ಅಜಂತಾ - ಈ ಚಿತ್ರಪಟಗಳಿನ್ನೂ ಹಾಡುತ್ತಿವೆ...

Update: 2017-05-14 06:25 GMT

ಯಾರೂ ನೋಡದ ಮಧ್ಯಭಾರತದ ಮೂಲೆಯಲ್ಲಿ ಇಂಥ ಅಪೂರ್ವ ಚಿತ್ರ-ಶಿಲ್ಪಗಳು ಸಾವಿರಾರು ವರ್ಷಗಳ ಕೆಳಗೆ ಏಕೆ ರೂಪುಗೊಂಡವೆಂದು ಈಗ ಆ ಜಾಗದಲ್ಲಿ ನಿಂತವರಿಗೆ ಅನಿಸಿಬಿಡುತ್ತದೆ. ಆದರೆ ಅದು ಮೂಲೆಯಲ್ಲ, ಅತ್ಯಂತ ಆಯಕಟ್ಟಿನ ಜಾಗವಾಗಿತ್ತು ಎನ್ನುವುದು ಮೊದಲ ಸಹಸ್ರ ಮಾನದ ಚರಿತ್ರೆ ಬಲ್ಲವರಿಗೆ ತಿಳಿದಿರುತ್ತದೆ.

ಕಿಚಕಿಚ ಎನ್ನುತ್ತ ಸರಸರ ಹತ್ತಿಳಿವ ಅಳಿಲುಗಳು, ಅಸಂಖ್ಯ ಕರಿ ಪಿಕಳಾರ ಹಕ್ಕಿಗಳು, ಸಂಗಾತಿಯ ಬೆನ್ನಿನ ಹೇನು ಹೆಕ್ಕುವುದರಲ್ಲಿ ಮಗ್ನವಾಗಿ ದೇಶಕಾಲ ಮರೆತ ಕಪಿ ದಂಪತಿಗಳು, ಹರಿವ ಪಾತ್ರ ಕಾಣುವಂತೆ, ಸವೆದ ಕಲ್ಲು ಬಂಡೆ ಕಾಣುವಂತೆ ಡಿಸೆಂಬರಿಗೇ ಒಣಗಿದ ವಾಘೋರಾ ನದಿಯ ತಿರುವು, ಮಧ್ಯ ಭಾರತದ ಸಹ್ಯಾದ್ರಿ ಬೆಟ್ಟಸಾಲುಗಳ ಗುಹೆಗಳಲ್ಲಿ ಎಂದೋ ಸಹಸ್ರಮಾನಗಳ ಹಿಂದೆ ವಿಸ್ಮಯಗೊಳಿಸುವಷ್ಟು ಕೌಶಲದಿಂದ ರೂಪಿಸಿದ ಚಿತ್ರ-ಶಿಲ್ಪಗಳು, ಪದಭಾವಭಂಗಿಗಳಲಿ ಆಡುತ್ತಿರು ವಂತೆ ಹಾಡುತ್ತಿರುವಂತೆ ಕಾಣುವ ಚಿತ್ರಗಳಿರುವ, ತನ್ನ ಕಾಲ ದೊಳಗೆ ನಮ್ಮನ್ನು ಲೀನಗೊಳಿಸಲು ಶಕ್ತವಾಗಿರುವ ಕತ್ತಲು ಬೆಳಕಿನ ಗುಹೆಗಳು...

ಇದು ಅಜಂತಾ. ಭಾರತದ, ಅಷ್ಟೇ ಏಕೆ ವಿಶ್ವದ ಅತೀ ಹಳೆಯ ಬೌದ್ಧಗುಹೆಗಳಿರುವ ತಾಣ ಅದು.
ಅಲ್ಲಿದ್ದ ಮೂವತ್ತೊಂದು ಗುಹೆಗಳು ಜಗದ ಮರೆವಿಗೆ ಸಂದಿದ್ದವು. ಒಂದೂವರೆ ಸಾವಿರ ವರ್ಷ ಯಾರು ನೋಡಿದರೂ ನೋಡದಿದ್ದರೂ; ಮೆಚ್ಚಿದರೂ ಬೆಚ್ಚಿದರೂ ಅವು ಅಲ್ಲೇ ಇದ್ದವು. ಯಾರು ಅನುಯಾಯಿಗಳಿದ್ದರೋ ಇಲ್ಲವೋ ಶಿಲ್ಪಗಳ ಮುಖದ ಮಂದಸ್ಮಿತ ಮಾಸದೇ ಉಳಿದಿತ್ತು. ಹೊರಗಿನವರು ಅಲ್ಲಿ ಕಾಲಿಡದಂತೆ ತಡೆದ ಭಿಲ್ಲ ಸಮುದಾಯ, ಸ್ವೇಚ್ಛೆಯಾಗಿ ತಿರುಗಿಕೊಂಡಿದ್ದ ಹುಲಿಗಳು, ಸೊಕ್ಕಿ ಬೆಳೆದ ಕಾಡುಗಿಡಮರಬಳ್ಳಿ ಆ ಗುಹೆಗಳನ್ನು ರಕ್ಷಿಸಿದ್ದವು.


ಸಮಸ್ತ ಜೀವರಾಶಿಯನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಳ್ಳುವಷ್ಟು ಪ್ರೇಮವನ್ನು ಕಣಕಣದಲ್ಲೂ ತುಂಬಿಕೊಂಡ ಭೂಮಿ ಮೇಲಿನ ಶ್ರೇಷ್ಠ ಮನುಷ್ಯ ಬುದ್ಧ ಅಲ್ಲಿ ಚಿತ್ರವಾಗಿದ್ದ, ಶಿಲ್ಪವಾಗಿದ್ದ. ತನ್ನ ಪೂಜಿಸಲು, ಮೂರ್ತಿಯಾಗಿಸಲು, ಗುರುವಾ ಗಿಸಲು, ದೇವರಾಗಿಸಲು, ದೇವಸುತನನ್ನಾಗಿಸಲು, ದೈವ ಸಂದೇಶ ವಾಹಕನನ್ನಾಗಿಸಲು ಕೊನೆತನಕ ಒಪ್ಪದ ಸ್ವಯಂ ನಿರಾಕರಣೆಯ ಮನುಷ್ಯ ಅಲ್ಲಿನ ಚಿತ್ರಗಳ ಜೀವವಾಗಿದ್ದ. ಕಗ್ಗತ್ತಲ ಗುಹೆಗಳ ಆಳದಲ್ಲಿ, 'ನಿನ್ನ ಬೆಳಕು ನೀನೇ, ನಿನಗೆ ನೀನೇ ಬೆಳಕು' ಎಂಬ ಅರಿವಿನ ಬೆಳಕು ಬೀರುತ್ತ ತನ್ನಷ್ಟಕ್ಕೆ ತಾನಿದ್ದ.

