ಮೇ 13: ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ; ಸಚಿವ ಆಂಜನೇಯ
ಚಿತ್ರದುರ್ಗ, ಮೇ 1: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೇ 13ಕ್ಕೆ ನಾಲ್ಕು ವರ್ಷಗಳನ್ನು ಪೂರೈಸಲಿದೆ. ರಾಜ್ಯದಲ್ಲಿನ ಬರ ಸ್ಥಿತಿ ಹಿನ್ನೆಲೆಯಲ್ಲಿ ಯಾವುದೇ ವಿಜೃಂಬಣೆ ಇಲ್ಲದೆ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 2013ರ ಮೇ 13 ರಂದು ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಅನೇಕ ಜನಪರ ಯೋಜನೆಗಳೊಂದಿಗೆ ಯಾವುದೇ ಕಳಂಕವಿಲ್ಲದೆ, ಸ್ಥಿರ ಹಾಗೂ ಉತ್ತಮ ಆಡಳಿತ ನೀಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಆವರಿಸಿರುವ ಹಿನ್ನೆಲೆಯಲ್ಲಿ ಸಮಾವೇಶವನ್ನು ಯಾವುದೇ ವಿಜೃಂಭಣೆಯಿಂದ ಆಚರಿಸುವುದಿಲ್ಲ. ಆದರೆ ಜನರ ಸಂಕಷ್ಟಕ್ಕೆ ಸ್ಪಂದಿಸಲು ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ಜನರಿಗೆ ವಿತರಣೆ ಮಾಡುವ ಮೂಲಕ ಜನರೊಂದಿಗೆ ನಾವಿದ್ದೇವೆ ಎಂದು ಧೈರ್ಯವನ್ನು ತುಂಬುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತಿದೆ ಎಂದರು.