಾಂಕುಗಳನ್ನು 360ರಿಂದ 424 ಹೆಚ್ಚಿಸಲಾಗಿದ್ದು, 1,29,170 ಜಾನುವಾರುಗಳಿಗೆ ಆಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 30 ಜಿಲ್ಲೆಗಳಿಗೂ ಕುಡಿಯುವ ನೀರಿನ ಟ್ಯಾಂಕರ್ ಒದಗಿಸಲಾಗಿದ್ದು, ರಾಜ್ಯದ 1,715 ಹಳ್ಳಿಗಳ 9 ಲಕ್ಷ ಮಂದಿಗೆ 2,284 ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.