ಬೌದ್ಧಗ್ರಂಥಗಳು ರಚನೆಯಾಗುವ ಪೂರ್ವದಲ್ಲೇ ಈ ಗುಹೆಗಳು ರೂಪುಗೊಳ್ಳಲು ಶುರುವಾಗಿದ್ದವು. ಅನುಯಾಯಿ ಗಳು ಒಂದೆಡೆ ಸೇರಿ ಧಾರ್ಮಿಕ ಆಚರಣೆ ಕೈಗೊಳ್ಳಲು ರಚಿಸ ಲಾದ ಏಶ್ಯಾದ ಮೊದಲ ರಚನೆಗಳು ಅವು. ಅಜಂತಾ ಗುಹೆಗಳು ರೂಪುಗೊಳ್ಳುವ ಹೊತ್ತಿಗೆ ಭಿಕ್ಷುಗಳು ಸಂಪೂರ್ಣ ಅಲೆಮಾರಿತನ ತೊರೆದು ಸಾಂಸ್ಥಿಕಗೊಳಲು, ಸ್ಥಾವರಗೊಳಲು ಶುರು ಮಾಡಿದರು. ಇದು ಕ್ರಮೇಣ ಬೌದ್ಧ ಧರ್ಮಾಚರಣೆಯ ಪಲ್ಲಟಗಳಿಗೂ ಕಾರಣವಾಯಿತು.

ಯಾರೂ ನೋಡದ ಮಧ್ಯಭಾರತದ ಮೂಲೆಯಲ್ಲಿ ಇಂಥ ಅಪೂರ್ವ ಚಿತ್ರ-ಶಿಲ್ಪಗಳು ಸಾವಿರಾರು ವರ್ಷಗಳ ಕೆಳಗೆ ಏಕೆ ರೂಪುಗೊಂಡವೆಂದು ಈಗ ಆ ಜಾಗದಲ್ಲಿ ನಿಂತವರಿಗೆ ಅನಿಸಿಬಿಡುತ್ತದೆ. ಆದರೆ ಅದು ಮೂಲೆಯಲ್ಲ, ಅತ್ಯಂತ ಆಯಕಟ್ಟಿನ ಜಾಗವಾಗಿತ್ತು ಎನ್ನುವುದು ಮೊದಲ ಸಹಸ್ರ ಮಾನದ ಚರಿತ್ರೆ ಬಲ್ಲವರಿಗೆ ತಿಳಿದಿರುತ್ತದೆ. ಮೊದಲ ಸಹಸ್ರ ಮಾನದ ಆದಿಭಾಗ ಅಂತಾರಾಷ್ಟ್ರೀಯ ವ್ಯಾಪಾರ- ವ್ಯವಹಾರದ ಉಚ್ಛ್ರಾಯ ಕಾಲ. ಆಗ ಕಾಂಬೋಜ (ಆಫ್ಘಾನಿಸ್ತಾನ)- ದ್ವಾರಾವತಿ(ಗುಜರಾತ್) ನಡುವೆ ಬಿರುಸಿನ ವಹಿವಾಟು ನಡೆಯುತ್ತಿತ್ತು. ಎಬೊನಿ, ತೇಗ, ಗಂಧ, ದಂತ, ದಾಲ್ಚಿನ್ನಿ, ಕರಿಮೆಣಸು, ರೇಶಿಮೆ ಹೊತ್ತು ಕ್ಯಾರವಾನುಗಳು ಈ ಗುಹೆ ಗಳಿರುವ ದಾರಿಯಲ್ಲೇ ಕರಾವಳಿಯತ್ತ ಸಾಗುತ್ತಿದ್ದವು. ಜ್ಯೂ ಮತ್ತು ಗ್ರೀಕ್ ದಲ್ಲಾಳಿಗಳು ಇಲ್ಲೆಲ್ಲ ತಿರುಗಿ ವಸ್ತುಗಳನ್ನು ಪಡೆಯುತ್ತ, ಕಾಂಬೋಜ, ಕೆಂಪು ಸಮುದ್ರ, ರೋಮಿನತ್ತ ಅವನ್ನು ಕೊಂಡೊಯ್ಯುತ್ತಿದ್ದರು.
ಕಾಲ ಮಹಿಮೆ. ಅಷ್ಟು ಪ್ರಸಿದ್ಧವಾದದ್ದು, ಕೇಂದ್ರವಾದದ್ದು ಕೊನೆಗೆ ಅಂಚಿಗೆ ಸರಿದಿತ್ತು. ಮತ್ತವು ಬೆಳಕಿಗೆ ಬಂದದ್ದು ಆಧುನಿಕ ಆಕಸ್ಮಿಕಗಳಲ್ಲೊಂದು ಎಂದೇ ಹೇಳಬೇಕು.

