ಸುಗಮವಾಗಿ ನಡೆದ ‘ನೀಟ್ ಪರೀಕ್ಷೆ’
ಬೆಂಗಳೂರು, ವೆುೀ 7: ಸುಪ್ರಿಂ ಕೋರ್ಟ್‌ನ ಆದೇಶದಂತೆ ಮೊದಲ ಬಾರಿಗೆ ರಾಜ್ಯದಲ್ಲಿ ವೈದ್ಯಕೀತ ಮತ್ತು ದಂತ ವೈದ್ಯಕೀಯ ಕೋಸ್ ಪ್ರವೇಶಕ್ಕೆ ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ‘ನೀಟ್ ಪರೀಕ್ಷೆ’ ಸುಗಮವಾಗಿ ನಡೆಯಿತು.
2017-18ನೆ ಸಾಲಿನಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ‘ನೀಟ್’ ಕಡ್ಡಾಯ ಗೊಳಿಸಿದ್ದು, 180 ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಯನ್ನು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಪರಿಗಣಿಸಲಾಗಿತ್ತು. ನೀಟ್ ಪರೀಕ್ಷೆಯು ದೇಶದ 103 ನಗರಗಳಲ್ಲಿ ನಡೆಸಲಾಯಿತು.
ರಾಷ್ಟ್ರಾದ್ಯಂತ ನಡೆದ ಪರೀಕ್ಷೆಯಲ್ಲಿ 11.35ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 103 ನಗರಗಳ 2,200ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ಬೆಳಗಾವಿ ಜಿಲ್ಲಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಸಿದ್ದು, ಪರೀಕ್ಷಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಮುನ್ನಚ್ಚರಿಕೆ ಕ್ರಮವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿತ್ತು.
ಹಿಂದಿ, ಇಂಗ್ಲಿಷ್, ಅಸ್ಸಾಮಿ, ಬಂಗಾಳಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಒರಿಯಾ ಹಾಗೂ ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಲಾಗಿತ್ತು.
ಆಯುಷ್, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2 ಮತ್ತು 3ರಂದು ಈಗಾಗಲೇ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಿದೆ.
ಮೇ 14ಕ್ಕೆ ಕಾಮೆಡ್-ಕೆ ಪರೀಕ್ಷೆ : ಖಾಸಗಿ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಟಾದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಮೇ 14ಕ್ಕೆ ‘ಕಾಮೆಡ್-ಕೆ’ ಪ್ರವೇಶ ಪರೀಕ್ಷೆ ನಡೆಸಲಿದೆ ಎಂದು ತಿಳಿಸಿದೆ.