​ಟಿಪ್ಪುಸುಲ್ತಾನ್ ಬಗ್ಗೆ ಅಪಪ್ರಚಾರ ಅಕ್ಷಮ್ಯ: ಡಾ.ಶಾಯರುಲ್ಲಾಖಾನ್

Update: 2017-05-03 17:52 GMT

ಬೆಂಗಳೂರು, ಮೇ 3: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಅಕ್ಷಮ್ಯವಾದದ್ದು ಎಂದು ಉತ್ತರಪ್ರದೇಶದ ರಾಂಪುರದ ‘ಝಿಯಾ ವಾಜೀಹ್’ ಮಾಸ ಪತ್ರಿಕೆಯ ಸಂಪಾದಕ ಡಾ.ಶಾಯರುಲ್ಲಾಖಾನ್ ವಾಜೀಹ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್‌ನಲ್ಲಿರುವ ಹಝ್ರತ್ ಮಾಣಿಕ್ ಷಾ ದರ್ಗಾ ಸಮಿತಿಯ ಕಚೇರಿಯಲ್ಲಿ ತಮ್ಮ ‘ಟಿಪ್ಪು ಸುಲ್ತಾನ್ ಶಹೀದ್’ ವಿಶೇಷ ಸಂಚಿಕೆ ಕುರಿತು ಅವರು ಮಾತನಾಡಿದರು.

ಭಾರತವನ್ನು ಆಳಿದಂತಹ ಮುಸ್ಲಿಮ್ ಆಡಳಿತಗಾರರು, 1857ರ ಸ್ವಾತಂತ್ರ ಸಂಗ್ರಾಮ, ಮೊಗಲ್ ದೊರೆ ಬಹದ್ದೂರ್‌ಶಾ ಝಫರ್, ಬೇಗಮ್ ಹಝ್ರತ್ ಮಹಲ್, ಲಿಯಾಖತ್ ಅಲಿಖಾನ್ ಸೇರಿದಂತೆ ಅನೇಕರ ಬಗ್ಗೆ ವಿಶೇಷ ಸಂಚಿಕೆಗಳನ್ನು ಹೊರ ತಂದಿದ್ದೇವೆ. ದಕ್ಷಿಣ ಭಾರತದಲ್ಲಿ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಅಂಕಿತ ಹಾಕಿದ ಮೈಸೂರು ಹುಲಿ ಟಿಪ್ಪುಸುಲ್ತಾನ್ ಅವರ ಜೀವನ, ಆಡಳಿತ ನಿರ್ವಹಣೆ, ಹೋರಾಟ, ಸಂಘರ್ಷದ ಕುರಿತು ಕಳೆದ ಎರಡು ವರ್ಷಗಳಿಂದ ಸಂಶೋಧನೆ ನಡೆಸಿ ಈ ಸಂಚಿಕೆಯನ್ನು ಹೊರತರಲಾಗಿದೆ ಎಂದು ಶಾಯರುಲ್ಲಾಖಾನ್ ಹೇಳಿದರು.

ಟಿಪ್ಪುಸುಲ್ತಾನ್ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ಮೇ 4ರಂದು ಶ್ರೀರಂಗಪಟ್ಟಣದಲ್ಲಿ 200 ಪುಟುಗಳನ್ನು ಒಳಗೊಂಡ ಈ ವಿಶೇಷ ಸಂಚಿಕೆ ಬಿಡುಗಡೆಯಾಗಲಿದೆ. ಟಿಪ್ಪುಸುಲ್ತಾನ್ ಬಗ್ಗೆ ಹೊಸ ಕಲ್ಪನೆಯನ್ನು ಓದುಗರಿಗೆ ಈ ಸಂಚಿಕೆ ಕಟ್ಟಿಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧಾರ್ಮಿಕ ಸಾಮರಸ್ಯ, ಜನಸಾಮಾನ್ಯರೊಂದಿಗೆ ಅವರಿಗಿದ್ದ ಒಡನಾಟ ಸೇರಿದಂತೆ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಈ ಸಂಚಿಕೆ ಬೆಳಕು ಚೆಲ್ಲಲಿದೆ. ಈ ಸಂಚಿಕೆಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಶೋಧನೆಗಳು ನಡೆಯಲಿವೆ. ಆಡಳಿತಗಾರನಾದವನಿಗೆ ಎಲ್ಲ ಜಾತಿ, ಧರ್ಮದ ಅನುಯಾಯಿಗಳು ಒಂದೇ ಸಮಾನ. ಆದರೂ, ಟಿಪ್ಪಸುಲ್ತಾನ್‌ರನ್ನು ಒಂದು ನಿರ್ದಿಷ್ಟ ಸಮುದಾಯದ ವಿರೋಧಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಶಾಯರುಲ್ಲಾಖಾನ್ ತಿಳಿಸಿದರು.

ಹಿಂದೂ ಹಾಗೂ ಮುಸ್ಲಿಮರ ನಡುವೆ ಐಕ್ಯತೆ, ಸೌಹಾರ್ದತೆಗಾಗಿ ಟಿಪ್ಪಸುಲ್ತಾನ್ ಶ್ರಮಿಸಿದ್ದರು. ಆದರೆ, ಇತಿಹಾಸದ ನೈಜ್ಯ ಸತ್ಯವನ್ನು ಮರೆಮಾಚಿ, ಅವರ ವಿರುದ್ಧ ಅಪಪ್ರಚಾರ ಮಾಡುವ ಒಂದು ಸಮೂಹ ಸಕ್ರಿಯವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಝ್ರತ್ ಹಮೀದ್ ಷಾ ದರ್ಗಾ ಆಡಳಿತ ಸಮಿತಿಯ ಸದಸ್ಯ ಮುಬೀನ್‌ ಮುನವ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News