ನ್ಯಾಯಾಧೀಶರ ಕೈಯಲ್ಲಿ ಆರೆಸ್ಸೆಸ್ ಪೆನ್ನು: ಜ್ಞಾನಪ್ರಕಾಶ್ ಸ್ವಾಮೀಜಿ

Update: 2017-05-08 15:15 GMT

ಬೆಂಗಳೂರು, ಮೇ 8: ‘ಭಡ್ತಿ ಮೀಸಲಾತಿ’ ಸಂರಕ್ಷಣೆಗಾಗಿ ಕೂಡಲೇ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಆ ಮೂಲಕ ಪರಿಶಿಷ್ಟ ನೌಕರರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು.

ನಗರದ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಹಮ್ಮಿಕೊಂಡಿದ್ದ ಮೀಸಲಾತಿ ಸಂರಕ್ಷಣಾ ರ್ಯಾಲಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಪಾಲ್ಗೊಂಡಿದ್ದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ನ್ಯಾಯಾಧೀಶರ ಕೈಯಲ್ಲಿ ಆರೆಸ್ಸೆಸ್ ಪೆನ್ನು ಇದೆ. ಹೀಗಾಗಿಯೇ ನ್ಯಾಯಾಧೀಶರು ದಲಿತರಿಗೆ, ಶೋಷಿತ ವರ್ಗದವರಿಗೆ ಅನ್ಯಾಯವಾಗುವ ರೀತಿಯಲ್ಲಿ ತೀರ್ಪು ನೀಡುತ್ತಿದ್ದು, ಇದನ್ನು ಯಾವುದೇ ಸಂದರ್ಭದಲ್ಲಿಯೂ ಒಪ್ಪಲಾಗದು ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ತಾನೂ ದಲಿತ ಸಿಎಂ ಎಂದಿದ್ದಾರೆ. ಆದರೆ, ಈ ಸಮುದಾಯದ ಹಕ್ಕುಗಳನ್ನು ರಕ್ಷಣೆ ಮಾಡದಿದ್ದರೆ, ನೀವು ‘ನಕಲಿ ದಲಿತ ಸಿಎಂ’ ಎಂಬುದು ಸಾಬೀತಾಗಲಿದೆ. ಭಡ್ತಿ ಮೀಸಲಾತಿ ಸಂಬಂಧ ಪರಿಶಿಷ್ಟರಿಗೆ ಹಿಂಭಡ್ತಿಯಾದರೆ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಭಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ. ಆದರೆ, ಮೀಸಲಾತಿ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಆತಂಕಕ್ಕೆ ಸಿಲುಕಿರುವ ನೌಕರರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲು ಸರಕಾರ ಮುಂದಾಗಬೇಕೆಂದು ಧರಣಿನಿರತರು ಆಗ್ರಹಿಸಿದರು.

 2011ರ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಲು ಮುಂದಾಗುವ ಅಗತ್ಯವಿದೆ. ಭಡ್ತಿ ಮೀಸಲಾತಿ ಸಂಬಂಧ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ್ದು, ಅದನ್ನು ಲೋಕಸಭೆಯಲ್ಲಿಯೂ ಮಂಡಿಸಲು ಕೇಂದ್ರ ಸರಕಾರ ಕ್ರಮ ವಹಿಸಬೇಕು. ಅಲ್ಲದೆ, ಮೀಸಲಾತಿಯನ್ನು ಸಂವಿಧಾನದ ಪರಿಚ್ಛೇದ 9ಕ್ಕೆ ಸೇರಿಸಬೇಕು. ಆಗ, ಮಾತ್ರ ಸುಪ್ರೀಂ ಕೋರ್ಟ್ ಮೀಸಲಾತಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖಂಡರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News