1819ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಜಾನ್ ಸ್ಮಿತ್ ಹುಲಿ ಬೇಟೆಗೆ ಹೊರಟ. ಔರಂಗಾಬಾದಿನ ಆಸುಪಾಸು ಹುಲಿಗಳ ಜಾಡನರಸುತ್ತ ವಾಘೋರಾ ನದಿ ತಿರುವಿನ ಕಣಿವೆ ಹೊಕ್ಕ. ದೂರದ ಬೆಟ್ಟಗಳ ಪಾರ್ಶ್ವದಲ್ಲಿ ತೂತುಕಂಡಿಗಳ ಕಂಡಂತಾಯಿತು. ಕುರಿಗಾಹಿ ಹುಡುಗನೊಬ್ಬನೊಡನೆ ಸಮೀಪದವರೆಗೂ ಹೋಗಿ ನೋಡಿದ. ಅವು ಅತೀ ಪುರಾತನ ವಾದ ಮಾನವನಿರ್ಮಿತ ಗುಹೆಗಳ ಬಾಯಿ ಎಂದು ಸ್ಪಷ್ಟವಾ ಯಿತು. ಹತ್ತಿರದ ಅಜಿಂತಾ ಹಳ್ಳಿಯವರನ್ನು ತಮಟೆ, ಕೊಡಲಿ, ಡೋಲು, ದೊಂದಿಗಳೊಡನೆ ಕರೆದೊಯ್ದು ಹುಲ್ಲಿಗೆ ಬೆಂಕಿ ಹಚ್ಚಿ ಉರಿಸಿ ಒಳಗೆಲ್ಲ ನೋಡಿದ. ಅವನು ಪ್ರವೇಶಿಸಿದ ಮೊದಲ ಗುಹೆ (ಇವತ್ತು ಅದಕ್ಕೆ '10ನೆ ನಂ. ಗುಹೆ' ಎಂದು ಹೆಸರಿಡಲಾಗಿದೆ) ಕಸಕಡ್ಡಿ ಮುಳ್ಳುಕಂಟಿಯಿಂದ ತುಂಬಿ ಹೋಗಿತ್ತು. ಗುಹೆಯ ನೆಲದಿಂದ ಐದಡಿ ಎತ್ತರ ಕಸರಾಶಿ ಬಿದ್ದಿತ್ತು. ಅದರ ಮೇಲೆ ನಿಂತು ಒಂದು ಬೋಧಿಸತ್ವನ ಚಿತ್ರದ ಮೇಲೆ ತನ್ನ ಹೆಸರು, ಅವತ್ತಿನ ದಿನಾಂಕ ಕೆತ್ತಿ ಬಂದ. ಅಲ್ಲಿಂದಾಚೆ ಅಜಿಂತಾ ಹಳ್ಳಿ ಬಳಿಯಿದ್ದ 'ಅಜಂತಾ ಗುಹೆ ಗಳು' ವಿಶ್ವದ ಗಮನ ಸೆಳೆದವು.

ಅಲೆಮಾರಿಗಳ ನೆಲೆ ಅಜಂತಾ

'ನೀನೇ ಮಾರ್ಗವಾಗದೆ ನೀನು ಆ ಮಾರ್ಗದಲ್ಲಿ ಕ್ರಮಿಸಲಾರೆ' ಎಂದ ಬುದ್ಧ ಅಲೆಮಾರಿ ಚಿಂತಕನಾಗಿದ್ದ. ಬದುಕಿಡೀ ಅಲೆಮಾರಿಯಾಗೇ ಬಾಳಿದ. ಆದರೆ ಮಳೆಗಾಲದಲ್ಲಿ ಎತ್ತರದ ಸ್ಥಳದಲ್ಲಿ, ಹುಲ್ಲುಸೂರಿನ ತಾವುಗಳಲ್ಲಿ ನೆಲೆಗೊಳಲು ಭಿಕ್ಕುಗಳಿಗೆ ಅವಕಾಶ ನೀಡಿದ್ದ. ಪರ್ವತ ಪ್ರದೇಶಗಳಲ್ಲಿ ವಾಸಿಸುವ, ಅರಣ್ಯವಾಸಿ ಭಿಕ್ಕುಗಳು ಗುಹೆಗಳಲ್ಲಿ ಇರಬಹುದೆಂದೂ ಸೂಚಿಸಿದ್ದ. ಏಕಾಂತ ಎಲ್ಲರೂ ಅನುಭವಿಸಲೇಬೇಕಾದ ಸ್ಥಿತಿಯಾಗಿತ್ತು. ಅಂತಹ ನೆಲೆಗಳಲ್ಲೇ ಮೊದಲ ಬೌದ್ಧಮಠಗಳು ರೂಪುಗೊಂಡವು.

ಭಿಕ್ಕುಗಳು ಮಳೆಗಾಲದಲ್ಲಿ, ಏಕಾಂತವಾಸದಲ್ಲಿ ವಾಸಿಸುವ ತಾಣವಾಗಿದ್ದ ಅಜಂತಾ ಬೌದ್ಧ ಮಠವಾಗಿತ್ತು. ಅಲ್ಲಿ ಒಟ್ಟು 30 ಗುಹೆಗಳಿದ್ದು ಗೋಡೆ, ಕಂಬಗಳ ಮೇಲಿರುವ ಪಾಲಿ, ಸಂಸ್ಕೃತದ ಬರಹ-ಶಾಸನಗಳು ಅವುಗಳ ಕಾಲ, ಉದ್ದೇಶ ಎರಡನ್ನೂ ತಿಳಿಸುತ್ತವೆ. ಅವು ಎರಡು ಕಾಲಮಾನಗಳಲ್ಲಿ ಕೆತ್ತಲ್ಪಟ್ಟಿವೆ. ಬುದ್ಧ ಮರಣಿಸಿದ 200 ವರ್ಷಗಳ ನಂತರ ಅಂದರೆ ಕ್ರಿ.ಪೂ. 2ನೆ ಶತಮಾನದಿಂದ ಕ್ರಿಶ 1ನೆ ಶತಮಾನದ ನಡುವಿನ ಅವಧಿಯಲ್ಲಿ ಮೊದಲ ಐದು ಗುಹೆಗಳು ರೂಪುಗೊಂಡರೆ, ಉಳಿದವು ಕ್ರಿ.ಶ. 5ನೆ ಶತಮಾನದಲ್ಲಿ ರೂಪುಗೊಂಡಿವೆ. ಪ್ರತೀ ಗುಹೆಯಲ್ಲೂ ಚಿತ್ರಗಳು, ಶಿಲ್ಪಗಳು ಸಮೃದ್ಧವಾಗಿವೆ. ಅವನ್ನೆಲ್ಲ ಕೇವಲ ಇಪ್ಪತ್ತು ವರ್ಷಗಳಲ್ಲಿ ರೂಪಿಸಲಾಗಿದೆ.

