ಕೆಂಪೇಗೌಡ ಸಂಶೋಧನಾ ಕೇಂದ್ರಕ್ಕೆ 50 ಕೋಟಿ ರೂ.ಬಿಡುಗಡೆ: ಮೇಯರ್ ಪದ್ಮಾವತಿ
ಬೆಂಗಳೂರು, ಮೇ 7: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಘೋಷಿಸಿರುವಂತೆ ನಾಡಪ್ರಭು ಕೆಂಪೇಗೌಡ ಸಂಶೋಧನಾ ಅಧ್ಯಯನ ಕೇಂದ್ರ ಸ್ಥಾಪನೆಗೆ ಮೀಸಲಿಟ್ಟ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ರವಿವಾರ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಗಡಿಯ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ನೀಡಲಾಗಿದೆ. ಶೀಘ್ರವೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಕೆಂಪೇಗೌಡರ ಸೊಸೆ ತ್ಯಾಗಮಯಿ ಲಕ್ಷ್ಮಿದೇವಿ ಅವರ ಪುತ್ಥಳಿಯನ್ನು ಬರುವ ಆಗಸ್ಟ್‌ನಲ್ಲಿ ಬಿಬಿಎಂಪಿ ಪಾಲಿಕೆ ಕೇಂದ್ರ ಕಚೇರಿ ಮುಂದೆ ಸ್ಥಾಪನೆ ಮಾಡಲಾಗುವುದು ಎಂದ ಅವರು, ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಕೆಂಪೇಗೌಡ ಹಾಗೂ ಅವರ ವಂಶಸ್ಥರ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಆ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ನಾಗರಾಜ್, ಸರ್ವಕಾಲಕ್ಕೂ ಅನ್ವಯವಾಗುವ ಆಡಳಿತ ನೀತಿಯನ್ನು ಜಾರಿಗೆ ತಂದ ಕೆಂಪೇಗೌಡರು ಇಂದಿನ ರಾಜಕಾರಣಿಗಳಿಗೆ ಆದರ್ಶ ಎಂದು ಸ್ಮರಿಸಿದರು.
ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಚಂದ್ರು ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಬೇಕು ಮತ್ತು ಕೆಂಪೇಗೌಡರ ಚರಿತ್ರೆಗೆ ಸಂಬಂಧಿಸಿದ ಮಾಹಿತಿಗಳು ದಿನದ 24 ಗಂಟೆಯೂ ಬಿತ್ತರಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮಿ, ರಾಜ್ಯಸಭಾ ಸದಸ್ಯ ರಾಜುಗೌಡ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಉಪಸ್ಥಿತರಿದ್ದರು.