ಮೇ 8ರಂದು ಆರು ಜಿಲ್ಲೆಗಳಲ್ಲಿ 4ನೆ ಹಂತದ ‘ಇಂದ್ರಧನುಷ್ ಅಭಿಯಾನ’ಕ್ಕೆ ಚಾಲನೆ: ಡಾ.ಶಾಲಿನಿ ರಜನೀಶ್

Update: 2017-05-02 15:58 GMT

ಬೆಂಗಳೂರು, ಮೇ 2: ಪೋಲಿಯೋ, ಹೆಪಟೈಟಿಸ್-ಬಿ, ಬಾಲಕ್ಷಯ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ, ರುಬೆಲ್ಲಾ ಸೇರಿದಂತೆ ಹತ್ತು ಮಾರಕ ರೋಗಗಳ ವಿರುದ್ಧ ನಾಲ್ಕನೆ ಹಂತದ ‘ಇಂದ್ರಧನುಷ್ ಅಭಿಯಾನ’ ಮೇ 8ರಂದು 6 ಜಿಲ್ಲೆಗಳಲ್ಲಿ ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗರ್ಭಿಣಿ ಮಹಿಳೆಯರು, 2 ವರ್ಷದೊಳಗಿನ ಹಾಗೂ 5ರಿಂದ 6 ವರ್ಷದ ಅಪೂರ್ಣ ಲಸಿಕೆ ಪಡೆದಿರುವ ಮಕ್ಕಳಿಗೆ ಕಾಲ-ಕಾಲಕ್ಕೆ ಲಸಿಕೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮೇ 8ರಂದು ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಳಗಾವಿ, ಕಲಬುರಗಿ, ವಿಜಯಪುರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಆದ್ಯತೆ ನೀಡಿ, ಗರ್ಭಿಣಿಯರನ್ನು ಪತ್ತೆ ಹಚ್ಚಿ ಲಸಿಕೆ ಹಾಕಲಾಗುವುದು. ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಕುರಿತು ಹೆಚ್ಚಿನ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದು ಶಾಲಿನಿ ರಜನೀಶ್, ರಾಜ್ಯ, ಜಿಲ್ಲಾ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯಪಡೆ ಸಮಿತಿ ರಚಿಸಿ ಈ ಕುರಿತು ವಿವಿಧ ಹಂತಗಳ ಅಧಿಕಾರಿಗಳಿಗೆ ಮಾಹಿತಿ ನೀಡಿ, ಯಶಸ್ವಿಗೊಳಿಸಲಾಗುವುದು ಎಂದರು.

ಮೇ, ಜೂನ್, ಜುಲೈ ಮತ್ತು ಆಗಸ್ಟ್ ಸೇರಿದಂತೆ 4 ತಿಂಗಳ ಕಾಲ ಇಂದ್ರಧನುಷ್ ಅಭಿಯಾನದಡಿ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಲಸಿಕೆಗಳನ್ನು ಹಾಕಲು ವಿಶೇಷ ಕಾರ್ಯಕ್ರಮಗಳನ್ನು ಅಣಿಗೊಳಿಸಲಾಗಿದೆ ಎಂದ ಅವರು, ಕೊಳಚೆ ಮತ್ತು ವಲಸೆ ಪ್ರದೇಶ, ಅಲೆಮಾರಿ, ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರದೇಶಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಮೇ ತಿಂಗಳಲ್ಲಿ ಏಳು ದಿನಗಳ ಕಾಲ ಅಂದರೆ 8 ರಿಂದ 19ನೆ ತಾರೀಖಿನ ಒಳಗಾಗಿ ಲಸಿಕೆಗಳನ್ನು ಗರ್ಭಿಣಿಯರು, ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಇದರ ಜೊತೆಗೆ ವಿವಿಧ ಸರಕಾರೇತರ ಸಂಸ್ಥೆಗಳ ಸಹಕಾರವನ್ನು ಪಡೆಯಲಾಗುವುದು ಎಂದು ಶಾಲಿನಿ ರಜನೀಶ್ ತಿಳಿಸಿದರು

ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ಆರೋಗ್ಯ ಇಲಾಖೆ ಆಯುಕ್ತ ಸುಭೋದ್ ಯಾದವ್, ಮಿಷನ್ ನಿರ್ದೇಶಕ ರತನ್ ಕೆಲ್ಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

‘ಹೆಪಟೈಟಿಸ್-ಬಿ, ಬಾಲಕ್ಷಯ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ, ರುಬೆಲ್ಲಾ ಸೇರಿದಂತೆ ಇನ್ನಿತರ ಮಾರಕ ರೋಗಗಳ ತಡೆಗೆ ಇಂಧ್ರಧನುಷ್ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ಬಡ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ವಿಶೇಷ ಆಂದೋಲನ ಕೈಗೊಳ್ಳಲಾಗಿದೆ. ಆದರೆ, ಬಡತನ ನಿರ್ಮೂಲನೆಗೆ ಯಾವುದೇ ಲಸಿಕೆ ಇನ್ನೂ ಕಂಡುಹಿಡಿದಿಲ್ಲ’
-ಕೆ.ಆರ್.ರಮೇಶ್‌ಕುಮಾರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News