ಅಶೋಕನ ಕಾಲಾನಂತರ, ವೌರ್ಯ ಸಾಮ್ರಾಜ್ಯ ಪತನಾನಂತರ ಶಾತವಾಹನರ ಕಾಲದಲ್ಲಿ ಅಜಂತಾದ ಮೊದಲ ಐದು ಗುಹೆಗಳು (ಸಂಖ್ಯೆ 9, 10, 12, 13, 15ಎ) ರಚನೆಯಾದವು. ಅವು ಹೀನಾಯಾನ ಪಂಥದವು. ಅದರಲ್ಲಿ 9 ಮತ್ತು 10ನೆ ಸಂಖ್ಯೆಯ ಗುಹೆಗಳು ಪ್ಯಾರಾಬೋಲಾ (ಕೆಥೆಡ್ರಲ್) ಆಕಾರದ ಹೀನಾಯಾನ ಪೂಜಾ ಸ್ಥಳಗಳು (ಚೈತ್ಯಗೃಹ). ಪೂಜಾರ್ಹವಾಗಿ ಬುದ್ಧನ ಮೂರ್ತಿಯ ಬದಲು ಬೃಹತ್ ಸ್ತೂಪ ಆಕೃತಿಗಳಿವೆ. ಆಲಂಕಾರಿಕ ಕೆತ್ತನೆ, ಕಮಾನು, ಪ್ರವೇಶ ದ್ವಾರ ಹೊಂದಿವೆ. ಉಳಿದ ಮೂರು ಗುಹೆಗಳು ಬೌದ್ಧ ಸನ್ಯಾಸಿಗಳು ತಂಗುವ, ಪ್ರಾರ್ಥಿಸುವ ವಿಹಾರಗಳಾಗಿದ್ದು ಹಜಾರಗಳಲ್ಲಿ ಬುದ್ಧ, ದೇವಾನುದೇವತೆಗಳು, ಯಕ್ಷಯಕ್ಷಿಯರು, ನಾಗರ ಮೂರ್ತಿಗಳಿವೆ. ಹಜಾರದ ಆಚೀಚೆ ಭಿಕ್ಕುಗಳು ತಂಗುತ್ತಿದ್ದ ಕೋಣೆಗಳಿವೆ. ಕೆಲವು ಗುಹೆಗಳು ಒಂದಕ್ಕಿಂತ ಹೆಚ್ಚು ಮಹಡಿಯವಾಗಿವೆ.

ಎರಡನೆಯ ಕಾಲಮಾನದ ಗುಹೆಗಳು ಮಹಾಯಾನ ಬೌದ್ಧ ಗುಹೆಗಳು. ಹ್ಯೂಯೆನ್ ತ್ಸಾಂಗ್ ಭೇಟಿಯಿತ್ತಾಗ ಗಮನಿಸಿರುವಂತೆ, ಬೌದ್ಧ ತಜ್ಞರು ಒಪ್ಪುವಂತೆ ಮಹಾಯಾನವು ದಕ್ಷಿಣ ಭಾರತದಲ್ಲಿ, ಅದರಲ್ಲೂ ನಾಗಾರ್ಜುನ, ಧಿಗ್‌ನಾಗ, ಚಂದ್ರಕೀರ್ತಿ, ಆರ್ಯದೇವ, ಭವವಿವೇಕ ಮೊದಲಾದವರು ಇದ್ದ ಆಂಧ್ರದಲ್ಲಿ ರೂಪುಗೊಂಡಿತು. ಅವರೆಲ್ಲ ಬೌದ್ಧ ಸಮಾಜದಲ್ಲಿ ಬದುಕುತ್ತಲೇ ತಮ್ಮ ಅನುಭವಗಳ ಹರಳುಗಟ್ಟಿಸಿಕೊಂಡು ಮಹಾಯಾನವೆಂಬ ಹೊಸಪಂಥ ಶುರುಮಾಡಿದರು. ಈ ಗುಹೆಗಳು ಆ ಪ್ರದೇಶವನ್ನು ಆಳುತ್ತಿದ್ದ ಹಿಂದೂ ದೊರೆ ವಾಕಟಕ ವಂಶದ ಹರಿಸೇನ (ಕ್ರಿ.ಶ. 475-500)ನ ಕಾಲದಲ್ಲಿ ರೂಪುಗೊಂಡವು. ಅದರಲ್ಲಿ ಕೆಲವು ಚೈತ್ಯಗೃಹಗಳು, ಉಳಿದವು ವಿಹಾರಗಳು. ಮಹಾಯಾನ ಚೈತ್ಯಗಳ ಒಳಗೆ ಕುಳಿತ, ನಿಂತ, ವಿವಿಧ ಮುದ್ರೆಗಳ ಬುದ್ಧ ಮೂರ್ತಿಗಳಿವೆ.

ಹರಿಸೇನನ ಸಾವಿನೊಂದಿಗೆ ಗುಹಾನಿರ್ಮಾಣ ಸ್ಥಗಿತಗೊಂಡರೂ ಅವನ ನಂತರ ಬಂದ ಅಸ್ಮಾಕರು ಕೆಲಕಾಲ ಕೆಲಸ ಮುಂದುವರಿಸಿದರು. ಆದರೆ ಆರೇಳನೆ ಶತಮಾನದ ವೇಳೆಗೆ ಬೌದ್ಧಧರ್ಮದ ಹಾಗೂ ಗುಹೆಗಳ ಜನಪ್ರಿಯತೆ, ಜನಬಳಕೆ ಕುಸಿಯತೊಡಗಿತು. ಆದರೂ ಸ್ಥಳೀಯರಿಗೆ ಈ ಗುಹೆಗಳ ಬಗೆಗೆ ತಿಳಿದಿತ್ತು. 4ನೆ ಶತಮಾನದಲ್ಲಿ ಭಾರತಕ್ಕೆ ಬಂದ ಫಾಹೀನ್, 7ನೆ ಶತಮಾನದಲ್ಲಿ ಬಂದ ಹ್ಯೂಯೆನ್ ತ್ಸಾಂಗ್, 17ನೆ ಶತಮಾನದಲ್ಲಿ ಐನ್-ಎ-ಅಕ್ಬರಿ ಬರೆದ 'ಅಬೂ ಪಝಲ್'ನಲ್ಲಿ ಈ ಗುಹಾದೇವಾಲಯಗಳ ಕುರಿತು ಉಲ್ಲೇಖಿಸಲಾಗಿದೆ. ಅದು ಅಲೆಮಾರಿ ಭಿಕ್ಕುಗಳ ತಂಗುದಾಣವಾಗಿತ್ತೆಂದು ಹೇಳಿದ್ದಾರೆ.

ಗುಹಾ ಕಾರಣ - 'ಸೂರ್ಯಚಂದ್ರರಿರುವವರೆಗೆ...'

