ಐಟಿ ಕಂಪೆನಿಗಳೇ... ದೇಶದ ಬೆಳವಣಿಗೆಯಲ್ಲಿ ನಿಮಗೂ ಹೊಣೆಯಿದೆ

Update: 2017-05-05 12:14 GMT


ತಮ್ಮ ಉಳಿವಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಹಾಕುವ ವ್ಯವಹಾರಗಳನ್ನು ಪ್ರೋತ್ಸಾಹಿಸುವುದು ದೀರ್ಘಕಾಲಿಕ ದೃಷ್ಟಿಯಿಂದ ದೇಶಕ್ಕೆ ಮಾರಕ ಆಗಲಿದೆ. ‘‘ಐಟಿ ಇಂಡಸ್ಟ್ರಿಯವರೇ, ನಿಮಗೆ ಕೊಡುವುದನ್ನೆಲ್ಲ ದೇಶ ಕೊಟ್ಟಾಗಿದೆ ಈಗ ನಿಮ್ಮ ಸರದಿ. ದೇಶದಲ್ಲಿ ಉದ್ಯೋಗ ಸೃಷ್ಟಿ, ಸಂತುಲಿತ ಬೆಳವಣಿಗೆಗೆ ನಿಮಗೂ ಹೊಣೆ ಇದೆ’’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬೇಕಾದ ಸಮಯ ಇದು.
 

ನಾರಾಯಣಮೂರ್ತಿಯವರ ಹೊಟ್ಟೆನೋವು ಈ ದೇಶದ ಹೊಟ್ಟೆನೋವಾಗಿಬಿಟ್ಟಿದೆ ಎಂದರೆ, ಆ ವ್ಯವಹಾರ ಮಾಡೆಲ್‌ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಎಂದೇ ಅರ್ಥ. ಫಸ್ಟ್ ಜನರೇಷನ್‌ನ ಅಪ್ಪ-ಅಮ್ಮ, ಅವರ ಹೊಟ್ಟೆ ಬಟ್ಟೆ ಕಟ್ಟಿ ಕಷ್ಟದಿಂದ ಸಾಕಿ, ಬೆಳೆಸಿ, ಕಲಿಸಿ ಬಿಟ್ಟ ಮಗ ಈಗ ಮದುವೆ ಆದಮೇಲೆ ತನ್ನ ಸಂಸಾರ ತಾಪತ್ರಯ ಎಂಬ ಕಾರಣ ಕೊಟ್ಟು, ಅಪ್ಪ-ಅಮ್ಮನನ್ನು ಬೀದಿಗೆ ತಳ್ಳುವುದು ನೈತಿಕವಾಗಿಯೂ, ಕಾನೂನುಬದ್ಧವಾಗಿ ತಪ್ಪುಎಂಬುದು ಭಾರತದಲ್ಲಿ ಒಪ್ಪಿತ ಸಂಗತಿ.

ಈಗ ಮಾಹಿತಿ ತಂತ್ರಜ್ಞಾನ ಇಂಡಸ್ಟ್ರಿಯಲ್ಲಿ ಆಗುತ್ತಿರುವುದು ಇದೇ. ಇವತ್ತು ಚರಿತ್ರೆ ಮರೆತವರೇ ಎಲ್ಲೆಡೆ ಆಯಕಟ್ಟಿನ ಜಾಗಗಳಲ್ಲಿ ಸೇರಿಕೊಂಡಿರುವುದರಿಂದ ತಕ್ಷಣಕ್ಕೆ ನಮ್ಮ ಎದುರಿರುವ ‘‘ಎಚ್1ಬಿ ವೀಸಾ’’ ಸಮಸ್ಯೆ ಭೂತಾಕಾರವಾಗಿ ಕಾಣುತ್ತಿದೆಯೇ ಹೊರತು ಅದು ಹೀಗೆ ಭೂತಾಕಾರವಾಗಲು ಸಾಗಿಬಂದ ಹಾದಿ ಮರೆತುಹೋಗಿದೆ.

