ಉಲ್ಬಣಿಸಿರುವ ರಾಜ್ಯ ಬಿಜೆಪಿಯ ಬಿಕ್ಕಟ್ಟು

Update: 2017-05-09 18:55 GMT

ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿಯು, ಪಕ್ಷದೊಳಗಿರುವ ಒಡಕುಗಳನ್ನು ಸರಿಪಡಿಸಿ ಭಿನ್ನ ಮತೀಯರ ಬಾಯಿ ಮುಚ್ಚಿಸಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಭಿನ್ನಮತ ಉಲ್ಬಣಿಸಿದ ಸಂದರ್ಭದಲ್ಲಿ, ವರಿಷ್ಠರ ನೇತೃತ್ವದಲ್ಲಿ ಎರಡು ದಿನಗಳ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಯಡಿಯೂರಪ್ಪ ಏಕಾಏಕಿ ತನ್ನ ಬಾಣವನ್ನು ಈಶ್ವರಪ್ಪರ ಕಡೆಗೆ ಬಿಡುವುದನ್ನು ನಿಲ್ಲಿಸಿ, ಆರೆಸ್ಸೆಸ್ ಮುಖಂಡರ ವಿರುದ್ಧ ಬಿಡತೊಡಗಿದಾಕ್ಷಣ ದಿಲ್ಲಿಯ ವರಿಷ್ಠರು ಎಚ್ಚೆತ್ತುಕೊಂಡು ರಾಜ್ಯಕ್ಕೆ ದೌಡಾಯಿಸಿದರು. ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಗಲಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಈ ಕಾರ್ಯಕಾರಿಣಿ ಸಭೆಯಲ್ಲಿ ಸಂತೋಷ್ ಬಿಜೆಪಿಯೊಳಗೆ ಯಾವ ಪಾತ್ರ ವಹಿಸಲಿದ್ದಾರೆ ಎನ್ನುವುದು ನಿರ್ಣಯವಾಗಲಿದೆ ಎಂದೂ ಭಾವಿಸಲಾಗಿತ್ತು. ಆದರೆ, ಕಾರ್ಯಕಾರಿಣಿ ಸಭೆ ಮೂಮೂಲಿ ಬಿಜೆಪಿ ಸಭೆಯ ರೀತಿಯಲ್ಲೇ ಮುಕ್ತಾಯಗೊಂಡಿತು. ಸಿದ್ದರಾಮಯ್ಯ ಸರಕಾರದ ವಿರುದ್ಧ ಒಂದಾಗುವ, ಕಾರ್ಯತಂತ್ರವನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತಾದರೂ, ಈ ತೀರ್ಮಾನ ಕಾರ್ಯರೂಪಕ್ಕೆ ಇಳಿಯುವುದು ಅನುಮಾನ. ಯಾಕೆಂದರೆ, ಸಭೆಯ ತೀರ್ಮಾನವನ್ನು ಸೇರಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಒಮ್ಮತದಿಂದ ಸ್ವೀಕರಿಸಿಯೇ ಇಲ್ಲ. ಸಭೆಯಲ್ಲಿ ಎಲ್ಲರೂ ಒಟ್ಟಾಗಿದ್ದರೂ, ಒಳಗಿಂದ ಬೇರೆ ಬೇರೆಯಾಗಿಯೇ ಉಳಿದಿದ್ದರು.

ಬಿಜೆಪಿಯ ರಾಷ್ಟ್ರೀಯ ಸಂಘಟಕನಾಗಿರುವ ಸಂತೋಷ್ ಅವರೇ ಭಿನ್ನಮತದ ಮೂಲ ಕಾರಣವಾಗಿರುವುದರಿಂದ, ಅವರ ನೇತೃತ್ವದಲ್ಲಿ ಪಕ್ಷ ಪುನರ್ ಸಂಘಟನೆಯಾಗುತ್ತದೆ ಎನ್ನುವುದೇ ಮೂರ್ಖತನವಾಗುತ್ತದೆ. ಕಾರ್ಯಕಾರಿಣಿ ಸಭೆ ಭಿನ್ನಮತವನ್ನು ತಣ್ಣಗಾಗಿಸುವುದು ಪಕ್ಕಕ್ಕಿರಲಿ, ಬದಲಿಗೆ ವರಿಷ್ಠರ ಮುಂದೆಯೇ ಭಿನ್ನಮತ ಸ್ಫೋಟಗೊಂಡಿತು. ಕನಿಷ್ಠ ಬ್ರಿಗೇಡ್ ಕುರಿತಂತೆಯೂ ಒಂದು ನಿರ್ಣಯಕ್ಕೆ ಬರಲು ಕಾರ್ಯಕಾರಿಣಿ ಸಮಿತಿಗೆ ಸಾಧ್ಯವಾಗಲಿಲ್ಲ. ಹೀಗಿರುವಾಗ, ಈ ಭಿನ್ನಮತದ ಜೊತೆ ಜೊತೆಗೇ ಕಾಂಗ್ರೆಸ್‌ನ ವಿರುದ್ಧ ಬಿಜೆಪಿ ಹೋರಾಟ ನಡೆಸುವುದು ಹೇಗೆ ಸಾಧ್ಯ?

