×
Ad

ಕಾರು ಅಡ್ಡಗಟ್ಟಿ ​ರಸ್ತೆಯಲ್ಲೇ ಕ್ಯಾಬ್ ಚಾಲಕನ ಹತ್ಯೆ

Update: 2017-05-02 21:31 IST

ಬೆಂಗಳೂರು, ಮೇ 2: ರಸ್ತೆಯಲ್ಲಿ ಸಾಗುತ್ತಿದ್ದ ಕ್ಯಾಬ್‌ನ್ನು ಅಡ್ಡಗಟ್ಟಿದ ಗುಂಪೊಂದು ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಗೆದ್ದಲಹಳ್ಳಿಯ ವಿನಾಯಕನಗರದ ನಿವಾಸಿ ಅಲ್ತಾಫ್ ಪಾಶ(25) ಕೊಲೆಯಾದ ಕ್ಯಾಬ್ ಚಾಲಕ ಎಂದು ಪೊಲೀಸರು ಗುರುತಿಸಿದ್ದಾರೆ.

ಚಾಲಕ ವೃತ್ತಿ ಮಾಡುತ್ತಿದ್ದ ಅಲ್ತಾಫ್ ಪಾಶ ಸೋಮವಾರ ಎಂದಿನಂತೆ ಕೆಲಸ ಮುಗಿಸಿಕೊಂಡು ಅಣ್ಣ ನೌಶಾದ್ ಪಾಶನಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾನೆ. ಮನೆಗೆ ಹೋಗುವ ರಸ್ತೆಯಲ್ಲಿಯೇ ಆಟೋ ಮತ್ತು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವಕ್ಕೊಳಗಾದ ಅಲ್ತಾಫ್ ಪಾಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಳೇ ದ್ವೇಷ ಅಥವಾ ಅನೈತಿಕ ಸಂಬಂಧದಿಂದ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಹೆಣ್ಣೂರು ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News