1972ರಲ್ಲಿ ಭಾರತ ಕಂಪ್ಯೂಟರುಗಳಲ್ಲಿ ಜಗತ್ತಿನ ಭವಿಷ್ಯ ಇದೆಯೆಂದು ಎಂದು ಮೊದಲ ಬಾರಿಗೆ ಕಂಡುಕೊಂಡಿತು. ದೇಶದಲ್ಲಿ ಆ ಉದ್ದಿಮೆಯನ್ನು ಬೆಳೆಸಲು ಅಮೆರಿಕದಿಂದ ಕಂಪ್ಯೂಟರುಗಳ ಆಮದಿಗೆ ಅವಕಾಶ ನೀಡಲಾಯಿತು. ಆದರೆ ಒಂದು ಷರತ್ತು ಇತ್ತು. ಆಮದಿಗೆ ಖರ್ಚು ಮಾಡಿದ ಎರಡು ಪಟ್ಟು ರಫ್ತು ಮಾಡಲೇ ಬೇಕು ಎಂಬ ಷರತ್ತದು. ಮುಂದೆ 1980ರ ವೇಳೆಗೆ ಸಾಫ್ಟ್‌ವೇರ್ ರಫ್ತು ಪ್ರೋತ್ಸಾಹ ಮಂಡಳಿ (SEPC) ರಚನೆಯಾಯಿತು ಮತ್ತು ಆಮದು ನೀತಿಗಳು ಬಹಳ ಸಡಿಲಗೊಂಡವು.

1990ರಲ್ಲಿ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ರೂಪುಗೊಂಡ 4 ವಿಶೇಷ ಟಾಸ್ಕ್ ಫೋರ್ಸ್‌ಗಳು ಇಡಿಯ ಐಟಿ ಉದ್ಯಮಕ್ಕೆ ಹೊಸ ದಿಕ್ಕು ನೀಡಿದವು. 1998ರ ಮೇ 22ರಂದು ಆ ಸಮಿತಿಗಳು ನೀಡಿದ 108 ಶಿಫಾರಸುಗಳನ್ವಯ ಇಡಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಮೂಲಾಗ್ರ ಬದಲಾವಣೆ ಕಂಡಿತು. ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ಸ್ ಇಲಾಖೆ ಎಂಬ ಪುಟ್ಟ ಲೆಕ್ಕಭರ್ತಿ ಇಲಾಖೆಯು ‘ಮಿನಿಸ್ಟ್ರಿ ಆಫ್ ಕಮ್ಯುನಿಕೇಷನ್ಸ್ ಆ್ಯಂಡ್ ಇನ್ಫರ್ಮೇಷನ್ ಟೆಕ್ನಾಲಜಿ’ ಎಂದು ಮರುಹುಟ್ಟು ಪಡೆಯಿತು.

ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಬೇಕೆಂಬ ಷರತ್ತಿನ ಮೇರೆಗೆ ಐಟಿ ಇಂಡಸ್ಟ್ರಿಗೆ 2010ರ ತನಕ ತೆರಿಗೆ ರಜೆ, ವಿದೇಶಿ ಗಳಿಕೆಯನ್ನು ವಿದೇಶ ದಲ್ಲೇ ವಿನಿಯೋಗಿಸುವ ಅವಕಾಶ, ಸುಂಕ ವಿನಾಯಿತಿ, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್, ವಿಶೇಷ ಇಕನಾಮಿಕ್ ರೆನ್, ಮೂರು ಕಾಸಿನ ಬೆಲೆಗೆ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ದಿಲ್ಲಿ, ಪುಣೆ ಮಹಾನಗರಗಳಲ್ಲಿ ಬೆಲೆಬಾಳುವ ಭೂಮಿ...ಹೀಗೆ ಏನುಂಟು ಏನಿಲ್ಲ -ಸಕಲ ಸೌಲಭ್ಯಗಳನ್ನೂ ನೀಡಲಾಯಿತು. ಈ ಹಂತದ ತನಕವೂ ಸರಕಾರಗಳು ಐಟಿ ಇಂಡಸ್ಟ್ರಿಗೆ ತಾವು ಕೊಟ್ಟ ಪ್ರೋತ್ಸಾಹದಿಂದ ದೇಶಕ್ಕೆ ಏನು ಲಾಭ ಆಗಲಿದೆ ಎಂಬ ಲೆಕ್ಕಾಚಾರಗಳನ್ನು ಸರಿಯಾಗಿಟ್ಟುಕೊಂಡಿದ್ದವು.

