ಇ-ಪುಸ್ತಕೋದ್ಯಮ ಬೆಳೆಸುವ ಕೆಲಸಕ್ಕೆ ಸಿದ್ಧ: ಚಂದ್ರಶೇಖರ ಕಂಬಾರ

Update: 2017-05-04 18:17 GMT

ಬೆಂಗಳೂರು, ಮೇ 4: ಇ-ಪುಸ್ತಕಗಳನ್ನು ಸಾರ್ವಜನಿಕವಾಗಿ ಬೆಳೆಸುವ ಉದ್ದೇಶದಿಂದ ಸರಕಾರದಿಂದ ಕೈಗೊಳ್ಳಬೇಕಾದ ಕೆಲಸಗಳಿಗೆ ತಾನು ನೇತೃತ್ವ ವಹಿಸಿಕೊಳ್ಳುತ್ತೇನೆ ಎಂದು ಜ್ಞಾನಪೀಠ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.

ನಗರದ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಾಹಿತ್ಯ ಅಕಾಡಮಿ ಸಭಾಂಗಣದಲ್ಲಿ ಸಾಹಿತ್ಯ ಅಕಾಡಮಿ ಮತ್ತು ಕರ್ನಾಟಕ ಪ್ರಕಾಶಕರ ಸಂಘದಿಂದ ಆಯೋಜಿಸಿದ್ದ ಇ-ಪ್ರಕಾಶನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಬಹುತೇಕ ಜನರಿಗೆ ಇ-ಪುಸ್ತಕದ ಕುರಿತು ಅರಿವೇ ಇಲ್ಲ. ಹೀಗಾಗಿ ಜನರಿಗೆ ಇ-ಪುಸ್ತಕ ಮಾರಾಟದ ಜೊತೆಗೆ ಲೇಖಕರ ಹಾಗೂ ಪ್ರಕಾಶಕರ ಜವಾಬ್ದಾರಿಯ ಕುರಿತು ಕಾನೂನು ಏನು ಹೇಳುತ್ತದೆ ಎಂಬ ಅಂಶವನ್ನು ತಿಳಿಸಬೇಕಾದ ಅಗತ್ಯವಿದೆ ಎಂದ ಅವರು, ತನಗೆ ನಾಡಿನ ಖ್ಯಾತ ಸಾಹಿತಿ ಪೂರ್ಣಚಂದ್ರತೇಜಸ್ವಿ ಇ-ಪುಸ್ತಕದ ಹುಚ್ಚನ್ನು ಹಿಡಿಸಿದ್ದರು ಎಂದು ನೆನಪಿಸಿಕೊಂಡರು.

ರಾಜ್ಯದ 1,018 ಗ್ರಾಪಂಗಳಲ್ಲಿನ ಗ್ರಂಥಾಲಯಗಳಲ್ಲಿ ಈಗಾಗಲೇ ಇ-ಪುಸ್ತಕಗಳಿದ್ದು, 1,600 ಕನ್ನಡ ಪುಸ್ತಕಗಳು ಲಭ್ಯವಿದೆ. ಯುವಜನರು ಈ ಪುಸ್ತಕಗಳ ಬಗ್ಗೆ ಬಹಳಷ್ಟು ಉತ್ಸಾಹ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ತಿಳಿಸಿದರು.

ಕನ್ನಡ ಸಲಹಾ ಮಂಡಳಿ ಸಂಚಾಲಕ ಡಾ.ನರಹಳ್ಳಿ ಬಾಲಸುಬ್ರಮಣ್ಯಂ ಮಾತನಾಡಿ, ರಾಜ್ಯ ಸರಕಾರ ಇ-ಪುಸ್ತಕವನ್ನು ಬೆಳೆಸುವ ಉದ್ದೇಶದಿಂದ ಸಮಿತಿ ರಚಿಸಿ 2 ಕೋಟಿ ರೂ. ಖರ್ಚು ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವೇ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಇ-ಪುಸ್ತಕಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳಿಗೆ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಹಳ್ಳಿ ಮಾತನಾಡಿ, ಇ-ಪುಸ್ತಕಕ್ಕೆ ಸಂಬಂಧಿಸಿದಂತೆ ಲೇಖಕರು ಮತ್ತು ಪ್ರಕಾಶಕರಿಗೆ ತಮ್ಮ ಹೊಣೆ ಏನು ಎನ್ನುವುದು ಗೊತ್ತಿಲ್ಲ. ಇದಕ್ಕೆ ಇರುವ ಕಾನೂನು ಚೌಕಟ್ಟುಗಳ ಕುರಿತಂತೆ ಮಾಹಿತಿಯು ಇಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News