ಕಾರ್ಯಕಾರಿಣಿ ಸಮಿತಿ ಸಭೆ ನಡೆಯುತ್ತಿರುವಾಗಲೇ ಸುದ್ದಿಗಾರರನ್ನುದ್ದೇಶಿಸಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೇರೆ ಬೇರೆಯಾಗಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ, ‘ಬ್ರಿಗೇಡ್ ಮುಂದುವರಿಯುತ್ತದೆ. ಬಿಜೆಪಿಗೂ ಬ್ರಿಗೇಡ್‌ಗೂ ಸಂಬಂಧವಿಲ್ಲ. ಬ್ರಿಗೇಡ್ ಹಿಂದುಳಿದವರ್ಗವನ್ನು ಸಂಘಟಿಸುವುದಕ್ಕೆ ರಚನೆಯಾಗಿರುವುದು. ಮುಂದುವರಿಸುವುದಕ್ಕೆ ಅಮಿತ್ ಶಾ ಅವರು ಅನುಮತಿ ನೀಡಿದ್ದಾರೆ. ಆದುದರಿಂದ ಬ್ರಿಗೇಡ್ ಸ್ಥಗಿತವಾಗುವ ಪ್ರಶ್ನೆಯೇ ಇಲ್ಲ’’ ಎಂದು ಹೇಳಿಕೆ ನೀಡಿದರು. ಮರುದಿನ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಬ್ರಿಗೇಡ್‌ನ ವಿರುದ್ಧ ಮಾತನಾಡಿದರು.

ಈಶ್ವರಪ್ಪ ಅವರ ಪತ್ರಿಕಾಗೋಷ್ಠಿಗೆ ಅವರು ನೀಡಿದ ಮರು ಉತ್ತರವಾಗಿತ್ತು ಅದು. ‘‘ಸ್ವತಃ ಮೋದಿಯವರೇ ತನ್ನ ಹೆಸರಿನಲ್ಲಿ ಯಾವುದೇ ಬ್ರಿಗೇಡ್ ಇರಬಾರದು ಎಂದು ಆದೇಶ ನೀಡಿರುವಾಗ, ಈಶ್ವರಪ್ಪ ಬ್ರಿಗೇಡನ್ನು ಹೇಗೆ ಕಟ್ಟುತ್ತಾರೆ? ಬಿಜೆಪಿಯಲ್ಲಿ ಯಾವುದೇ ಬ್ರಿಗೇಡ್‌ಗೆ ಅವಕಾಶವಿಲ್ಲ. ಇರುವ ಬ್ರಿಗೇಡ್‌ನ್ನು ನಿಷೇಧಿಸುವ ಕುರಿತು ಬಿಜೆಪಿಯೊಳಗೆ ಚಿಂತನೆ ನಡೆಯುತ್ತಿದೆ’’ ಎಂದು ಕರಂದ್ಲಾಜೆ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಆದರೆ ‘ರಾಯಣ್ಣ ಬ್ರಿಗೇಡ್’ ಈಶ್ವರಪ್ಪ ತಮ್ಮ ಹೆಸರಿನ ಮೂಲಕ ಮಾಡಿಕೊಂಡಿಲ್ಲ ಎನ್ನುವುದನ್ನು ಅವರು ಈ ಸಂದರ್ಭದಲ್ಲಿ ಮರೆತಿದ್ದಾರೆ. ಬಿಜೆಪಿಯೊಳಗೆ ಇದ್ದಾಕ್ಷಣ, ತನ್ನ ಸಮುದಾಯದ ಪರವಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು, ತನ್ನ ಸಮುದಾಯವನ್ನು ಸಂಘಟಿಸುವುದು ತಪ್ಪೇ? ಎನ್ನುವ ಪ್ರಶ್ನೆಯೊಂದು ತಲೆಯೆತ್ತುತ್ತದೆ.

