ಮನುಷ್ಯ ಸಂಬಂಧಗಳು ಸಾಮರಸ್ಯದಿಂದಿರಲು ಕ್ಷಮಾಗುಣ ಅತಿಮುಖ್ಯ: ಯೋಗೇಶ್ ಮಾಸ್ಟರ್

Update: 2017-05-03 17:13 GMT

ಬೆಂಗಳೂರು, ಮೇ 3: ಮನುಷ್ಯ ಸಂಬಂಧಗಳು ಸಾಮರಸ್ಯದಿಂದ ಕೂಡಿರಲು ಪ್ರತಿಯೊಬ್ಬರೂ ಕ್ಷಮಾಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಚಿತ್ರ ನಿರ್ದೇಶಕ, ಲೇಖಕ ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

ಕ್ಷಮಾದಿನ ಅಥವಾ "ಸಾರಿ ಡೇ"ಯ ಅಂಗವಾಗಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕ್ರಿಸ್ಪ್ ಸಂಸ್ಥೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿ ಅಥವಾ ಕ್ಷಮಿಸು ಎಂದಾಕ್ಷಣ ಸರಿ ಹೋಗುವಂತಹ ಅನೇಕ ಸಂಗತಿಗಳಿವೆ. ಆದರೆ, ನಾವು ಕೆಲವೊಮ್ಮೆ ಅಹಂಕಾರದಿಂದ, ಮತ್ತೊಮ್ಮೆ ಸಂಕೋಚದಿಂದ, ಅಪಮಾನಕ್ಕೊಳಗಾಗುವ ಭೀತಿಯಿಂದ, ಮಾನ್ಯತೆ ಕಳೆದುಕೊಳ್ಳುವ ಹಿಂಜರಿಯಿಕೆಯಿಂದ ಕ್ಷಮೆ ಕೇಳದೇ ಹೋಗಿ ಬಿಡುತ್ತೇವೆ. ಇದರಿಂದಾಗಿ ಸಂಬಂಧಗಳು ಮುರಿದು ಬೀಳುವ ಸಂಭವ ಜಾಸ್ತಿ ಎಂದು ಹೇಳಿದರು.

ಮಕ್ಕಳ ಹಕ್ಕುಗಳ ರಕ್ಷಣೆಯ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಪಾತ್ರ ವಹಿಸುವ ಗುಣವೆಂದರೆ ಕ್ಷಮಾಗುಣ. ಮನೆ ಬಿಟ್ಟು ಹೋಗುವ ಮಕ್ಕಳು ಮತ್ತು ಪೋಷಕರ ಪರಸ್ಪರ ಕ್ಷಮೆ ಕೋರದೆ ಮತ್ತು ಕ್ಷಮಿಸದೆ ಅವರದೇ ಆದಂತಹ ಅಹಂಕಾರ ಅಥವಾ ಹಟದಿಂದ ಸಹಜವಾಗಿ ಸಂಬಂಧಗಳು ಶಿಥಿಲಗೊಳ್ಳುತ್ತವೆ ಅಥವಾ ಮುರಿದುಬೀಳುತ್ತವೆ. ಇದರಿಂದ ಮಕ್ಕಳಿಗೆ ಕೌಟುಂಬಿಕ ಭದ್ರತೆಯೂ ಸಿಗದೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ. ಅಲ್ಲದೆ, ಅವರು ಮುಂದಕ್ಕೆ ನಕಾರಾತ್ಮಕವಾದ ಧೋರಣೆಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದರು.

ಇದೇ ವೇಳೆಯಲ್ಲಿ ಕ್ಷಮಾದಿನದಂದು ತಮ್ಮ ಆತ್ಮಾವಲೋಕನಕ್ಕೆ ಪ್ರತಿಯೊಬ್ಬರಿಗೂ ದಾರಿ ಮಾಡಿಕೊಡುವಂತಹ ಅವಕಾಶವನ್ನು ಕಲ್ಪಿಸುವ ದಿನವಾಗಬೇಕು ಎಂಬ ಆಶಯದೊಂದಿಗೆ ‘ಮರಳಿ ಮನೆಗೆ’ ಚಿತ್ರವನ್ನು ಮೇ 5 ರಂದು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ತಪ್ಪು ಮಾಡಿದ ಮಕ್ಕಳದೊಂದಿಗೆ ಕಠೋರವಾಗಿ ವರ್ತಿಸುವ ಪೋಷಕರ ಧೋರಣೆಯಿಂದಾಗಿ ಕುಟುಂಬದಿಂದ ಹೊರ ಹೋಗುವ ಮಕ್ಕಳು ತಮ್ಮ ಕ್ಷಮೆ ಮತ್ತು ಸಂಬಂಧವನ್ನು ಅದೇ ಕುಟುಂಬದಲ್ಲಿ ಹುಡುಕಿಕೊಳ್ಳುವಂತಹ ಚಿತ್ರಣವಿದೆ ಎಂದು ಯೋಗೇಶ್ ಮಾಸ್ಟರ್ ವಿವರಿಸಿದರು.

ನಿಖಿಲ್‌ಹೋಂ ಸ್ಕ್ರೀನ್ ಪ್ರಸ್ತುತ ಪಡಿಸುತ್ತಿರುವ ಮರಳಿ ಮನೆಗೆ ಯೋಗೇಶ್ ಮಾಸ್ಟರ್‌ರ ಕಾದಂಬರಿ ಆಧಾರಿತ ಚಿತ್ರವಾಗಿದೆ. ನಿರ್ದೇಶನ ಹಾಗೂ ಸಾಹಿತ್ಯ ಯೋಗೇಶ್ ಮಾಸ್ಟರ್ ನಿರ್ವಹಿಸಿದ್ದು, ಶೃತಿ, ಶಂಕರ್ ಆರ್ಯನ್, ಸುಚೇಂದ್ರ ಪ್ರಸಾದ್, ಅರುಂಧತಿ ಜಟ್ಕರ್, ಸಹನಾ, ರೋಹಿಣಿ ನಾಗೇಶ್ ಹಾಗೂ ಗೌರಿ ಲಂಕೇಶ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ ಎಂದು ನಿರ್ಮಾಪಕ ಸುಭಾಷ್ ಎಲ್ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಟಿ ಶೃತಿ, ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ ಜಾಗೀರದಾರ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News