×
Ad

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರದವರೆಗೆ ಮೆಟ್ರೊ 2 ‘ಎ’: ಸಚಿವ ಜಾರ್ಜ್

Update: 2017-05-02 23:18 IST

ಬೆಂಗಳೂರು, ಮೇ 2: ಮೆಟ್ರೊ ಮೊದಲನೆ ಹಂತದ ಕಾಮಗಾರಿ ಮುಕ್ತಾಯವಾಗುತ್ತಿದ್ದು, ಮೇ 12ರಿಂದ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಮಾಸಾಂತ್ಯಕ್ಕೆ ಮೊದಲನೆ ಹಂತದ ಮೆಟ್ರೊ ಸಂಚಾರ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಎರಡನೆ ಹಂತದ ಕಾಮಗಾರಿಯು ಪ್ರಗತಿಯಲ್ಲಿದೆ. ಇದರ ಜೊತೆಗೆ ಮೆಟ್ರೊ 2‘ಎ’ ಮಾರ್ಗ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರದವರೆಗೆ ಆರಂಭಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಹಾಗೂ ಅಭಿವೃದ್ಧಿ ಕಾನೂನನ್ನು ನಾವು ಸ್ವಾಗತಿ ಸುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ, ನಗರಾಭಿವೃದ್ಧಿ ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆಯನ್ನು ಸೇರಿಸಿ ನಮ್ಮ ರಾಜ್ಯದಲ್ಲಿಯೂ ಕಾನೂನು ತಿದ್ದುಪಡಿ ತರುವ ಕೆಲಸ ಮಾಡುತ್ತೇವೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.

ಮುಂದಿನ ಜೂ.10ರವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ನಿನ್ನೆ, ಮೊನ್ನೆ ಉತ್ತಮ ಮಳೆಯಾಗಿದೆ. ಜಲಾಶಯಗಳಲ್ಲಿಯೂ ಸ್ವಲ್ಪ ಮಟ್ಟಿನ ನೀರಿದೆ. ಆನಂತರ, ಮುಂಗಾರು ಆರಂಭಗೊಳ್ಳುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.

ಉಕ್ಕಿನ ಸೇತುವೆ ನಿರ್ಮಾಣದ ಯೋಜನೆಯನ್ನು ಕೈ ಬಿಡಲಾಗಿದೆ. ಸುರಂಗ ಮಾರ್ಗ ಅಥವಾ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಗಳ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಎಂಟಿಸಿ ಹೊಸದಾಗಿ ಬಸ್ಸುಗಳ ಸೇರ್ಪಡೆ ಅಲ್ಲದೆ, ಮೆಟ್ರೊ ರೈಲು ಮಾರ್ಗ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರ್ಜ್ ತಿಳಿಸಿದರು.

ಯಶವಂತಪುರ, ನಾಗವಾರ, ಹೆಬ್ಬಾಳ, ಎಸ್ಟಿಮ್ ಮಾಲ್, ಕೋಗಿಲು, ಕೆ.ಆರ್.ಪುರದಿಂದ ಬೂದಿಗೆರೆ ಕ್ರಾಸ್ ಮೂಲಕ ಹಾದು ಹೋಗುವ ರಸ್ತೆ ಸೇರಿದಂತೆ ಐದಾರು ಕಡೆಯಿಂದ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಬಹುದಾಗಿದೆ ಎಂದು ರೈಟ್ಸ್ ಸಂಸ್ಥೆ ವರದಿ ನೀಡಿದೆ. ಆದರೆ, ಈವರೆಗೆ ಯಾವುದನ್ನು ಅಂತಿಮಗೊಳಿಸಿಲ್ಲ ಎಂದು ಅವರು ಹೇಳಿದರು.

ಇವೆಲ್ಲವುಗಳ ಜೊತೆಗೆ, ಎಲಿವೇಟೆಡ್ ಕಾರಿಡಾರ್, ಪೆರಿಫೆರಲ್ ವರ್ತುಲ ರಸ್ತೆ, ಎಸ್‌ಟಿಆರ್‌ಆರ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಜೊತೆಗೆ ಸೇರಿ ನಿರ್ಮಿಸಲಾಗುವುದು. ಹೆಣ್ಣೂರು ಬಳಿಯಿರುವ ಮೇಲ್ಸೆತುವೆಗೆ ಹೈಟೆನ್ಷನ್ ತಂತಿ ಅಡ್ಡ ಬಂದಿದೆ. ಮಾಸಾಂತ್ಯಕ್ಕೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.

ಬೆಂಗಳೂರು ನಗರದ ಅಭಿವೃದ್ಧಿ ಯಾವ ರೀತಿಯಲ್ಲಿ ಆಗಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ಉಸ್ತುವಾರಿ ಬದಲಾವಣೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಕೇರಳದ ಸಂಸದ ವೇಣುಗೋಪಾಲ್‌ರನ್ನು ನೇಮಕ ಮಾಡಿದ ಹೈಕಮಾಂಡ್ ಕ್ರಮವನ್ನು ಸಮರ್ಥಿಸಿಕೊಂಡ ಕೆ.ಜೆ.ಜಾರ್ಜ್, ಕಾಂಗ್ರೆಸ್‌ನಲ್ಲಿ ಎಲ್ಲರೂ ಆಪ್ತರೇ, ಇದೊಂದು ಕುಟುಂಬ ಇದ್ದಂತೆ. ದಿಗ್ವಿಜಯ್‌ಸಿಂಗ್ ಸಹ ಒಳ್ಳೆಯ ಕೆಲಸ ಮಾಡಿದ್ದರು ಎಂದರು.

ವೇಣುಗೋಪಾಲ್ ಯುವಕರಾಗಿದ್ದು, ಸಂಘಟನೆಯಲ್ಲಿ ಚುರುಕಾಗಿ ಕೆಲಸ ಮಾಡಲಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮ ರೀತಿಯಲ್ಲಿದ್ದು, ಮತ್ತಷ್ಟು ಚುರುಕು ನೀಡಬೇಕಿದೆ. ಅಲ್ಲದೆ, ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News