ಹೆಣ್ಣಿನ ಸ್ವಾಭಿಮಾನಿ ಬದುಕಿನ ಚಿತ್ರಣವೇ ‘ಹೂಬತ್ತಿ’: ಡಾ.ವಿಜಯಾ
ಬೆಂಗಳೂರು, ಮೇ 7: ಜೀವನದಲ್ಲಿ ಹೆಣ್ಣಿಗೆ ಎದುರಾಗುವ ಕಷ್ಟ-ಸುಖಗಳನ್ನು ಎದುರಿಸಿ, ಸ್ವಾಭಿಮಾನ ಜೀವನ ನಡೆಸುವ ಆತ್ಮಸ್ಥೈರ್ಯವನ್ನು ‘ಹೂಬತ್ತಿ’ ಕಾದಂಬರಿಯಲ್ಲಿ ನಿರೂಪಿಸಲಾಗಿದೆ ಎಂದು ಲೇಖಕಿ ಡಾ.ವಿಜಯಾ ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ರವಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಹೇಮಂತ ಸಾಹಿತ್ಯ ಪ್ರಕಾಶನ ಆಯೋಜಿಸಿದ್ದ ಎಸ್.ಸಾಯಿಲಕ್ಷ್ಮಿಅವರ ಕಾದಂಬರಿ ‘ಹೂಬತ್ತಿ’ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕೇ ಹೋರಾಟವಾಗಿರುವ ಇಂದಿನ ದಿನದಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳುವುದು ಕಷ್ಟದ ಕೆಲಸ. ಇಂದು ಹೆಣ್ಣು ಹೇಗಿರಬೇಕು ಎಂಬುದು ನಿರ್ಧರಿಸಲ್ಪಡುತ್ತಿದ್ದು, ವರ್ತಮಾನದ ಈ ಕಾಲಘಟ್ಟದಲ್ಲಿ ಮಹಿಳೆಯು ವಿಭಿನ್ನವಾದ ವಾತಾವರಣದಲ್ಲಿ ಜೀವಿಸುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಸಾಹಿತ್ಯ ಕೃತಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಯಿಲಕ್ಷ್ಮಿಯವರ ಹೂಬತ್ತಿ ಕಾದಂಬರಿಯಲ್ಲಿನ ಪಾತ್ರಗಳು ವಿಶೇಷವಾದ ಸ್ಥಾನದಲ್ಲಿ ನಿಲ್ಲುತ್ತವೆ ಎಂದು ಅವರು ಹೇಳಿದರು.
ಕಾದಂಬರಿಯಲ್ಲಿ ನಾಯಕಿ ತನಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾಳೆ. ಕಾದಂಬರಿಯಲ್ಲಿ ಅನೇಕ ಪಾತ್ರಗಳಿದ್ದು, ಬಹಳ ಪಾತ್ರಗಳು ಒಳ್ಳೆಯ ಗುಣಗಳಿಂದ ಕೂಡಿದ ಪಾತ್ರಗಳಾಗಿವೆ. ಹರಿಯುವ ನೀರಿನಂತೆ ಸರಳವಾಗಿ ಕಾದಂಬರಿ ರಚಿಸಿದ್ದು, ಓದುಗರನ್ನು ತನ್ನತ್ತ ಸೆಳೆಯುತ್ತದೆ. ಇಂದು ಅನೇಕ ಹೊಸ ಹೊಸ ಕೃತಿಗಳು ಬರುತ್ತಿದ್ದು, ಅವುಗಳನ್ನು ಸ್ವೀಕರಿಸುವ ಮನೋಭಾವವನ್ನು ಓದುಗರು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೊ.ಜಿ.ಅಶ್ವತ್ಥನಾರಾಯಣ ಮಾತನಾಡಿ, 19ನೆ ಶತಮಾನದ ಕೊನೆಯ ಭಾಗದಲ್ಲಿ ಮಹಿಳಾ ಕಾದಂಬರಿಗಳು ಜನ್ಮ ತಾಳಿದವು. ಆ ಕಾದಂಬರಿಗಳು ತುಂಬಾ ಸ್ವಾರಸ್ಯಭರಿತವಾಗಿರುತ್ತಿದ್ದವು. ಆದರೆ, ಇತ್ತೀಚಿನ ಕಾದಂಬರಿಗಳು ಓದಲಾಗದ, ಓದಿದರೂ ಅರ್ಥವಾಗದ ರೀತಿಯಲ್ಲಿ ಇರುತ್ತವೆ. ವಾಸ್ತವಿಕ ಜೀವನದ ನಿಟ್ಟಿನಲ್ಲಿ ಕಾದಂಬರಿಗಳನ್ನು ಇಂದು ಬರೆಯಲಾಗುತ್ತದೆ ವಿನಹ ವಾಸ್ತವಿಕ ಜೀವನದ ಸಂಗತಿಗಳನ್ನು ಅನುಸರಿಸಿ ಬರೆಯುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ಭಾರ್ಗವಿ ನಾರಾಯಣ, ಲೇಖಕಿ ಎಸ್. ಸಾಯಿಲಕ್ಷ್ಮಿ, ಹೇಮಂತ ಸಾಹಿತ್ಯ ಪ್ರಕಾಶನದ ವೆಂಕಟೇಶ್, ರತ್ನಾಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.