ಸಂಚಾರ ನಿಯಮ ಉಲ್ಲಂಘನೆ: ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸರು!

Update: 2017-05-02 15:27 GMT

ಬೆಂಗಳೂರು, ಮೇ 2: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ತಡೆಗೆ ಹಾಗೂ ವಾಹನ ಸವಾರರಿಂದ ದಂಡ ವಸೂಲಿಗೆ ಪೊಲೀಸರು ಹೊಸ ಯೋಜನೆ ಜಾರಿಗೆ ಮುಂದಾಗಿದ್ದು, ವಾಹನ ಮಾಲಕರ ಮನೆಗೆ ತೆರಳಿ ದಂಡ ವಸೂಲಿಗೆ ಚಿಂತನೆ ನಡೆಸಲಾಗಿದೆ.

ಮಂಗಳವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ನಮ್ಮ ಅಧಿಕಾರಿಗಳು ವಾಹನ ಸವಾರರ ಮನೆಗಳಿಗೆ ತೆರಳಿ ದಂಡ ವಸೂಲಿ ಮಾಡುತ್ತಿದ್ದಾರೆ. ಜೊತೆಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಮನವಿ ಮಾಡುತ್ತಿದ್ದಾರೆ ಎಂದು ಹೇಳಿದರು.

ದಂಡ ಪಾವತಿ ಮಾಡಿಲ್ಲ: ಬೆಂಗಳೂರು ನಗರದಲ್ಲಿ ಒಟ್ಟು 22,376 ಪ್ರಕರಣಗಳಲ್ಲಿ ವಾಹನ ಸವಾರರು ಇದುವರೆಗೂ ನೋಟಿಸ್ ಪಡೆದ ನಂತರ ದಂಡದ ಹಣ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಆಯಾ ವಿಭಾಗದ ಪೊಲೀಸ್ ಠಾಣೆಯ ಅಧಿಕಾರಿಗಳು ಮನೆಗಳಿಗೆ ತೆರಳಿ ದಂಡ ವಸೂಲಿ ಮಾಡುತ್ತಿದ್ದಾರೆ.
ಅಲ್ಲದೆ, ಸಂಚಾರ ಪೊಲೀಸರು ಈ ನಿಟ್ಟಿನಲ್ಲಿ ಮನೆಗೆ ತೆರಳಿ ದಂಡ ವಸೂಲಿ ಮಾಡಲು ಯೋಜನೆ ರೂಪಿಸಿದ್ದಾರೆ. ಲಕ್ಷಾಂತರ ದಂಡದ ಪ್ರಕರಣಗಳಲ್ಲಿ ದಂಡ ಪಾವತಿಯಾಗದೆ ನೋಟಿಸ್‌ಗಳಿಗೂ ಉತ್ತರಿಸದೆ ಇರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News