​ಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಣೆಗೆ ಕ್ರಮ: ಡಾ.ಜಿ.ಪರಮೇಶ್ವರ್

Update: 2017-05-01 17:09 GMT

ಬೆಂಗಳೂರು, ಮೇ 1: ರಾಜ್ಯ ಸರಕಾರದ ಆದೇಶದಂತೆ 82 ಕಾರ್ಖಾನೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ಮೇ ದಿನಾಚರಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಕೈಗಾರಿಕಾ ಪ್ರದೇಶಗಳಲ್ಲಿ ಪ್ರೆಸಿಡೆನ್ಷಿಯಲ್ ಶಾಲೆಗಳನ್ನು ಆರಂಭಿಸಬೇಕು. ಎಲ್ಲ ಕೈಗಾರಿಕೆಗಳಲ್ಲಿನ ಎಸ್ಸಿ-ಎಸ್ಟಿ ಮತ್ತು ಹಿಂ.ವರ್ಗದ ಜನರಿಗೆ ಮೀಸಲಾತಿ ಕಲ್ಪಿಸಬೇಕು ಎಂದರು.

ಕಾರ್ಮಿಕರ ವೇತನವನ್ನು ಪರಿಷ್ಕರಿಸಬೇಕೆಂಬ ಬೇಡಿಕೆಗೆ ಅನುಗುಣವಾಗಿ ವೇತನವನ್ನು ಪರಿಷ್ಕರಿಸುವಂತೆ ಸರಕಾರ ಎಲ್ಲ ಕಾರ್ಖಾನೆಗಳ ಆಡಳಿತ ವರ್ಗಕ್ಕೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಈಗಾಗಲೇ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ 32 ಕಾರ್ಖಾನೆಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

2017-18ರ ಸಾಲಿನ ಬಜೆಟ್‌ನಲ್ಲಿ ಹಮಾಲಿಗಳೂ ಸೇರಿದಂತೆ 15 ಲಕ್ಷ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್, ಭವಿಷ್ಯ ನಿಧಿ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಖಾಸಗಿ ವಲಯದ ಕಾರ್ಖಾನೆಗಳಲ್ಲಿ 58 ವರ್ಷಕ್ಕೆ ನಿವೃತ್ತಿಯ ಬದಲು 60 ವರ್ಷಕ್ಕೆ ಏರಿಕೆ ಮಾಡಿ ಸರಕಾರ ಆದೇಶ ಹೊರಡಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News