ಐಪಿಎಲ್‌ನಲ್ಲಿ 100 ವಿಕೆಟ್ ಪೂರೈಸಿದ ಝಹೀರ್ ಖಾನ್

Update: 2017-05-13 06:01 GMT

ಹೊಸದಿಲ್ಲಿ, ಮೇ 13: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 100ನೆ ವಿಕೆಟ್ ಪಡೆದ ಡೆಲ್ಲಿ ಡೇರ್ ಡೆವಿಲ್ಸ್ ನಾಯಕ ಝಹೀರ್ ಖಾನ್ ತಾನೀಗಲೂ ಭಾರತದ ಶ್ರೇಷ್ಠ ಎಡಗೈ ಬೌಲರ್ ಎಂದು ತೋರಿಸಿಕೊಟ್ಟಿದ್ದಾರೆ.

ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಪುಣೆಯ ಆರಂಭಿಕ ಆಟಗಾರ ಅಜಿಂಕ್ಯ ರಹಾನೆಯವರನ್ನು ಕ್ಲೀನ್‌ಬೌಲ್ಡ್ ಮಾಡಿದ ಝಹೀರ್ ಹೊಸ ಮೈಲುಗಲ್ಲು ತಲುಪಿದರು.

ಝಹೀರ್ ಐಪಿಎಲ್ ಇತಿಹಾಸದಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ 9ನೆ ಆಟಗಾರ ಎನಿಸಿಕೊಂಡಿದ್ದಾರೆ. ಝಹೀರ್ 99ನೆ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಝಹೀರ್ ಐಪಿಎಲ್‌ನಲ್ಲಿ 100 ವಿಕೆಟ್ ಪೂರೈಸಿದ ಭಾರತದ ಏಳನೆ ಆಟಗಾರನಾಗಿದ್ದಾರೆ. 125 ಪಂದ್ಯಗಳಲ್ಲಿ 134 ವಿಕೆಟ್‌ಗಳನ್ನು ಪಡೆದಿರುವ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ 107 ಪಂದ್ಯಗಳಲ್ಲಿ 152 ವಿಕೆಟ್‌ಗಳನ್ನು ಪಡೆಯುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧಕನಾಗಿದ್ದಾರೆ.

 50 ವಿಕೆಟ್ ಕ್ಲಬ್‌ಗೆ ಸೇರಿದ ಜೈದೇವ್ ಉನದ್ಕಟ್:

ಉತ್ತಮ ಫಾರ್ಮ್ ಮುಂದುವರಿಸಿದ ಪುಣೆ ತಂಡದ ಮಧ್ಯಮ ವೇಗದ ಬೌಲರ್ ಜೈದೇವ್ ಉನದ್ಕಟ್ ಐಪಿಎಲ್‌ನಲ್ಲಿ 50 ವಿಕೆಟ್ ಪೂರೈಸಿದರು. ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್(3) ವಿಕೆಟ್ ಪಡೆದಿದ್ದ ಉನದ್ಕಟ್ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದರು. ಐಪಿಎಲ್‌ನಲ್ಲಿ 50 ವಿಕೆಟ್ ಪಡೆದ ಭಾರತದ 27ನೆ ಆಟಗಾರ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News