ಈಶ್ವರಪ್ಪ ಹಿಂದುಳಿದವರ್ಗದ ಸಂಘಟನೆಗೆ ಸಂಬಂಧಿಸಿದ ವೇದಿಕೆಗಳಲ್ಲಿ ಕಾಣಿಸಿಕೊಳ್ಳಬಾರದು ಎಂದು ಬಿಜೆಪಿ ಬಯಸುತ್ತದೆಯಾದರೆ, ಯಡಿಯೂರಪ್ಪ ಅವರಿಗೂ ಅದೇ ನಿಯಮ ಅನ್ವಯವಾಗಬೇಕಲ್ಲ? ಲಿಂಗಾಯತರ ಹತ್ತು ಹಲವು ಸಂಘಟನೆಗಳ ಜೊತೆಗೆ ಯಡಿಯೂರಪ್ಪ ನೇರವಾಗಿ ಸಂಬಂಧವನ್ನು ಹೊಂದಿದ್ದಾರೆ. ಅದಕ್ಕೆ ಆರ್ಥಿಕವಾಗಿಯೂ ನೆರವನ್ನು ನೀಡುತ್ತಿದ್ದಾರೆ ಮತ್ತು ಇಂದು ಯಡಿಯೂರಪ್ಪ ಪಕ್ಷದಲ್ಲಿ ತನ್ನ ಬೇರನ್ನು ಇಳಿಸಿದ್ದಿದ್ದರೆ ಅದೇ ಲಿಂಗಾಯತರ ಲಾಬಿಯ ಮೂಲಕವೇ ಆಗಿದೆ. ಯಡಿಯೂರಪ್ಪ ಬಿಜೆಪಿಯೊಳಗಿರುವ ಹಿಂದುಳಿದವರ್ಗವನ್ನು ಸಂಘಟಿಸಿ ಅದರ ನೇತೃತ್ವವನ್ನು ವಹಿಸಿಕೊಂಡರೆ ಅದು ಬಿಜೆಪಿಗೆ ತೊಂದರೆ ಮಾಡುವುದಕ್ಕಿಂತ ಹೆಚ್ಚು ಲಿಂಗಾಯತ ಶಕ್ತಿಗೆ ಸ್ಪರ್ಧೆ ನೀಡುತ್ತದೆ ಎನ್ನುವುದು ಯಡಿಯೂರಪ್ಪರಿಗಿರುವ ಭಯ.

ಸದ್ಯಕ್ಕೆ ಈಶ್ವರಪ್ಪರ ಹಿಂದುಳಿದವರ್ಗದ ನೆರವನ್ನು ಪಡೆದುಕೊಂಡು ಯಡಿಯೂರಪ್ಪ ಮತ್ತು ಅವರ ಲಿಂಗಾಯತ ಬೆಂಬಲಿಗರನ್ನು ಎದುರಿಸುವ ತಂತ್ರ ಬಿಜೆಪಿಯೊಳಗಿರುವ ವೈದಿಕರು ಅಥವಾ ಆರೆಸ್ಸೆಸ್‌ನದ್ದು. ಈ ತಂತ್ರ ಪ್ರತಿತಂತ್ರದ ಮಧ್ಯೆ, ಬಿಜೆಪಿ ಸದ್ಯಕ್ಕಂತೂ ಒಂದಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಬಿಜೆಪಿಯೊಳಗಿನ ವಿರೋಧಾಭಾಸಗಳು ಅದರ ಸಿದ್ಧಾಂತದೊಳಗಿರುವ ದ್ವಂದ್ವಗಳೇ ಈ ಬಿಕ್ಕಟ್ಟಿಗೆ ಮುಖ್ಯ ಕಾರಣ. ಮತ ಯಾಚನೆ ಮಾಡುವ ಸಂದರ್ಭದಲ್ಲಿ ಹಿಂದುತ್ವದ ಹೆಸರನ್ನು ಬಳಸಲಾಗುತ್ತದೆ. ಧಾರ್ಮಿಕವಾಗಿ ಸಮಾಜವನ್ನು ಒಡೆಯುವ ಒಂದೇ ಉದ್ದೇಶದಿಂದ ಬಿಜೆಪಿ ಹಿಂದುತ್ವದ ಹೆಸರನ್ನು ಬಳಸಿಕೊಳ್ಳುತ್ತದೆ. ಇಡೀ ಪಕ್ಷದ ಸಂರಚನೆ ಹಿಂದುತ್ವದ ಆಧಾರದಲ್ಲಿ ನಿಂತಿಲ್ಲ, ಬದಲಿಗೆ ಜಾತೀಯ ಆಧಾರದಲ್ಲಿಯೇ ಅದನ್ನು ಸಂಘಟಿಸಲಾಗಿದೆ. ಹಿಂದುತ್ವ ಎಂದರೆ ‘ಬ್ರಾಹ್ಮಣ್ಯ’ಕ್ಕೆ ಆರೆಸ್ಸೆಸ್ ಬಳಸುವ ಪರ್ಯಾಯ ಪದ. ಬಿಜೆಪಿಯಲ್ಲಿ ಸದಾ ಬ್ರಾಹ್ಮಣರ ಪಾರಮ್ಯವೇ ಹೆಚ್ಚು. ದಲಿತರು ಆರೆಸ್ಸೆಸ್‌ನಲ್ಲಾಗಲಿ, ಬಿಜೆಪಿಯಲ್ಲಾಗಲಿ ಅತ್ಯುನ್ನತ ಹುದ್ದೆಗಳನ್ನು ಪಡೆದಿರುವುದು ಕಡಿಮೆ.