ಹೀಗೆ ಒಂದು ಹಂತಕ್ಕೆ ಬೆಳೆದು ನಿಂತ ಐಟಿ ಉದ್ಯಮ 1995-2000 ತಲುಪುವ ಹೊತ್ತಿಗೆ ದೇಶದ ಸರಕಾರಗಳನ್ನು ಮೀರಿ ಬೆಳೆಯಲಾರಂಭಿಸಿತ್ತು ಮತ್ತು ಸರಕಾರದಲ್ಲಿರುವವರನ್ನು ತಮ್ಮ ಬೆರಳಿನ ತುದಿಯಲ್ಲಿ ಕುಣಿಸಲಾರಂಭಿಸಿತ್ತು. ವರ್ಷಕ್ಕೆ ಅಂದಾಜು ಶೇ. 9 ದರದಲ್ಲಿ ಬೆಳೆಯುತ್ತಾ ಬಂದಿರುವ ಐಟಿ ಉದ್ಯಮ 2000-2016 ನಡುವೆ 2,283 ಕೋಟಿ ಡಾಲರುಗಳ ವಿದೇಶಿ ಹೂಡಿಕೆಯನ್ನು ತಂದಿದೆ. ಕೇವಲ 2016ನೆ ಸಾಲಿಗೆ ಅಂದಾಜು 16,000 ಕೋಟಿ ರೂಪಾಯಿಗಳ ವಹಿವಾಟು ಮಾಡಿದೆ!

ಆದರೆ, ಯಾವತ್ತಿಗೆ ಮೂಲ ಸಾಫ್ಟ್‌ವೇರ್ ಡೆವಲಪ್ ಮೆಂಟ್ ಬಿಟ್ಟು ಬಾಡಿ ಶಾಪಿಂಗ್ ವ್ಯವಹಾರಕ್ಕೆ ಈ ಉದ್ಯಮ ಇಳಿಯಿತೋ, ಅಲ್ಲಿಂದಾಚೆಗೆ ಐಟಿ ಉದ್ಯಮಕ್ಕೆ ದೇಶ, ದೇಶದ ಬಡಜನ ಹೊಟ್ಟೆಬಟ್ಟೆ ಕಟ್ಟಿಕೊಂಡು ತಮ್ಮ ತೆರಿಗೆ ಹಣದಿಂದ ಒದಗಿಸಿಕೊಟ್ಟ ಸವಲತ್ತುಗಳು ಮರೆತುಹೋಗಿದ್ದವು. ಇವತ್ತು ಈ ಬೆಳವಣಿಗೆಯ ಸಮತೋಲನ ಎಷ್ಟು ಕೆಟ್ಟಿದೆ ಎಂದರೆ, ಐಟಿ ಉದ್ಯಮದ ಶೇ. 25 ಆದಾಯ ಬರುತ್ತಿರುವುದು ದೇಶದ ಕೇವಲ 5 ದೊಡ್ಡ ಐಟಿ ಕಂಪೆನಿಗಳಿಂದ. ಇನ್ನೊಂದೆಡೆ ದೇಶದ ಒಟ್ಟು ರಫ್ತಿನ ಶೇ. 73 ಭಾಗಕ್ಕೆ ದೇಶವು ಐಟಿ ಉದ್ಯಮವನ್ನೇ ಅವಲಂಬಿಸಿದ್ದು, ಅದರಲ್ಲಿ ಶೇ. 62 ಅಮೆರಿಕದ ಪಾಲಾದರೆ, ಶೇ. 29 ಯುರೋಪಿನ ಪಾಲು!

