2018ರ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ: ಪರಮೇಶ್ವರ್

Update: 2017-05-02 14:17 GMT

ಮಂಗಳೂರು, ಮೇ 2: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪಕ್ಷದಲ್ಲಿ 124 ಮಂದಿ ಹಾಲಿ ಶಾಸಕರಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿತನ ಮುಂದುವರಿಸುವ ಅಥವಾ ಬದಲಿಸುವ ಕುರಿತಂತೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಈಗಾಗಲೇ ಪಕ್ಷದಿಂದ ವೀಕ್ಷರನ್ನು ನೇಮಕಗೊಳಿಸಲಾಗಿದೆ. ಅವರು ಮಾಹಿತಿ ಸಂಗ್ರಹಿಸಿ ಹೈಕಮಾಂಡ್‌ಗೆ ಒದಗಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿಯ ಒಳಜಗಳ ಪಕ್ಷದ ಆಂತರಿಕ ವಿಚಾರ. ನಮ್ಮ ಪಕ್ಷ ಐದು ವರ್ಷವನ್ನು ಯಶಸ್ವಿಯಾಗಿ ಮುಗಿಸಿ ಚುನಾವಣೆ ಎದುರಿಸಲಿದೆ. ಐದು ವರ್ಷಗಳಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷ ಾಡಲಿದೆ ಎಂದು ಅವರು ಹೇಳಿದರು.

2018ರ ಚುನಾವಣಾ ತಯಾರಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ರೂಪುರೇಷೆಗಳನ್ನು ತಯಾರು ಮಾಡಿಕೊಂಡಿದ್ದು, ಆ ಬಗ್ಗೆ ಜಿಲ್ಲಾ ಮಟ್ಟದ ಮುಖಂಡರು, ಕಾರ್ಯಕರ್ತರ ಜತೆ ಚರ್ಚಿಸುವ ನಿಟ್ಟಿನಲ್ಲಿ ಹಾಗೂ ಚಿಕ್ಕಮಗಳೂರು- ಉಡುಪಿ- ಕಾರವಾರ- ದ.ಕ. ಜಿಲ್ಲಾ ವ್ಯಾಪ್ತಿಯ ಮಂಗಳೂರು ರೇಂಜ್‌ನ ಪರಿಶೀಲನೆಗೆ ಮಂಗಳೂರಿಗೆ ಭೇಟಿ ನೀಡಿದ್ದೇನೆ.

      ಸದಸ್ಯತ್ವ ನೋಂದಣಿ ಕಾರ್ಯ ಮೇ 15 ಕ್ಕೆ ಕೊನೆಗೊಳ್ಳಲಿದ್ದು ಬಳಿಕ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪದಾಧಿಕಾರಿಗಳ ಆಯ್ಕೆಗೆ ಪಂಚಾಯತ್, ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಮಟ್ಟದ ಚುನಾವಣೆ ನಡೆಯಲಿದ್ದು ಮುಂದಿನ ಆಕ್ಟೋಬರ್ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ . ಕೆಪಿಸಿಸಿ ಅಧ್ಯಕ್ಷತೆ ಚುನಾವಣೆ ಮೂಲಕವೂ ನಡೆಯಬಹುದು ಇಲ್ಲವೆ ಹೈಕಮಾಂಡಿನಿಂದ ನೇರ ನೇಮಕ ಆದೇಶವೂ ಪ್ರಕಟವಾಗಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

      ವಿಐಪಿಗಳ ಕಾರಿನ ಮೇಲೆ ಇರುವ ಕೆಂಪು ದೀಪ ತೆರವು ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಾ.ಜಿ. ಪರಮೇಶ್ವರ್, ನಾನು ತೆಗೆಸಿದ್ದೇನೆ. ಮುಖ್ಯಮಂತ್ರಿಯವರೂ ತೆಗೆಸಿದ್ದಾರೆ. ಇದಕ್ಕೆ ಅಷ್ಟೊಂದು ಮಹತ್ವ ನೀಡುವ ಅವಶ್ಯಕತೆ ಇಲ್ಲ. ಇದರಿಂದ ಲಾಭವೂ ಇಲ್ಲ. ನಷ್ಟವೂ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News