×
Ad

2018ರ ವಿಧಾನಸಭೆ ಚುನಾವಣೆ ಜೆಡಿಎಸ್ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆ: ಎಚ್.ಡಿ.ಕುಮಾರಸ್ವಾಮಿ

Update: 2017-05-03 19:51 IST

ಬೆಂಗಳೂರು, ಮೇ 3: ಮುಂದಿನ ವಿಧಾನಸಭಾ ಚುನಾವಣೆಯು ಜೆಡಿಎಸ್ ಪಕ್ಷದ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಕಾರ್ಯಕರ್ತರು ಇಂದಿನಿಂದಲೆ ಶ್ರಮವಹಿಸಿ ಪಕ್ಷ ಸಂಘಟನೆ ಮಾಡಿದರೆ 125 ಸ್ಥಾನ ಗೆಲ್ಲುವುದು ಕಷ್ಟವೇನಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬುಧವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಬೂತ್‌ಮಟ್ಟದ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಆ ವೇಳೆ ಸರಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಬೇಕಾದರೆ ಬೂತ್‌ಮಟ್ಟದ ಸಮಿತಿಗಳ ಅವಶ್ಯಕತೆಯಿದೆ. ಕಾಂಗ್ರೆಸ್ ಸರಕಾರದ ರೀತಿಯಲ್ಲಿ ದುಡ್ಡು ಹೊಡೆಯಲು ಸಮಿತಿಗಳನ್ನು ರಚಿಸುವುದಿಲ್ಲ ಎಂದರು.

ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ, ಯುವಕರಿಗೆ ಜವಾಬ್ದಾರಿ ನೀಡುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಜನರ ಕಷ್ಟ ಆಲಿಸಲು ಬೂತ್ ಸಮಿತಿ ರಚಿಸಿ, ಪಕ್ಷ ಸಂಘಟನೆ ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಘಟಕಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ನಿರ್ದಾಕ್ಷಿಣ್ಯವಾಗಿ ಸಮಿತಿ ಪುನರಚಿಸುವಂತೆ ಸೂಚನೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಇವತ್ತಿನ ಸಭೆಯಲ್ಲಿ ಹಲವಾರು ಬೂತ್ ಮಟ್ಟದ ಅಧ್ಯಕ್ಷರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಹಲವಾರು ಮಂದಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವೆಲ್ಲ ಗಮನಿಸಿದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲಬಾರದು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ವ್ಯವಸ್ಥಿತ ಸಂಚು ಮಾಡುವ ಮೂಲಕ ಜೆಡಿಎಸ್ ಸೋಲಿಗೆ ಕಾರಣವಾಗುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರಿಂದಾಗಿ, ಕೆಲವು ಕ್ಷೇತ್ರದ ಕಾರ್ಯಕರ್ತರು ಗೊಂದಲಕ್ಕೆ ಈಡಾಗಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್, ಬಿಜೆಪಿ ಏನು ಸಾಧನೆ ಮಾಡಿವೆ ಎಂದು ಹೊಂದಾಣಿಕೆ ಮಾಡಿಕೊಳ್ಳಬೇಕು. ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಬಂದಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಹಾಗೂ ಬಿಜೆಪಿ. ಈ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಕೆಡಿಪಿಐ ಸ್ಥಾನ ನೀಡಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲಿ ಕಾಂಗ್ರೆಸ್‌ನ ಸದಸ್ಯರಿದ್ದಾರೆ. ನಾವು ಮುಂದೆ ದುಡ್ಡು ಹೊಡೆಯೋಕೆ ಕಾರ್ಯಕ್ರಮ ಮಾಡಬೇಕಿಲ್ಲ. ಪಕ್ಷಕ್ಕೆ ಸೇವೆ ಮಾಡುವಂತಹ ಕಾರ್ಯಕರ್ತರು ಹೆಚ್ಚಾಗಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

ಪರಿಣಾಮಕಾರಿಯಾಗಿ ಜಿಲ್ಲಾ ಹಾಗೂ ತಾಲೂಕು ಘಟಕಗಳು ಕೆಲಸ ಮಾಡಬೇಕು. ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ಪದಾಧಿಕಾರಿಗಳ ಬದಲಾವಣೆ ಶತಸಿದ್ಧ. ರಾಜ್ಯಕ್ಕೆ ಜೆಡಿಎಸ್ ಪಕ್ಷದ ಅನಿವಾರ್ಯತೆ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರು ಉಳಿಯುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಈಗಾಗಲೆ ನಾನು 150 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ನೀಡಿದ್ದೇನೆ. ಮಾ.31ಕ್ಕೆ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ, ತಾಲೂಕು ಮತ್ತು ಜಿಲ್ಲಾ ಘಟಕ ಸರಿಯಾಗಿ ರಚನೆಯಾಗಿಲ್ಲವೆಂದು ಪಟ್ಟಿ ಬಿಡುಗಡೆಗೆ ದೇವೇಗೌಡರು ತಡೆಹಾಕಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್‌ಬಾಬು, ಶಾಸಕರಾದ ಬಿ.ಬಿ.ನಿಂಗಯ್ಯ, ಕೆ.ಗೋಪಾಲಯ್ಯ, ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ, ಕಾಂತರಾಜು, ಅಪ್ಪಾಜಿಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News