ಈಗಿನ ಬದಲಾದ ಜಾಗತಿಕ ಸನ್ನಿವೇಶದಲ್ಲಿ ಭಾರತದಂತಹ ದೇಶಗಳ ಅತ ಹಸ್ತಕ್ಷೇಪವನ್ನು ಅರ್ಥಮಾಡಿಕೊಂಡಿರುವ ಅಮೆರಿಕ ತನ್ನ ಪ್ರಜೆಗಳ ಹಿತಾಸಕ್ತಿ ರಕ್ಷಣೆಗಾಗಿ ‘‘ಅಮೆರಿಕ ಫಸ್ಟ್’’ ಎಂದು ಘೋಷಿಸಿ, ಭಾರತೀಯ ಐಟಿ ತಂತ್ರಜ್ಞರನ್ನು ದೇಶದಿಂದ ಹೊರಹಾಕುವ ಬಗ್ಗೆ ಯೋಚಿಸುತ್ತಿದೆ. ಆದರೆ ಇದೇ ವೇಳೆಗೆ ಭಾರತದ ಐಟಿ ಕಂಪೆನಿಗಳು ತಮ್ಮನ್ನು ಈ ಹಂತಕ್ಕೆ ಬೆಳೆಸಿದ ದೇಶದ ಹಿತಾಸಕ್ತಿಯನ್ನು ಮರೆತು ಅಮೆರಿಕದ ನಾಗರಿಕರನ್ನೇ ಅಲ್ಲಿ ತಮ್ಮ ಕಂಪೆನಿಗಳಲ್ಲಿ ನೌಕರಿಗೆ ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದಿವೆ. ಮೊನ್ನೆ ಇನ್ಫೋಸಿಸ್ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, 10,000 ಉದ್ಯೋಗಗಳಿಗೆ ಅಮೆರಿಕನ್ನರ ನೇಮಕ ಆಗಲಿದೆ ಎಂದು ಘೋಷಿಸಿದೆ.

ತಮ್ಮ ಉಳಿವಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಹಾಕುವ ಇಂತಹ ವ್ಯವಹಾರಗಳನ್ನು ಪ್ರೋತ್ಸಾಹಿಸುವುದು ದೀರ್ಘಕಾಲಿಕ ದೃಷ್ಟಿಯಿಂದ ದೇಶಕ್ಕೆ ಮಾರಕ ಆಗಲಿದೆ. ‘‘ಐಟಿ ಇಂಡಸ್ಟ್ರಿಯವರೇ, ನಿಮಗೆ ಕೊಡುವುದನ್ನೆಲ್ಲ ದೇಶ ಕೊಟ್ಟಾಗಿದೆ ಈಗ ನಿಮ್ಮ ಸರದಿ. ದೇಶದಲ್ಲಿ ಉದ್ಯೋಗ ಸೃಷ್ಟಿ, ಸಂತುಲಿತ ಬೆಳವಣಿಗೆಗೆ ನಿಮಗೂ ಹೊಣೆ ಇದೆ’’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬೇಕಾದ ಸಮಯ ಇದು. ತಮ್ಮ ಕಿಸೆ ಗಟ್ಟಿ ಮಾಡಿಕೊಳ್ಳುವುದಕ್ಕೆ ಹೊರಟಿರುವ ಐಟಿ ಕಂಪೆನಿಗಳು ಸರಕಾರದಿಂದ ಪಡೆದಿರುವ ಬಿಟ್ಟಿ ಸವಲತ್ತುಗಳನ್ನು ಸರಕಾರವು ವಾಪಸ್ ಪಡೆದು, ಅದನ್ನು ಬೇರೆ ಆದ್ಯತೆಯ ರಂಗಗಳಲ್ಲಿ ಮರುಹಂಚಿಕೆ ಮಾಡಿ, ದೇಶದ ಬೆಳವಣಿಗೆಗೆ ಸಂತುಲನ ತರುವುದಕ್ಕಿದು ಸರಿಯಾದ ಸಮಯ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News