ಪಂಜಾಬ್ ಆಮ್‌ಆದ್ಮಿಯಲ್ಲಿ ಘಟಸ್ಫೋಟ ಸಾಧ್ಯತೆ

Update: 2017-05-10 10:39 GMT

ಚಂಡಿಗಡ,ಮೇ 10: ಆಮ್‌ಆದ್ಮಿ ಪಕ್ಷದ ನೇತೃತ್ವದಲ್ಲಿ ಬದಲಾವಣೆಯಾದ ಬಳಿಕ ಅಸಮಾಧಾನ ತೀವ್ರಗೊಂಡಿದೆ. ಪಂಜಾಬ್‌ನ ಆಮ್ ಆದ್ಮಿಪಕ್ಷದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ದೊಡ್ಡ ಧಮಾಕ ನಡೆಯುವ ಸಾಧ್ಯತೆ ಸೃಷ್ಟಿಯಾಗಿದೆ. ಭಗವಂತ್ ಸಿಂಗ್ ಮಾನ್‌ರನ್ನು ಪಕ್ಷದ ಹೊಸ ಮುಖ್ಯಸ್ಥ ಮಾಡಿದ್ದರಿಂದ ಮಾಜಿ ಕನ್ವೀನರ್ ಗುರ್‌ಪ್ರೀತ್ ಸಿಂಗ್ ದುಗ್ದಿ ಮತ್ತು ಸುಖಪಾಲ್ ಸೀಂಗ್ ಖೇರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೊಸ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರದೇಶ ಕಾರ್ಯದರ್ಶಿ ವಿನೀತ್ ಜೋಶಿ ಆಮ್ ಆದ್ಮಿಯ ಹನ್ನೊಂದು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದು, ಪಂಜಾಬ್ ರಾಜಕೀಯದಲ್ಲಿ ನಡೆಯಬಹುದಾದ ಹೊಸ ಸಮೀಕರಣದ ಸೂಚನೆಯನ್ನು ನೀಡಿದ್ದಾರೆ.

ಮಂಗಳವಾರ ಚಂಡಿಗಡದಲ್ಲಿ ಗುರ್‌ಪ್ರೀತ್ ಸಿಂಗ್ ದುಗ್ದಿ ತಮ್ಮ ನಿಕಟವರ್ತಿಗಳ ಸಭೆ ಕರೆದು ವಿಚಾರ ವಿಮರ್ಶೆ ಮಾಡಿದ್ದಾರೆ. ಪಕ್ಷದ ನಿರ್ಧಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದ ಬಳಿಕ ಅರವಿಂದ ಕೇಜ್ರಿವಾಲ್ ಪಂಜಾಬ್ ಶಾಸಕಾಂಗ ಪಕ್ಷದ ಸಭೆಯನ್ನು ಸೋಮವಾರ ಕರೆದಿದ್ದರು.

ಸಭೆಯಲ್ಲಿ ಕೇಜ್ರಿವಾಲ್ ಗುರ್‌ಪ್ರೀತ್ ಸಿಂಗ್ ದುಗ್ದಿಯವರನ್ನು ಪಂಜಾಬ್ ಕನ್ವೀನರ್ ಸ್ಥಾನದಿಂದ ತೆಗೆದು ಭಗವಂತ್ ಸಿಂಗ್ ಮಾನ್‌ರನ್ನು ಪ್ರಧಾನ ಮತ್ತು ಅಮನ್ ಆರೋಡರನ್ನು ಉಪಪ್ರಧಾನ ಮತ್ತುಸರ್ವಜಿತ್ ಕೌರ್‌ರನ್ನು ಶಾಸಕಾಂಗ ಪಕ್ಷದ ಉಪನಾಯಕಿಯನ್ನಾಗಿ ಘೋಷಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ವಕ್ತಾರ ಮತ್ತು ಮುಖ್ಯ ವ್ಹಿಪ್ ಸುಖಪಾಲ್ ಸಿಂಗ್ ಖೇರಾ ಮತ್ತು ಪದಚ್ಯುತ ದುಗ್ದಿಯವರು ಕೇಜ್ರಿವಾಲ್‌ರ ಈ ನಿರ್ಧಾರವನ್ನು ವಿರೋಧಿಸಿದ್ದರು. ಸಭೆಯಲ್ಲಿ ಪಕ್ಷದ ಸೋಲಿಗೆ ಭಗ್ವಂತ್ ಸಿಂಗ್ ಮಾನ್‌ರೇ ಕಾರಣ ಎಂದು ದುಗ್ದಿ ಸ್ಪಷ್ಟಪಡಿಸಿದ್ದರು. ಮಾನ್ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿದ್ದರು. ಇನ್ನೊಂದೆಡೆ ಕೇಜ್ರಿವಾಲ್‌ರ ಈ ನಿರ್ಧಾರವನ್ನು ವಿರೋಧಿಸಿ ಈಗಾಗಲೇ ಸುಖಪಾಲ್ ಸಿಂಗ್ ಖೇರಾ ಚೀಫ್ ವ್ಹಿಪ್ ಮತ್ತು ವಕ್ತಾರರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಂಗಳವಾರ ಮಾನ್‌ರನ್ನು ಪಂಜಾಬ್ ಮುಖ್ಯಸ್ಥರನ್ನಾಗಿ ಮಾಡಿದ್ದನ್ನು ಪ್ರತಿಭಟಿಸಿ ಇತರ ನಾಯಕರು ದೊಡ್ಡ ಹೆಜ್ಜೆ ಇಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಮಂಗಳವಾರ ದುಗ್ದಿಯವರು ಕೆಲವು ಶಾಸಕರು ಮತ್ತು ನಾಯಕರನ್ನು ಚಂಡಿಗಡದಲ್ಲಿ ಭೇಟಿಯಾಗಿ, ತಮ್ಮ ಮುಂದಿನ ರಣನೀತಿಯನ್ನು ನಿರ್ಧರಿಸಿದ್ದಾರೆ. ತನ್ನ ಯೋಜನೆಯನ್ನು ಈಗ ಬಹಿರಂಗಪಡಿಸುವುದಿಲ್ಲ. ಒಂದೆರಡು ದಿನದಲ್ಲಿ ತಿಳಿಸುವೆ ಎಂದು ಗುರ್‌ಪ್ರೀತ್ ಸಿಂಗ್ ದುಗ್ದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News