ಪಾತಾಳ ಗಂಗೆ ಹೊರ ತರುವುದು ಅತ್ಯಂತ ಘೋರ: ಯೋಜನೆಗೆ ಭೂ ವಿಜ್ಞಾನಿ, ಜಲತಜ್ಞರಿಂದ ವಿರೋಧ
ಬೆಂಗಳೂರು,ಮೇ 6: ಕುಡಿಯುವ ನೀರಿನ ಸಮಸ್ಯೆಯ ಮಾರ್ಗೋಪಾಯವಾಗಿ ಪಾತಾಳ ಗಂಗೆಯನ್ನು ಭೂ ಗರ್ಭದಿಂದ ಹೊರ ತರುವುದು ಅತ್ಯಂತ ಘೋರ ಎಂದು ಭೂ ವಿಜ್ಞಾನಿ ಟಿ.ಆರ್.ಅನಂತರಾಮ್ ಹೇಳಿದ್ದಾರೆ.
ಶನಿವಾರ ನಗರದ ಶಾಸಕರ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಪಾತಾಳ ಗಂಗೆ ಯೋಜನೆಯ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೂರ್ನಾಲ್ಕು ಶತಮಾನಗಳ ಹಿಂದೆ ಸುಮಾರು ನಾಲ್ಕು ಸಾವಿರ ಮೀಟರ್ ಆಳದ ಭೂ ಗರ್ಭದಲ್ಲಿ ಶೇಖರಣೆಯಾಗಿರುವ ಪಾತಾಳ ನೀರನ್ನು ಹೊರ ತರುವುದು ಅತ್ಯಂತ ಘೋರ. ಇದರಿಂದ ಭಾರಿ ಹಾನಿ ಸಂಭವಿಸಲಿದೆ. ಸಿಲಿಕಾರ್ಡ್, ಕ್ಲೋರೆಡ್ ಅಂಶಗಳು ಹೆಚ್ಚಿರುವ ಈ ನೀರು ಬಳಕೆಗೂ ಯೋಗ್ಯವಲ್ಲ. ಈ ನೀರನ್ನು ಕುಡಿದ ಜೀವಸಂಕುಲ ಭವಿಷ್ಯದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಭೂಕಂಪನ ತೀವ್ರತೆ ಹೆಚ್ಚಾಗಲಿದೆ
ಪಾತಾಳ ಗಂಗೆಯನ್ನು ಹೊರ ತೆಗೆದರೆ ಭೂಮಿಯ ಭದ್ರ ಬುನಾದಿಗೆ ಧಕ್ಕೆಯಾಗಲಿದೆ. 2.5 ಸಾವಿರ (2.5 ಸಾವಿರದಿಂದ 8 ಸಾವಿರ ಮೀಟರ್) ಮೀಟರ್ ಆಳದವರೆಗೂ ಭೂಮಿಯನ್ನು ಕೊರೆದರೆ ಭೂಮಿಯ ಒಳ ಪದರದಲ್ಲಿ ಪರಿಣಾಮಕಾರಿ ಬದಲಾವಣೆಗಳು ಸಂಭವಿಸಲಿವೆ. ಭೂ ಗರ್ಭದಿಂದ ನೀರನ್ನು ಹೊರ ತೆಗೆದದ್ದೇ ಆದಲ್ಲಿ ಭೂಕಂಪನದ ತೀವ್ರತೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪಾತಾಳ ಯೋಜನೆಯಡಿ ಕೊರೆಯುವ ಒಂದು ಕೊಳವೆ ಬಾವಿಯಿಂದ ಪ್ರತಿ ಗಂಟೆಗೆ ಒಂದು ಲಕ್ಷ ಲೀ.ನೀರನ್ನು ಹೊರ ತೆಗೆಯಬಹುದು. ಇದರಿಂದ ಗ್ರಾಮೀಣ ಪ್ರದೇಶದ ಶೇ.80ರಷ್ಟು ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದು ಎಂದು ಹೇಳುವ ಮೂಲಕ ಸರಕಾರ ಜನರನ್ನು ‘ಮೂರ್ಖ’ರನ್ನಾಗಿಸುತ್ತಿದೆ. ಕೋಲಾರದ ಚಿನ್ನದ ಗಣಿಯಲ್ಲಿ 2.5 ಸಾವಿರ ಮೀಟರ್‌ಗಿಂತ ಹೆಚ್ಚಿನ ಆಳಕ್ಕೆ ಭೂಮಿಯನ್ನು ಕೊರೆಯಲಾಗಿದೆ. ಇಲ್ಲಿ ಸಂಗ್ರಹವಾಗಿರುವ ನೀರು ಬಯಲು ಸೀಮೆಯ ಅವಳಿ ಜಿಲ್ಲೆಗಳ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಬಹುದು. ಆದರೆ ಈ ಯೋಜನೆಗೆ ಸರಕಾರ ಯಾಕೆ ಕೈ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು.