ಕುದುರೆ ಲಾಳಾಕಾರದ ನದೀ ತಿರುವಿನ ಬೆಟ್ಟದ ಬಂಡೆಗಳಲ್ಲಿ ಕೊರೆದ ತೂತುಗಳಂತೆ ಗುಹೆಗಳು ಕಾಣುತ್ತವೆ. ಒಳಹೊಕ್ಕರೆ ಪುರಾತನ ಕಾಲದಲ್ಲಿ ಸಂಚರಿಸಿ ಬಂದ ಅನುಭವ ವಾಗುತ್ತದೆ. ಅಲ್ಲಿ ನೋಡಿದ್ದನ್ನು ಅರಗಿಸಿಕೊಳ್ಳಲು, ಒಳಗಿಳಿಸಿಕೊಳ್ಳಲು ಸಮಯ ಬೇಕು. ಏಕೆಂದರೆ ಅಜಂತಾದ ಪ್ರತೀ ಗುಹೆಯೂ ಭಿನ್ನವಾಗಿದೆ, ಸಮೃದ್ಧವಾಗಿದೆ. ಕಮಾನು, ಕಂಭ, ಮೂರ್ತಿ, ಕಿಟಕಿ, ಶಿಲ್ಪಗಳನ್ನೆಲ್ಲ ಬಂಡೆಗಲ್ಲನ್ನು ಬೆಣ್ಣೆಯೇನೋ ಎನ್ನುವಂತೆ ಸಲೀಸಾಗಿ ಎಬ್ಬಿಸಿ ಕೊರೆದು ರೂಪಿಸಿದಂತೆ ಕಾಣುತ್ತವೆ. ಕಲ್ಲುಕುಟಿಗರ ರಚನಾ ಕೌಶಲ್ಯ ಗುಹೆಗಳ ಆಕಾರ, ರಚನೆಯಲ್ಲಿ ಎದ್ದು ಕಾಣುತ್ತದೆ. ಗುಹೆಗಳ ಗೋಡೆ ಸೂರು ಸ್ತಂಭಗಳ ಮೇಲೆಲ್ಲ ವರ್ಣಚಿತ್ರಗಳಿವೆ. ಚಿತ್ರಗಳಲ್ಲಿ ಮೈದಳೆದ ಜನರ ಮುಖಚಹರೆ, ಸಮೃದ್ಧ ಆಭರಣ, ಕೇಶ-ವಸ್ತ್ರವಿನ್ಯಾಸ, ವಾದ್ಯ, ಚಟುವಟಿಕೆಗಳು ಆ ಕಾಲದ ಜನಜೀವನವನ್ನು ನೈಜವಾಗಿ ಕಣ್ಣೆದುರು ತಂದು ನಿಲಿಸುತ್ತ ಆ ಕಾಲಮಾನದ ಅಮೂಲ್ಯ ಮಾಹಿತಿಗಳನ್ನೊದಗಿಸುತ್ತವೆ.

ಅಜಂತಾ ಗುಹೆಗಳ ಗೋಡೆ-ಸ್ತಂಭಗಳ ಮೇಲಿರುವ ಬರಹ-ಶಾಸನಗಳು ಹೇಳುವಂತೆ ಬಹಳಷ್ಟು ದಾನಿಗಳು ಸಿರಿವಂತ ಭಿಕ್ಕುಗಳು ಮತ್ತವರ ರಕ್ತಸಂಬಂಧಿಗಳೇ ಆಗಿದ್ದರು. 10ನೆ ಗುಹೆಗೆ ಧರ್ಮದೇವ, ಬುದ್ಧಿನಾಗ, ಸಿಖಾಭದ್ರ ಇತ್ಯಾದಿ ಸಣ್ಣ ಮೊತ್ತದ ದಾನ ನೀಡಿದ ಹಲವು ಭಿಕ್ಕುಗಳಿದ್ದಾರೆ. ಆ ಕಾಲದ ಭಿಕ್ಕುಗಳು ಭಿಕ್ಷಾಪಾತ್ರೆ ಹಿಡಿದು ಬೇಡುವ ಸರ್ವಸಂಗ ಪರಿತ್ಯಾಗಿಗಳಷ್ಟೇ ಆಗಿರದೆ ವಣಿಕರು, ವ್ಯಾಪಾರಿಗಳು, ಟಂಕಸಾಲೆ ನಡೆಸುವವರೂ ಇದ್ದರು. ಅವರು ಸಂಸಾರಿಗಳಂತೆ ಬದುಕಿದರು. ಸಾಲ ಕೊಡುತ್ತಿದ್ದರು. ಉತ್ತರಾಧಿಕಾರ, ಆಸ್ತಿವ್ಯಾಜ್ಯ, ಔಷಧಿ, ಕಾಮಕಲೆಗಳ ಕುರಿತು ಬರೆದರು, ಬರೆಸಿದರು. ಜನರೊಡನೆ ಜನಮಿತ್ರರಾಗಿ ಬದುಕಿದರು.

ಪ್ರತೀ ಗುಹೆಗೂ ಒಬ್ಬ ದೊಡ್ಡ ದಾನಿಯಿದ್ದ. ಮಧ್ಯಮವರ್ಗದ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಮೊದಲ ಕಾಲದ ಗುಹೆಗಳ ದಾನಿಗಳಾಗಿದ್ದರು. ಕೆಲ ಗುಹೆಗಳು ಯವನ(ಗ್ರೀಕ್)ರಿಂದ ದಾನ ಪಡೆದು ರೂಪುಗೊಂಡವು. ಹೀಗೆಂದೇ ಅಜಂತಾ ಗುಹಾಚಿತ್ರಗಳಲ್ಲಿ ವಿವಿಧ ಸಂಸ್ಕೃತಿಯ ಜನ ಕಾಣುತ್ತಾರೆ. ಚರ್ಮದ ಬಣ್ಣ, ಒಡವೆ, ಕೇಶಶೈಲಿ, ಮುಖಚಹರೆಗಳಲ್ಲಿ ವಿಭಿನ್ನ ಜನಾಂಗಗಳನ್ನು ಗುರುತಿಸಬಹುದು. ಚಿತ್ರಗಳಲ್ಲಿ ಬಳಸಿದ ನೀಲಿ ಬಣ್ಣವೂ ಸ್ಥಳೀಯವಾದದ್ದಲ್ಲ. ಅದು ಪರ್ಷಿಯ, ಅಫ್ಘಾನಿಸ್ತಾನಗಳಲ್ಲಿ ಸಿಗುವ ಗಾಢ ನೀಲಿ ಬೆಣಚುಕಲ್ಲಿನ ಪುಡಿ ಲೇಪಿಸ್ ಲಜುಲಿಯಿಂದ ಮಾಡಿದ ಬಣ್ಣ. ಇವೆಲ್ಲ ಆ ಪ್ರದೇಶಕ್ಕಿದ್ದ ವಿದೇಶಿ ಸಂಪರ್ಕವನ್ನು ದೃಢಪಡಿಸುತ್ತವೆ.

