ಸ್ಟಿಕರ್ ಅಂಟಿಸಿ ಹಣ ವಸೂಲಿಗಿಳಿದ ಪೊಲೀಸರು: ಆರೋಪ
ಬೆಂಗಳೂರು, ಮೇ 10: ನಗರದ ಪ್ರಮುಖ ಬೀದಿಯೊಂದರ ಚಿಲ್ಲರೆ ಅಂಗಡಿಗಳ ಬಾಗಿಲುಗಳಿಗೆ ಮುಗಿದು ಹೋಗಿರುವ ಕಾರ್ಯಕ್ರಮದ ಸ್ಟಿಕರ್(ಚೀಟಿ)ಗಳನ್ನು ಅಂಟಿಸಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಹಣ ಪೊಲೀಸರು ವಸೂಲಿ ಮಾಡಿರುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಬೆಂಗಳೂರಿನ ಹೃದಯ ಭಾಗವಾಗಿರುವ ಕಾರ್ಪೋರೇಷನ್ ವೃತ್ತದ ಕಬ್ಬನ್‌ಪೇಟೆಯ ಹಮೀದ್ ಶಾ ಆವರಣದ ಮುಖ್ಯರಸ್ತೆಯಲ್ಲಿರುವ ನೂರಕ್ಕೂ ಹೆಚ್ಚು ಅಂಗಡಿಗಳಿಗೆ ಮಂಗಳವಾರ ಮತ್ತು ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೈಕ್‌ನಲ್ಲಿ ಬಂದ ಬೀಟ್ ಪೊಲೀಸರಿಬ್ಬರು, ಪ್ರತಿ ಚಿಲ್ಲರೆ ಅಂಗಡಿಗೆ 12ರಿಂದ 20 ಸ್ಟಿಕರ್ ಗಳನ್ನು ಅಂಟಿಸಿ ಒಂದಕ್ಕೆ 30 ರೂಪಾಯಿಗಳಂತೆ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.
ಯಾವ ಸ್ಟಿಕರ್: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೂ ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಎಪ್ರಿಲ್ 2, 2017ರ ಸ್ಟಿಕರ್ ಅನ್ನು ಬಿಡುಗಡೆಗೊಳಿಸಿ ಇದಕ್ಕೆ 20 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಉಳಿದಿರುವ ನೂರಾರು ಸ್ಟಿಕರ್ ಗಳನ್ನು ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವ ಪೊಲೀಸರು, ಚಿಲ್ಲರೆ ಅಂಗಡಿ ಬಾಗಿಲಿಗೆ ಹಾಕಿ ಹಣ ಪಡೆಯುತ್ತಿದ್ದಾರೆ ಎಂದು ಚಿಲ್ಲರೆ ಅಂಗಡಿ ಮಾಲಕರೊಬ್ಬರು ಆರೋಪಿಸಿದ್ದಾರೆ.
ಬೀಡಾ ಅಂಗಡಿಯನ್ನೂ ಬಿಟ್ಟಿಲ್ಲ: ಮುಖ್ಯರಸ್ತೆಯಲ್ಲಿರುವ ಪಾನ್‌ಬೀಡಾ ಅಂಗಡಿಗೆ ಪ್ರತಿದಿನ 500 ರೂ.ಯಿಂದ 800 ರೂ. ವರೆಗೆ ವ್ಯಾಪಾರ ನಡೆಯುತ್ತದೆ. ಆದರೆ, ರಾತ್ರಿ ಬಂದ ಬೀಟ್ ಪೊಲೀಸರು 15 ಚೀಟಿಗಳನ್ನು ಅಂಟಿಸಿ ಒಂದಕ್ಕೆ 20 ರಂತೆ 300 ರೂ. ಹಣ ವಸೂಲಿ ಮಾಡಿ ಹೋದರು ಎಂದು ದೂರಲಾಗಿದೆ.
ಬೆದರಿಕೆ? ‘ಚೀಟಿ ಬೇಡ, ಇದರ ದಿನಾಂಕ ಮುಗಿದಿದೆ ಎಂದು ಚಿಲ್ಲರೆ ಅಂಗಡಿಯ ಮಾಲಕರಿಬ್ಬರು ವಿರೋಧಿಸಿದಕ್ಕೆ, ಪೊಲೀಸರಿಬ್ಬರು ನಿಮಗೆ ರಾತ್ರಿ 10 ಗಂಟೆ ನಂತರ ಅಂಗಡಿ ತೆರೆಯಲು ಬಿಡುವುದಿಲ್ಲ. ನಿಮ್ಮ ಮೇಲೆ ಮೊಕದ್ದಮೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ ಕಾರಣ, ನಾವು ಚೀಟಿಗಳನ್ನು ತೆಗೆದುಕೊಂಡೆವು ಎಂದು ಅಂಗಡಿ ಮಾಲಕರೊಬ್ಬರು ಬೇಸರ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.
ಕಬ್ಬನ್ ಪೇಟೆಯ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮಾಲಕರು ಹೆಚ್ಚಾಗಿ ಕೇರಳ ಸೇರಿ ಇನ್ನಿತರೆ ರಾಜ್ಯದ ನಿವಾಸಿಗಳಾಗಿದ್ದು, ಈ ಕಾರಣದಿಂದಾಗಿಯೇ ಪೊಲೀಸರು ಕನ್ನಡದಲ್ಲಿರುವ ಚೀಟಿಗಳನ್ನು ಅಂಟಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಯೊರ್ವರು ಆರೋಪಿಸಿದ್ದಾರೆ.