ಅವರನ್ನು ಆಯುಧಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಅವರಿಗೆ ಅಧಿಕಾರದ ಚುಕ್ಕಾಣಿ ನೀಡುವ ಸಂದರ್ಭದಲ್ಲಿ ಹೊರಗಿಡಲಾಗುತ್ತದೆ. ಬ್ರಾಹ್ಮಣರ ಸಂಖ್ಯೆ ತೀರಾ ಕಡಿಮೆಯಿದ್ದರೂ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಅವರೇ ಹೆಚ್ಚು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಕಳೆದ ಬಾರಿ ಬಿಜೆಪಿ ಅಧಿಕಾರ ಹಿಡಿದಾಗ, ಮುಖ್ಯಮಂತ್ರಿಯಾಗಿ ಅನಂತಕುಮಾರ್ ಅವರನ್ನು ಆಯ್ಕೆ ಮಾಡುವಲ್ಲಿ ಆರೆಸ್ಸೆಸ್ ಗರಿಷ್ಠ ಪ್ರಯತ್ನವನ್ನು ಮಾಡಿತ್ತು. ಆದರೆ ಕರ್ನಾಟಕದಲ್ಲಿ ಲಿಂಗಾಯತರನ್ನು ಎದುರು ಹಾಕಿಕೊಳ್ಳುವ ಧೈರ್ಯ ಆರೆಸ್ಸೆಸ್‌ಗೆ ಇರದ ಕಾರಣಕ್ಕಾಗಿ, ಯಡಿಯೂರಪ್ಪರನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಬೇಕಾಯಿತು. ಬಳಿಕ ಒಳಸಂಚಿನಿಂದ ಅವರನ್ನು ಕೆಳಗಿಳಿಸಿ, ಒಕ್ಕಲಿಗರ ಪ್ರತಿನಿಧಿ ಎನ್ನುವ ನಿಟ್ಟಿನಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡಲಾಯಿತು. ಇಂದಿಗೂ ರಾಜ್ಯ ಬಿಜೆಪಿಯ ಒಳಗೆ ಜಾತಿಯ ಹಿಡಿತ ಬಲವಾಗಿದೆ. ಬಿಜೆಪಿ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟೂ, ಬಿಜೆಪಿಯೊಳಗಿನ ಜಾತಿಯ ಒಳ ತಿಕ್ಕಾಟಗಳೇ ಆಗಿವೆೆ.

ಲಿಂಗಾಯತರ ಕೈಯಿಂದ ಬಿಜೆಪಿಯ ಹಿಡಿತವನ್ನು ಸಡಿಲಗೊಳಿಸಲು ವೈದಿಕರು ನಡೆಸುತ್ತಿರುವ ಪ್ರಯತ್ನ, ಹಿಂದುಳಿದ ವರ್ಗವನ್ನು ಸಂಘಟಿಸಿ ತನ್ನ ಅಸ್ತಿತ್ವವನ್ನು ಉಳಿಸಲು ಹೆಣಗಾಡುತ್ತಿರುವ ಈಶ್ವರಪ್ಪ, ಲಿಂಗಾಯತ ಶಕ್ತಿಯನ್ನು ಬಳಸಿಕೊಂಡು ಬಿಜೆಪಿಯೊಳಗಿನ ವೈದಿಕ ಶಕ್ತಿಗಳಿಗೆ ಸಡ್ಡು ಹೊಡೆದಿರುವ ಯಡಿಯೂರಪ್ಪ ಸದ್ಯದ ಬಿಜೆಪಿಯೊಳಗಿನ ವಾಸ್ತವವಾಗಿದೆ. ಈ ವಾಸ್ತವವನ್ನು ಒಪ್ಪಿಕೊಂಡು ಅದಕ್ಕೆ ಮುಖಾಮುಖಿಯಾಗುವ ಧೈರ್ಯವನ್ನು ವರಿಷ್ಠರು ತೋರಿಸಿದಾಗ ಮಾತ್ರ ಬಿಜೆಪಿಯೊಳಗಿನ ಭಿನ್ನಮತ ಶಮನವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News