×
Ad

‘ಬಿಜೆಪಿ’ ಬೋಗಸ್ ಪಾರ್ಟಿ: ದಿನೇಶ್‌ಗುಂಡೂರಾವ್

Update: 2017-05-11 21:39 IST

ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರವು ಭದ್ರತೆ ಇಲ್ಲದ, ಭ್ರಮೆಯಲ್ಲಿರುವ, ಭ್ರಷ್ಟಾಚಾರದಲ್ಲಿ ಮುಳುಗಿರುವ ಸರಕಾರ ಎಂದು ಎಐಸಿಸಿ ವಕ್ತಾರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಘಟಕವು, ಸರಕಾರದ ವಿರುದ್ಧ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ಸುಳ್ಳು ಹಾಗೂ ಸತ್ಯಕ್ಕೆ ದೂರವಾದದ್ದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿರುವ ಯಾವ ಸಚಿವರ ವಿರುದ್ಧವು ಭ್ರಷ್ಟಾಚಾರದ ಆರೋಪಗಳಿಲ್ಲ. ಯಾರೊಬ್ಬರೂ ಕಳಂಕಿತರಾಗಿಲ್ಲ. ಆದರೂ, ಆಧಾರರಹಿತವಾಗಿ ಸರಕಾರದ ಸಚಿವರ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಅವರು ದೂರಿದರು.

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ಪರಿಹಾರ ಕೋರಿ ತ್ವರಿತವಾಗಿ ವರದಿ ನೀಡಿದ್ದೇವೆ. ಕೇಂದ್ರ ಸರಕಾರ ಬಿಡುಗಡೆ ಮಾಡಿದ ಸಂಪೂರ್ಣ ಅನುದಾನವನ್ನು ರೈತರಿಗೆ ವಿತರಣೆ ಮಾಡಿದ್ದೇವೆ. ಆದರೆ, ಹಿಂಗಾರು ಹಂಗಾಮಿನಲ್ಲಿ ಆಗಿರುವ ನಷ್ಟದ ಕುರಿತು ಈವರೆಗೆ ಕೇಂದ್ರದಿಂದ ಯಾವ ನೆರವು ಸಿಕ್ಕಿಲ್ಲ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ರಾಜ್ಯವು ಸತತವಾಗಿ ಬರಪೀಡಿತವಾಗಿದೆ. ಮಹಾರಾಷ್ಟ್ರಕ್ಕೆ 7,349 ಕೋಟಿ ರೂ.ಗಳ ನೆರವು ನೀಡುವ ಕೇಂದ್ರ ಸರಕಾರವು, ರಾಜ್ಯಕ್ಕೆ ಮಾತ್ರ ಅತೀ ಕಡಿಮೆ ಅನುದಾನವನ್ನು ನೀಡುವ ಮೂಲಕ ತಾರತಮ್ಯ ಮಾಡಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಸಿಗಬೇಕಾದಷ್ಟು ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಅವರು ದೂರಿದರು.

ರಾಜ್ಯ ಸರಕಾರವು ಪ್ರತಿ ವರ್ಷ ನೀರಾವರಿ ಯೋಜನೆಗಳಿಗಾಗಿ 10 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಪ್ರಕಟಿಸಿತ್ತು. ಅದರಂತೆ, ಕಳೆದ ನಾಲ್ಕು ವರ್ಷಗಳಲ್ಲಿ 45 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಬಿಜೆಪಿಯವರು ಎಲ್ಲವನ್ನೂ ತಿರುಚಿ ಹೇಳುವುದರಲ್ಲಿ ನಿಸ್ಸೀಮರು. ಮಹದಾಯಿ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೆ ರಾಜ್ಯಕ್ಕೆ ಮೋಸ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನಲ್ಲೆ ಗೊಂದಲಗಳಿವೆ. ಅದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಭಾವಚಿತ್ರವನ್ನು ಹಾಕಲಾಗಿದೆ. ಆದರೆ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭಾವಚಿತ್ರ ಕಣ್ಮರೆಯಾಗಿದೆ. ಇದು ಬಿಜೆಪಿಯಲ್ಲಿನ ಗೊಂದಲವನ್ನು ಪ್ರದರ್ಶಿಸುತ್ತದೆ ಎಂದು ಅವರು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗಿರುವ ಕರಪತ್ರಗಳನ್ನು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಇರಿಸಿದ್ದ ವಿಚಾರಕ್ಕೂ ಪಕ್ಷಕ್ಕೂ ಯಾವುದೆ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಸ್ಪಷ್ಟಣೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News