×
Ad

ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ: ಪ್ರಕಾಶ್ ಅಂಬೇಡ್ಕರ್

Update: 2017-05-02 21:09 IST

ಬೆಳಗಾವಿ, ಮೇ 2: ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕಾದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದಾರೆ.

ಮಂಗಳವಾರ ನಗರದ ಗಾಂಧಿ ಭವನದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಏರ್ಪಡಿಸಿದ್ದ ‘ಸಂವಿಧಾನ್ ಬಚಾವೋ, ದೇಶ್ ಬಚಾವೋ’ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ-ಸಂವಿಧಾನ ಉಳಿಸಲು ಜನಸಾಮ್ಯಾರಿಗೆ ಉಳಿದಿರುವುದು ಇದೊಂದೇ ದಾರಿ ಎಂದು ಹೇಳಿದರು.

ಉಳ್ಳವರ ಹಿತಾಸಕ್ತಿಗಾಗಿ ಸಂವಿಧಾನ ಪರಿಷ್ಕರಿಸುವ ಮಾತುಗಳನ್ನು ಬಿಜೆಪಿ ಮತ್ತು ಆರೆಸ್ಸೆಸ್ ಆಡುತ್ತಿದೆ ಎಂದ ಅವರು, ಇದೀಗ ಕಾಂಗ್ರೆಸ್ ನಾಯಕತ್ವದ ಪರ್ವ ಮುಗಿದುಹೋಗಿದ್ದು, ಪ್ರಧಾನಿ ಮೋದಿ ವಿರುದ್ಧ ಮಾತನಾಡುವ ಶಕ್ತಿಯನ್ನೇ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಲೇವಡಿ ಮಾಡಿದರು.

ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಪರಸ್ಪರ ಗೌರವಿಸುವ ಸಂದೇಶ ನೀಡಿದ್ದರು. ಇಲ್ಲಿ ಬುದ್ಧ, ಬಸವ, ಕಬೀರ, ಮಹಾವೀರ, ತುಕಾರಾಮ್ ಸೇರಿದಂತೆ ಅನೇಕ ಸಂತರು ಸಹೋದರತೆ ಬಿತ್ತುವ ಕೆಲಸ ಮಾಡಿದ್ದರು. ಆದರೆ, ಇಂದು ದೇಶದಲ್ಲಿ ದ್ವೇಷದ ವಾತಾವರಣ ಬೆಳೆಯುತ್ತಿದೆ. ಇದಕ್ಕೆ ಬಿಜೆಪಿ-ಆರೆಸ್ಸೆಸ್ ಕಾರಣ ಎಂದರು.

ಸಂವಿಧಾನ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ದೇಶದಲ್ಲಿ ಮಾನ ಮತ್ತು ಸನ್ಮಾನ ಸಿಗುತ್ತದೆ. ಸಂವಿಧಾನವಿಲ್ಲದಿದ್ದರೆ ಬದುಕು ಕಲ್ಪನೆಗೆ ನಿಲುಕದು. ದೇಶದ ಒಬ್ಬನೇ ವ್ಯಕ್ತಿ ನಮ್ಮ ಬದುಕಿನ ಮೇಲೆ ನಿಯಂತ್ರಣ ಹೇರಲು ಹೊರಟಿದ್ದಾರೆ ಎಂದು ಮೋದಿ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ತಾನೊಬ್ಬ ಹಿಂದುಳಿದವ ವರ್ಗಕ್ಕೆ ಸೇರಿದ ವ್ಯಕ್ತಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈವರೆಗೂ ಹಿಂದುಳಿದ ವರ್ಗಕ್ಕೆ ವಿಶೇಷ ಮೀಸಲಾತಿ ಸೌಲಭ್ಯ ನೀಡಿಲ್ಲ. ಎಲ್ಲಿಯವರೆಗೂ ಒಬಿಸಿಗಳಿಗೆ ಮೀಸಲಾತಿ ನೀಡುವುದಿಲ್ಲವೋ ಅಲ್ಲಿಯವರೆಗೂ ಮೋದಿಗೆ ತಾನು ಒಬಿಸಿ ಎಂದು ಹೇಳಿಕೊಳ್ಳುವ ನೈತಿಕತೆಯೇ ಇರದು. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ಬಳಿಕ ಸಂವಿಧಾನ ಬಚಾವೋ ಆಂದೋಲನ ಆರಂಭವಾಗಿದೆ. ಅಂಬೇಡ್ಕರ್ ಕ್ರಾಂತಿ ಮತ್ತು ಪ್ರತಿ ಕ್ರಾಂತಿಯ ಮೂಲಕ ದೇಶದ ಜನರಿಗೆ ತಿಳುವಳಿಕೆ ನೀಡಿದ್ದರು. ಆದರೆ, ಇಂದಿನ ಸಂಕಷ್ಟದ ಪರಿಸ್ಥಿತಿಗೆ ಕ್ರಾಂತಿಯ ಬದಲಿಗೆ ಸಂವಿಧಾನ ಬಚಾವೋ ಆಂದೋಲನಾ ಅನಿವಾರ್ಯ ಎಂದು ಪ್ರಕಾಶ್ ಅಂಬೇಡ್ಕರ್ ಪ್ರತಿಪಾದಿಸಿದರು.

ದಸಂಸ ರಾಜ್ಯಾಧ್ಯಕ್ಷ ಆರ್.ಮೋಹನ್‌ರಾಜ್ ಮಾತನಾಡಿ, ದೇಶದಲ್ಲಿ ಕೋಮುವಾದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಮೀಸಲಾತಿ ಸೌಲಭ್ಯಕ್ಕೂ ಕತ್ತರಿ ಹಾಕುವ ಹುನ್ನಾರದ ವಿರುದ್ಧ ಹೋರಾಟ ಅಗತ್ಯ ಎಂದು ಹೇಳಿದರು.

ಆರಂಭಕ್ಕೆ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಪ್ರಕಾಶ್ ಅಂಬೇಡ್ಕರ್ ಗೌರವ ಸಲ್ಲಿಸಿದರು. ಸಮಾವೇಶದಲ್ಲಿ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ, ಮೇಲ್ಮನೆ ಸದಸ್ಯ ವಿವೇಕರಾವ್ ಪಾಟೀಲ್, ಪಾಲಿಕೆ ಸದಸ್ಯ ಜಯಶ್ರೀ ಮಾಳಗಿ, ಮಲ್ಲೇಶ್ ಚೌಗಲೆ, ಅಶೋಕ ಐನಾವರ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

‘ಅಂಬೇಡ್ಕರ್ ರೂಪಿಸಿದ ಸಂವಿಧಾನಕ್ಕೆ ಇತ್ತೀಚಿನ ದಿನಗಳಲ್ಲಿ ಗಂಡಾಂತರ ಸೃಷ್ಟಿಯಾಗಿದ್ದು, ಇದರ ವಿರುದ್ಧ ಸಂವಿಧಾನ ಬಚಾವೋ ಆಂದೋಲನ ಅಗತ್ಯ. ಆ ನಿಟ್ಟಿನಲ್ಲಿ ಒಡೆದು ಹೋಗಿರುವ ಎಲ್ಲ ದಲಿತ ಸಂಘಟನೆಗಳು ಸ್ವಾರ್ಥ ಬದಿಗಿಟ್ಟು ಒಗ್ಗಟ್ಟಿನಿಂದ ಚಳವಳಿಗೆ ಮುಂದಾಗಬೇಕು’
-ರಮೇಶ್ ಜಾರಕಿಹೊಳಿ, ಸಣ್ಣ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News