ಒಡೆದು ಆಳುವ ನೀತಿ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ: ಡಾ.ಕೆ.ಮರುಳಸಿದ್ದಪ್ಪ
ಬೆಂಗಳೂರು, ಮೇ 1: ಕಾರ್ಪೋರೇಟ್ ಉದ್ಯಮಿಗಳು ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಗಳನ್ನು ನಿಯಂತ್ರಿಸುತ್ತಿದ್ದು, ದುಡಿಯುವ ವರ್ಗದ ಜನರ ಒಗ್ಗಟ್ಟನ್ನು ಮುರಿದು ಒಡೆದು ಆಳುತ್ತಿದ್ದಾರೆ. ಇದರ ವಿರುದ್ಧ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಹಿರಿಯ ಚಿಂತಕ ಡಾ.ಮರುಳಸಿದ್ದಪ್ಪ ಕರೆ ನೀಡಿದ್ದಾರೆ.
ಮೇ ದಿನಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಸರಕಾರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ಸಮಾನತೆ ಕಾರ್ಮಿಕರ ಘನತೆಯ ಮೂಲಭೂತ ಅಗತ್ಯ ಎಂದು ಪ್ರತಿಪಾದಿಸಿದರು.
ಕಾರ್ಮಿಕರ ಕೈ ಕೆಸರಾದರೆ ಬಾಯಿ ಮೊಸರಾಗುವ ಪರಿಸ್ಥಿತಿ ಇಂದು ದೂರವಾಗಿದೆ. ಮಾತಿನ ಮೂಲಕ ಕಾರ್ಮಿಕರ ಕುರಿತಂತೆ ಕರುಣೆ ವ್ಯಕ್ತವಾಗುತ್ತಿದೆಯೇ ವಿನಃ ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗೆ ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ಸಂಘಟಿತ ಹೋರಾಟದ ಅಗತ್ಯ ಎಂದರು.
ಅನ್ಯಾಯದ ವಿರುದ್ಧ ಹೋರಾಟವೇ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಆಸಕ್ತಿಯನ್ನು ಸರಕಾರಗಳು ಕಳೆದುಕೊಂಡಿವೆ ಎಂದ ಅವರು, ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಕಲ್ಪಿಸಬೇಕು ಎಂದರು.
ದೇಶದಲ್ಲಿಂದು ಬಂಡವಾಳಶಾಹಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಕಾನೂನುಗಳು, ಕಾರ್ಪೊರೇಟ್ ವಲಯಕ್ಕೆ ಅನುಕೂಲ ಆಗುವಂತಹ ನೀತಿಗಳು ದೇಶದಲ್ಲಿ ರೂಪಿತಗೊಳ್ಳುತ್ತಿವೆ. ಇಂತಹ ಸ್ಥಿತಿಗೆ ಸಮಾಜವಾದದ ಶಕ್ತಿಗಳ ನಿಯಂತ್ರಣ ವಿಫಲತೆಯೆ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದರು.
ಕಾರ್ಮಿಕರ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡಬೇಕು. ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು. ಅಸಂಘಟಿತ ಕಾರ್ಮಿಕರ ಬೇಡಿಕೆಗಳ ಈಡೇರಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು.
ಇಲ್ಲಿನ ಬನ್ನಪ್ಪ ಪಾರ್ಕಿನಿಂದ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಸರಕಾರಿ ಕಾಲೇಜು ಮೈದಾನದ ವರೆಗೆ ಕಾರ್ಮಿಕರ ಬೃಹತ್ ರ್ಯಾಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬರಾವ್, ಮುಖಂಡರಾದ ರಾಮಚಂದ್ರಪ್ಪ, ಜ್ಯೋತಿ, ಮುರಳೀಧರ್, ಹರಿಗೋವಿಂದ್ ಹಾಜರಿದ್ದರು.