10 ಸಾವಿರ ಮೀಟರ್ ಆಳಕ್ಕೆ ಭೂಮಿಯನ್ನು ಕೊರೆದರೆ ನೀರು ಸಿಗುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಪ್ರತಿ ಬಾವಿಗೆ 10ರಿಂದ 12 ಕೋಟಿ ವೆಚ್ಚ ತಗಲಲಿದೆ ಎಂದು ಸರಕಾರ ಹೇಳುವಷ್ಟು ಸರಳವಲ್ಲ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದರೊಂದಿಗೆ ಲಭ್ಯವಿರುವ ನೀರನ್ನು ಮಿತ ಬಳಕೆ ಮತ್ತು ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ನೀರಿನ ಸಮಸ್ಯೆ ಬಹುಪಾಲು ನೀಗಲಿದೆ ಎಂದು ಅಭಿಪ್ರಾಯಪಟ್ಟರು.
ಜಲ ತಜ್ಞ ಎಲೆ ಲಿಂಗರಾಜು ಮಾತನಾಡಿ, ಪಾತಾಳ ಗಂಗೆ ಯೋಜನೆಯಡಿ ನಿಸರ್ಗದ ಸ್ವಾಭಾವಿಕ ವ್ಯವಸ್ಥೆಯನ್ನು ಕದಡಲು ಸರಕಾರ ಮುಂದಾಗಿದೆ. ಪಾತಾಳ ಯೋಜನೆ ಜೀವ ಸಂಕುಲಕ್ಕೆ ಮಾರಕ. ಇಂತಹ ದುಸ್ಸಾಹಸಕ್ಕೆ ಸರಕಾರ ಕೈ ಹಾಕುವುದು ಬಿಡಲಿ. ಇದರ ಬದಲಿಗೆ ಮಳೆ ನೀರು ಕೊಯ್ಲಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ತಿಳಿಸಿದರು.
ಭೂ ವಿಜ್ಞಾನಿ ಡಾ.ಎಚ್.ಚಂದ್ರಶೇಖರ್ ಮಾತನಾಡಿ, ಭೂ ಗರ್ಭದ ನೀರು ಅತ್ಯಂತ ವಿಷಕಾರಿ ಎಂಬುವುದು ಸರಕಾರದ ಅರಿವಿಗೆ ಬಾರದೆ ಇರುವುದು ಆತಂಕಕಾರಿ. ರಾಜ್ಯ ಬರದಿಂದ ತತ್ತರಿಸುತ್ತಿರುವಾಗ ಭೂ ಗರ್ಭದ ನೀರನ್ನು ಹೊರ ತೆಗಯಲು ಮುಂದಾಗಿರುವುದು ಮೂರ್ಖತನದ ಕೆಲಸ ಎಂದು ಛೇಡಿಸಿದರು.
ಸಭೆಯಲ್ಲಿ ಸಮಿತಿಯ ಜಂಟಿ ಕಾರ್ಯದರ್ಶಿ ಆರ್.ರಾಮಕೃಷ್ಣ, ಸಮುದಾಯ ಸಂಘಟನೆಯ ಕೆ.ಎಸ್.ವಿಮಲಾ, ಸುರೇಂದ್ರ, ಮಳೆ ನೀರು ಕೋಯ್ಲು ತಜ್ಞ ಆನಂದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಸಮರ್ಥಿಸಿಕೊಳ್ಳುವಲ್ಲಿಯೂ ವಿಫಲ: ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಸರಕಾರದ ಪರ ವಕಾಲತ್ತು ವಹಿಸಿ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಪಟ್ಟ ಪ್ರಯತ್ನ ವಿಫಲವಾಯಿತು. ಯೋಜನೆಯ ದುಷ್ಪರಿಣಾಮ ಕುರಿತು ವಿಜ್ಞಾನಿಗಳು ನೀಡಿದ ಕರಾರುವಾಕ್ಕಾದ ಮಾಹಿತಿಯಿಂದ ಕಮ್ಮರಡಿ ಸಭೆಯಲ್ಲಿ ವೌನ ವಹಿಸಬೇಕಾಯಿತು.