ಒಂದನೆ ಗುಹೆಗೆ ರಾಜನೇ ದಾನಿ. ಅದು ರಾಜವೈಭವದ್ದಾಗಿದೆ. ಚಿತ್ರಗಳಲ್ಲಿ ಮೂಡಿರುವ ಜಾತಕ ಕತೆಗಳು ಬುದ್ಧನು ರಾಜನಾಗಿ ಆಳಿದವುಗಳೇ ಆಗಿವೆ. ಆ ಗುಹೆಯಲ್ಲಿ ಆಳೆತ್ತರದ ಪದ್ಮಪಾಣಿ, ವಜ್ರಪಾಣಿ ಅವರ ಚಿತ್ರಗಳಿವೆ. ಗುಹೆಯ ಸೂರು, ಆಚೀಚಿನ ಗೋಡೆಗಳು ವರ್ಣಚಿತ್ರಗಳಿಂದ ತುಂಬಿವೆ.

ಎರಡನೆಯ ಗುಹೆ ಮಹಿಳೆಯೊಬ್ಬಳ ದತ್ತಿಯಿಂದ, ಅದರಲ್ಲೂ ಹರಿಸೇನನಿಗೆ ಹತ್ತಿರವಿದ್ದ ಮಹಿಳೆಯಿಂದ ತಯಾರಾಗಿರಬೇಕೆಂದು ಊಹಿಸಲಾಗಿದೆ. ಅದು ಹೆಚ್ಚು ಹೆಣ್ಣು ಚಿತ್ರಗಳಿಂದ, ಸ್ಥಿತಿವಂತ ಜನರ ಚಿತ್ರಗಳಿಂದ ತುಂಬಿದೆ. ಜಾತಕ ಕತೆಗಳೂ ಹೆಣ್ಣು ಮಕ್ಕಳವೇ ಆಗಿವೆ. ಸಂತಾನ ದೇವತೆ ಹರೀತಿಯ ಶಿಲ್ಪವಿದೆ. ಮಕ್ಕಳು ಶಾಲೆಯಲ್ಲಿ ಕೂತಿರುವ ಒಂದು ಚಿತ್ರವಿದ್ದು ಮುಂದಿರುವವರು ಪಾಠ ಕೇಳುತ್ತಿದ್ದರೆ ಹಿಂದಿರುವವರು ಕೀಟಲೆ, ಚೇಷ್ಟೆ ಮಾಡುತ್ತಿದ್ದಾರೆ. ನೆಲಹಾಸು ಬಿಟ್ಟರೆ ಇಡೀ ಆವರಣ ಚಿತ್ರಗಳಿಂದ ತುಂಬಿದೆ.

ಉಳಿದಂತೆ ಚೈತ್ಯಗೃಹಗಳೂ, ಬುದ್ಧ ಮುದ್ರೆಗಳೂ, ಸಾಲುಸಾಲು ಬೃಹತ್ ಬುದ್ಧ ಶಿಲ್ಪಗಳೂ ಗುಹೆಯೊಳಹೊಕ್ಕವರ ಕಣ್ಣು ಮನಸು ತುಂಬಿಕೊಳ್ಳುತ್ತವೆ. ಎಲ್ಲಕ್ಕಿಂತ ಮನಸೂರೆಗೊಳ್ಳುವುದು ಕೊನೆಯ ಗುಹೆಯ ಮಲಗಿದ ಬುದ್ಧ. 24 ಅಡಿ ಉದ್ದದ ಮಹಾಪರಿನಿರ್ವಾಣ ಸ್ಥಿತಿಯ ಬುದ್ಧಶಿಲ್ಪ ಗುಹೆಯ ಎಡಭಾಗದ ಇಡೀ ಗೋಡೆಯನ್ನಾವರಿಸಿದೆ. ಇಷ್ಟು ತಣ್ಣಗೆ ಸಾವನ್ನು ಎದುರುಗೊಳ್ಳಬಹುದೆ ಎಂದು ಅಚ್ಚರಿಪಡುವಂತೆ ಬುದ್ಧ ಚಹರೆಯಿದೆ. ತನ್ನ ಕೊನೆಗಾಲವನ್ನು ಮಂದಸ್ಮಿತದೊಡನೆ ಎದುರುಗೊಳ್ಳುವ ಬುದ್ಧ ಶಾಂತ, ನಿರುದ್ವಿಗ್ನ, ಸಮಚಿತ್ತದ ಮುಖಭಾವ ಹೊಂದಿದ್ದಾನೆ. ಶಿಲ್ಪದ ಕೆಳಭಾಗದಲ್ಲಿ ಶೋಕಿಸುವ ಭೂಮಿಯ ಜನರಿದ್ದಾರೆ. ಮೇಲ್ಭಾಗದಲ್ಲಿ ಅವನ ಆಗಮನ ಎದುರು ನೋಡುತ್ತ ಹರ್ಷಿಸುತ್ತಿರುವ ಆಕಾಶವಾಸಿಗಳಿದ್ದಾರೆ.

ಈ ಗುಹೆಗಳಿಗೆ ಹರಿಸೇನನ ಮರಣಾನಂತರ ನೂರಾರು ಹೊಸ ಚಿತ್ರಗಳು ಸೇರಿವೆ. ದೇವಾಲಯಗಳ ನಡುವೆ ಮರಿದೇವಳಗಳು, ಗೋಪುರಗಳು ತಲೆಯೆತ್ತಿವೆ. ಪುಣ್ಯಾರ್ಜನೆಯ ಆಸೆಯಿಂದ ದುಡ್ಡಿದ್ದ ಹಲವರು ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಹೆಸರು ಕೆತ್ತಿಸಿಕೊಂಡಿದ್ದಾರೆ. 10ನೆ ಗುಹೆ ಒಂದರಲ್ಲೇ ಹಾಗೆ ಸೇರಿಸಲ್ಪಟ್ಟ 300ಕ್ಕಿಂತ ಹೆಚ್ಚು ಚಿತ್ರಗಳಿವೆ. ಅವುಗಳನ್ನು ಬರೆಸಿದವರ ಕುರಿತ ಶಾಸನ ಮಾಹಿತಿಗಳಿವೆ.

