​ಲಂಚಕ್ಕೆ ಬೇಡಿಕೆ ಆರೋಪ: ಸಹಾಯಕ ವ್ಯವಸ್ಥಾಪಕ ಎಸಿಬಿ ಬಲೆಗೆ

Update: 2017-05-03 17:16 GMT

ಕಲಬುರಗಿ, ಮೇ 3: ಉದ್ಯಮಿಯೊಬ್ಬರಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಕಲಬುರಗಿಯ ಕೆಎಸ್‌ಎಸ್‌ಐಡಿಸಿ ಸಹಾಯಕ ವ್ಯವಸ್ಥಾಪಕ ಎಸಿಬಿ ಬಲೆಗೆ ಬಿದಿದ್ದಾರೆ.

ಕಲಬುರಗಿ ಜಿಲ್ಲೆಯ ಕೆಎಸ್‌ಎಸ್‌ಐಡಿಸಿ ಸಹಾಯಕ ವ್ಯವಸ್ಥಾಪಕ ಶೇಖರ್ ಎಂಬವರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಪ್ರಕರಣದ ವಿವರ: ಕಲಬುರಗಿ ಜಿಲ್ಲೆಯ ಅಫಜಲ್‌ಪುರ ತಾಲೂಕಿನ ರೇವೂರ್‌ನಲ್ಲಿ ವಾಸವಿರುವ ಸಣ್ಣ ಕೈಗಾರಿಕಾ ಉದ್ಯಮಿಯೊಬ್ಬರು ಕಲಬುರ್ಗಿ ಕೈಗಾರಿಕಾ ಸರಹದ್ದಿನಲ್ಲಿ ಸಿಮೆಂಟ್ ಇಟ್ಟಿಗೆಗಳನ್ನು ತಯಾರಿಸುವ ಘಟಕವನ್ನು ಹೊಂದಿರುತ್ತಾರೆ. ಇದರ ಬದಲಿಗೆ ಹಾಲಿ ಗೇರು ಬೀಜ ಸಂಸ್ಕರಣ ಘಟಕವನ್ನು ಪ್ರಾರಂಭಿಸಲು ಕಂಪೆನಿಯ ಹೆಸರನ್ನು ಬದಲಾವಣೆಗಾಗಿ ಜಿಲ್ಲೆಯ ಕೆಎಸ್‌ಎಸ್‌ಐಡಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಘಟಕದ ಹೆಸರಿನ ಬದಲಾವಣೆಗಾಗಿ 40 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು. ಬುಧವಾರ ಆರೋಪಿ ಸಹಾಯಕ ವ್ಯವಸ್ಥಾಪಕ ಶೇಖರ್, 10 ಸಾವಿರ ರೂ. ಲಂಚವನ್ನು ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಈ ಸಂಬಂಧ ಎಸಿಬಿ ಕಲಬುರ್ಗಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News