ಪ್ರತಿಯೊಬ್ಬ ಪ್ರಜೆಗೂ ಆರೋಗ್ಯ ವಿಮೆ ಕಾರ್ಡ್: ರಮೇಶ್‌ಕುಮಾರ್
ಬೆಂಗಳೂರು, ಮೇ.2: ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಆರೋಗ್ಯ ವಿಮೆ ಕಾರ್ಡ್ ವಿತರಿಸಲಾಗುವುದು. ಈ ಕಾರ್ಡ್ ಮೂಲಕ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ‘ಆರೋಗ್ಯ ವಿಮೆ ಕಾರ್ಡ್’ ಕುರಿತು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಯಶಸ್ವಿನಿ ಆರೋಗ್ಯ ವಿಮೆ ಯೋಜನೆ, ಪ್ರಧಾನಿ ವಾಜಪೇಯಿ ಯೋಜನೆಗಳನ್ನು ಕ್ರೋಢೀಕರಿಸಿ ಒಂದೇ ಯೋಜನೆಯಲ್ಲಿ ತರುವ ಉದ್ದೇಶದಿಂದ ಆರೋಗ್ಯ ವಿಮೆ ಕಾರ್ಡ್‌ನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ: ಆರೋಗ್ಯ ವಿಮೆ ಕಾರ್ಡ್ ಹೊಂದಿರುವವರು ಯಾವುದೇ ಆಸ್ಪತ್ರೆಯಲ್ಲಿ, ಯಾವುದೇ ಸಂದರ್ಭದಲ್ಲಿ ಬಂದರೂ ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತಹ ಆರೋಗ್ಯ ವಿಮೆ ಕಾರ್ಡ್ ಯೋಜನೆ ಸೂಕ್ತವಾಗಿದೆ. ಆದರೆ, ಸರಕಾರಿ ಆಸ್ಪತ್ರೆಗಳು ಇಂದಿಗೂ ಮೂಲಭೂತ ಕೊರತೆಗಳಿಂದ ಮುಕ್ತವಾಗಿಲ್ಲ. ಈ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಯಾವುದಕ್ಕೂ ಕಮ್ಮಿ ಇಲ್ಲದಂತೆ ಸುಸಜ್ಜಿತವಾಗಿಡುವುದಕ್ಕೆ ಮೊದಲ ಆದ್ಯತೆ ಕೊಡಬೇಕು. ನಂತರದಲ್ಲಿ ಹಂತ, ಹಂತವಾಗಿ ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಸಹಕಾರಿ ಇಲಾಖೆಯ ಪಟ್ಟಣಶೆಟ್ಟಿ, ಯಶಸ್ವಿನಿ ಯೋಜನೆ ಸಿಇಒ ನಟರಾಜ್, ಆಹಾರ ಇಲಾಖೆ ಆಯುಕ್ತ ಸುಬೋದ್ ಯಾದವ್, ರೈತ ಮುಖಂಡರಾದ ಅತ್ತಿಹಳ್ಳಿ ದೇವರಾಜ್, ಎ.ನಾಗರಾಜ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.