ಸಿಖಾಭದ್ರ ಎಂಬಾತ 'ತನ್ನ ತಾಯಿ ಮತ್ತು ಸೋದರನ ಗೌರವಾರ್ಥ' ಈ ಕಾರ್ಯದಲ್ಲಿ ಭಾಗಿಯಾದೆನೆಂದು ಹೇಳಿದ್ದಾನೆ. ಒಂದು ಸ್ತಂಭದ ಮೇಲೆ, 'ಗುರು ಸಚ್ಚಿವ ಅವರಿಗೆ ಈ ಅಮೂಲ್ಯ ಕೊಡುಗೆ. ಇದರ ಪುಣ್ಯವು ಸರ್ವಜನಹಿತಕ್ಕೆ ವಿನಿಯೋಗವಾಗಲಿ' ಎಂದು ಬರೆದಿದೆ. 26ನೆ ಗುಹೆಯ ದಾನಿ ಬುದ್ಧಭದ್ರ ಎಂಬ ಸನ್ಯಾಸಿ. ಆತ ಸಿರಿವಂತ. ಅವ ತನ್ನನ್ನು 'ರಾಜಸ್ನೇಹಿ' ಎಂದು ವರ್ಣಿಸಿಕೊಂಡಿದ್ದಾನೆ. ಮತ್ತೆ ಕೆಲ ಶಾಸನಗಳು ಹೀಗಿವೆ:
►'ಈ ಚೈತ್ಯವು ಒಂದು ಕಲ್ಪದವರೆಗೆ ಬಾಳುತ್ತದೆ (ಸ್ತಂಭದ ಮೇಲನ ಬರಹ)'

► 'ಜನನ, ತಾರುಣ್ಯ, ಸುಖಸಂಪತ್ತುಗಳೆಲ್ಲ ಕ್ಷಣಿಕ' ಎಂದು ತಿಳಿದು ಸಜ್ಜನ ಸಂತಸನ್ಯಾಸಿಗಳಿಗಾಗಿ ಹರಿಸೇನನ ಮಂತ್ರಿ ವರಾಹದೇವ ಇದನ್ನು ಕಟ್ಟಿಸಿದ. ಇದು ಇಂದ್ರನ ಅಮರಾವತಿಯಂತಿದೆ. ಒಂದೇಒಂದು ಕುಂದಿಲ್ಲದ ಈ ಗುಹೆ ಇಂದ್ರನ ಮಕುಟಮಣಿಯಾಗಿ ಆಚಂದ್ರಾರ್ಕವಾಗಿ ಬೆಳಗಲಿ' ಎಂದು ಹಾರೈಸಲಾಗಿದೆ.

►'ಇಲ್ಲಿ ಅರ್ಪಿಸಿದ ಪ್ರತಿ ಹೂವೂ ಮುಕ್ತಿದಾಯಕವಾಗಿದ್ದು ಸ್ವರ್ಗ, ಮೋಕ್ಷಗಳೆಂಬ ಫಲ ಕೊಡುತ್ತವೆ. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ಭೂಮಿಯ ಮೇಲಿರುವವರ ನೆನಪಿನಲ್ಲಿ ಹಸಿರಾಗಿರುತ್ತಾನೋ ಅಲ್ಲಿಯವರೆಗೆ ಆತ ಸ್ವರ್ಗದಲ್ಲಿರುತ್ತಾನೆ. ಆದ್ದರಿಂದ ಈ ಬೆಟ್ಟಗಳ ಮೇಲೆ ಸೂರ್ಯಚಂದ್ರರಿರುವ ತನಕ ಉಳಿಯುವ ಸ್ಮಾರಕಗಳ ನಿಲ್ಲಿಸಲಾಗಿದೆ'

ಪ್ರಾಚೀನ ಭಾರತದ ಆರ್ಟ್ ಗ್ಯಾಲರಿ

ಜೆಸಿಬಿ, ಡ್ರಿಲ್ಲರುಗಳಿರದ ಕಾಲದಲ್ಲಿ, ಹರಿತ ಅಯುಧಗಳೂ ಇರದ ಕಾಲದಲ್ಲಿ ಬೃಹತ್ ಶಿಲಾಬೆಟ್ಟಗಳಲ್ಲಿ ಗುಹೆಗಳನ್ನು ಹೇಗೆ ಕೊರೆದರು? ಸಾವಿರಾರು ವರ್ಷವಾದರೂ ಮಾಸದ ಚಿತ್ರಗಳನ್ನು, ಬಣ್ಣಗಳನ್ನು ಅದು ಹೇಗೆ ತಯಾರಿಸಿದರು? ಇದು ಹಲವರ ಕುತೂಹಲದ ಪ್ರಶ್ನೆಯಾಗಿ ಸುದೀರ್ಘ ವಿಶ್ಲೇಷಣೆಗೆ ಕಾರಣವಾಯಿತು. ಅರೆಬರೆ ಮಾಡಿ ಬಿಟ್ಟ, ಕೆಲಸ ನಿಲ್ಲಿಸಿದ ಮೂರ್ನಾಲ್ಕು ಗುಹೆಗಳನ್ನು ನೋಡಿದಾಗ ಅಜಂತಾ ಗುಹೆಗಳನ್ನು ಮೇಲಿನಿಂದ ಕೆಳಗೆ ಕೆತ್ತಲಾಗಿದೆ; ಮೊದಲು ಮೇಲೊಂದು ಕಾಲುವೆ ಕೊರೆದು ನಂತರ ಕೆಳಗೆ ಕೊರೆಯುತ್ತ ಹೋಗಲಾಗಿದೆ ಎಂದು ತಿಳಿದುಬಂತು. ಮೇಲಿಂದ ಕೆಳಗೆ ಕೆತ್ತುತ್ತ, ಶಿಲ್ಪಗಳ ಮೂಡಿಸುತ್ತ, ಮುಂಭಾಗಕ್ಕೊಂದು ಭವ್ಯ ಪ್ರವೇಶ ಕೆತ್ತಿ ಬಿಡಿಸುತ್ತ ಕೊನೆಗೆ ಗುಹೆ ಪೂರ್ಣಗೊಂಡಾದ ಮೇಲೆ ವರ್ಣಚಿತ್ರ ಕಲಾವಿದರು ಚಿತ್ರ ಬಿಡಿಸಿದ್ದಾರೆ.

