×
Ad

ಪಕ್ಷ ಸಂಘಟಿಸಿದ್ದಕ್ಕೆ ಯಡಿಯೂರಪ್ಪರಿಂದ ಒಳ್ಳೆಯ ಉಡುಗೊರೆ: ಭಾನುಪ್ರಕಾಶ್ ಆಕ್ರೋಶ

Update: 2017-05-01 16:33 IST

ಬೆಂಗಳೂರು, ಮೇ 1: ಸುಮಾರು ನಲವತ್ತು ವರ್ಷಗಳ ಕಾಲ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತನಗೆ ಉತ್ತಮ ಬಹುಮಾನವನ್ನೇ ನೀಡಿದ್ದಾರೆಂದು ಮೇಲ್ಮನೆ ಸದಸ್ಯ ಭಾನುಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತನ್ನನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಮಧ್ಯರಾತ್ರಿ ವಜಾ ಮಾಡಲಾಗಿದೆ. ಆದರೆ, ಪಕ್ಷದ ಕಾರ್ಯಕರ್ತನ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.

"ನನ್ನನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ್ದಾರೆ. ಕಾರಾಗೃಹಕ್ಕೇನೂ ಕಳುಹಿಸಿಲ್ಲ. ಮನೆಯಲ್ಲೆ ಇರು ಎಂದು ಹೇಳಿದ್ದಾರೆ. ನಾನು ಮನೆಯಲ್ಲಿ ಇರುವೆ. ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿರುವ ವೇಳೆ ಪಕ್ಷದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದ್ದು ಸರಿಯಲ್ಲ" ಎಂದು ಆಕ್ಷೇಪಿಸಿದರು.

"ಭಾರತಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ನೀಡಿದಂತೆ ಮಧ್ಯರಾತ್ರಿ 12 ಗಂಟೆಗೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶ್ರಮವಹಿಸಿ ಪಕ್ಷಕ್ಕಾಗಿ ದುಡಿದ ತನಗೆ ಯಡಿಯೂರಪ್ಪ ಒಳ್ಳೆಯ ಉಡುಗೊರೆ ನೀಡಿದ್ದಾರೆ. ಬಿಎಸ್‌ವೈ ಕಾಲಿನಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದೆವು" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಭಾನು ಪ್ರಕಾಶ್ ಬಲಿಕೊಟ್ಟರೆ ಬಿಜೆಪಿಗೆ ಅಧಿಕಾರಕ್ಕೆ ಬರುವುದಾದರೆ ನನ್ನದೇನೂ ಅಭ್ಯಂತರವಿಲ್ಲ. 61ನೆ ವರ್ಷಕ್ಕೆ ಕಾಲಿಡುತ್ತಿರುವ ನನಗೆ ಪಕ್ಷ ಬಹುದೊಡ್ಡ ಬಹುಮಾನವನ್ನೇ ನೀಡಿದೆ" ಎಂದ ಅವರು, "ಪಕ್ಷ ಮುಖ್ಯ ಆಗಬೇಕೇ ಹೊರತು ವ್ಯಕ್ತಿ ಎಂದು ಮುಖ್ಯ ಆಗಬಾರದು" ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News