ಅಜಂತಾದಲ್ಲಿ ಚಿತ್ರಗಳು ಅರಳಿದ ಕಾಲ ಭಾರತೀಯ ಚಿತ್ರಕಲೆಯ ಸುವರ್ಣ ಯುಗ. ಪ್ರಾಚೀನರ ಆರ್ಟ್ ಗ್ಯಾಲರಿಯಂತಿರುವ ಈ ಗುಹಾದೇವಾಲಯಗಳು ಭಾರತೀಯ ಚಿತ್ರ ಕಲಾವಿದರು ಜನಸಮೂಹ ಚಿತ್ರಿಸುವಲ್ಲಿ ಹೊಂದಿದ್ದ ಪರಿಣತಿಯನ್ನು ಎತ್ತಿ ತೋರಿಸುತ್ತವೆ. ಹುಬ್ಬು, ಗಲ್ಲ, ತುಟಿ, ಕಣ್ಣುಗಳಿಗೆ ವಿಶೇಷ ಒತ್ತು ಕೊಟ್ಟು ಬಣ್ಣ ಹಾಕುವ ಮೂಲಕ ಭಾವಭಂಗಿಗಳಿರುವ ಮೂರು ಆಯಾಮಗಳ ಚಿತ್ರ ಬಿಡಿಸಿರುವುದು ವಿಶೇಷವಾಗಿದೆ. ವರ್ಣಚಿತ್ರಗಳು ದೇಹದ ಚೆಲುವನ್ನು ಸಂಭ್ರಮಿಸುತ್ತಿವೆಯೋ ಎನ್ನುವಂತೆ ಇವೆ. ಮೈಕೈ ತುಂಬಿಕೊಂಡ ಗಂಡುಹೆಣ್ಣುಗಳ ಪ್ರೇಮ, ಸಾಂಗತ್ಯ, ಬೇಟೆ, ಸನ್ಯಾಸ, ಯುದ್ಧ, ಕಾಮಚೇಷ್ಟೆಗಳೆಲ್ಲ ಚಿತ್ರಿತಗೊಂಡಿವೆ. ಬುದ್ಧನ ಜೀವನ ವಿವರಗಳು, ಅವನ ಹಿಂದಿನ ಜನ್ಮಗಳ ಜಾತಕ ಕತೆಗಳು ಚಿತ್ರವಾಗಿ, ಶಿಲ್ಪವಾಗಿ ಅರಳಿವೆ. ಆಭರಣಗಳಿದ್ದ ಕಡೆ ಮಣಿಗಳೇ ಕೂರಿಸಲ್ಪಟ್ಟಿವೆ!

ಆಗ ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಧಾರೆಯ ಕಲಾವಿನ್ಯಾಸ ಚಾಲ್ತಿಯಲ್ಲಿದ್ದಿ ರಬಹುದು. ಅಜಂತಾ ಗುಹೆಗಳಲ್ಲಿ ದೇಶದೆಲ್ಲೆಡೆಯ ನುರಿತ ಚಿತ್ರ ಕಲಾವಿದರು ಕೆಲಸ ಮಾಡಿದ್ದಾರೆ. ಕೆತ್ತಿದ ಗುಹೆಗಳ ಗೋಡೆ, ಕಂಬ, ಸೂರುಗಳಿಗೆ ಒಂದೇ ಸಲ ಮಣ್ಣುಗಾರೆ-ಸುಣ್ಣಗಾರೆ ಮೆತ್ತಿ, ಒಣಗಿಸಿ, ಚಿತ್ರ ಬರೆವ ಕೆಲಸ ಮಾಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ದೇಶದೆಲ್ಲೆಡೆಯ ನೂರಾರು ಕಲಾವಿದರ ಸೇರಿಸಿ ಎರಡನೆಯ ಹಂತದ ಗುಹೆಗಳ ಚಿತ್ರದ ಕೆಲಸ ಮುಗಿಸಲಾಗಿದೆ.
ಚಿತ್ರಗಳನ್ನು ಒಣಗಾರೆ ಮೇಲೆ ಬರೆಯಲಾಗಿದೆ. ಮಣ್ಣುಗಾರೆ, ಸುಣ್ಣಗಾರೆ, ಜೇಡಿಗಾರೆ ಬಳಸಲಾಗಿದೆ. ನಯಸು ಕಲ್ಲು ಸಿಕ್ಕಲ್ಲಿ ತೆಳು ಗಾರೆ, ಒರಟು ಕಲ್ಲಿರುವಲ್ಲಿ ಕೆಲವು ಇಂಚುಗಳಷ್ಟು ದಪ್ಪದ ಗಾರೆ ಮೆತ್ತಲಾಗಿದೆ. ಮಣ್ಣಿನ ಜೊತೆ ಭತ್ತದ ಹೊಟ್ಟು, ಬೀಜಗಳು, ಗಿಡದ ನಾರುಗಳನ್ನೂ ಸೇರಿಸಲಾಗಿದೆ. ನೀರಿನಲ್ಲಿ ಬಣ್ಣ ಕಲೆಸಿ ಒಣಗಾರೆಯ ಮೇಲೆ ಮೆತ್ತಲಾಗಿದೆ. ಬಣ್ಣ ಕಲೆಸಿದ ಗುಂಡಿಯ ಗುರುತು ಕೆಳಗೆ ನೆಲದ ಮೇಲಿದೆ. ರೆಡ್ ಓಕರ್, ಯೆಲ್ಲೊ ಓಕರ್, ಗ್ರೀನ್ ಅರ್ಥ್, ಲೇಪಿಸ್ ಲಜುಲಿ, ಕಾರ್ಬನ್ ಬ್ಲ್ಯಾಕ್, ಶಂಖದ ಪುಡಿ ಮತ್ತು ಕ್ಯಾವೊಲಿನ್ ಸುಣ್ಣವನ್ನು ಬಣ್ಣಕ್ಕಾಗಿ ಬಳಸಲಾಗಿದೆ. ಚಿತ್ರಗಳ ಹೊರಾವರಣವನ್ನು ಕಾರ್ಬನ್ ಬ್ಲ್ಯಾಕ್ ಅಥವಾ ಕೆಂಪು �

Writer - ಡಾ. ಎಚ್. ಎಸ್. ಅನುಪಮಾ

contributor

Editor - ಡಾ. ಎಚ್. ಎಸ್. ಅನುಪಮಾ

contributor

Similar News